ADVERTISEMENT

ಮಲ್ಪೆಯಲ್ಲಿ ‘ಕಾರ್ಗಿಲ್‌’ ಕಾರ್ಮೋಡ: ಮತ್ತೆ ಸಂಕಷ್ಟದಲ್ಲಿ ಮತ್ಸೋದ್ಯಮ

ಬಲೆಗೆ ಬೀಳುತ್ತಿವೆ ತಿನ್ನಲು ಯೋಗ್ಯವಲ್ಲದ ಮೀನು

ಬಾಲಚಂದ್ರ ಎಚ್.
Published 4 ಅಕ್ಟೋಬರ್ 2019, 11:24 IST
Last Updated 4 ಅಕ್ಟೋಬರ್ 2019, 11:24 IST
ಮಲ್ಪೆ ಬಂದರಿನಲ್ಲಿ ಕಾರ್ಗಿಲ್‌ ಮೀನುಗಳನ್ನು ತುಂಬುತ್ತಿರುವ ಮೀನುಗಾರರು
ಮಲ್ಪೆ ಬಂದರಿನಲ್ಲಿ ಕಾರ್ಗಿಲ್‌ ಮೀನುಗಳನ್ನು ತುಂಬುತ್ತಿರುವ ಮೀನುಗಾರರು   

ಉಡುಪಿ: ಹವಾಮಾನ ವೈಪರೀತ್ಯದ ಬೆನ್ನಲ್ಲೇ ಕರಾವಳಿ ಮತ್ಸೋದ್ಯಮಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಈ ಬಾರಿಯಾದರೂ ಮೀನುಗಾರಿಕೆ ಲಾಭದಾಯಕವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಕಾರಣ, ಕಾರ್ಗಿಲ್‌ ಹಾಗೂ ಜೆಲ್ಲಿ (ಲೋಳೆ) ಮೀನುಗಳ ಹಾವಳಿ.

ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ತರಹೇವಾರಿ ಮೀನುಗಳನ್ನು ಹೊತ್ತುತರುವ ಬದಲು ತಿನ್ನಲು ಯೋಗ್ಯವಲ್ಲದ ಕಾರ್ಗಿಲ್‌ ಹಾಗೂ ಜೆಲ್ಲಿ ಮೀನುಗಳನ್ನು ಹೊತ್ತು ಬರುತ್ತಿವೆ. ಈ ಮೀನುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಪಿಶ್‌ಮಿಲ್‌ಗಳು ಕೆ.ಜಿಗೆ ₹ 12ರಂತೆ ಖರೀದಿಸುತ್ತವೆ ಎನ್ನುತ್ತಾರೆ ಬೋಟ್ ಮಾಲೀಕ ದಯಾನಂದ ಕೋಟ್ಯಾನ್‌.

ಈ ಬಾರಿ ಪ್ರತಿಯೊಂದು ಬೋಟ್‌ಗೂ ಕನಿಷ್ಠ 1 ಟನ್‌ನಷ್ಟು ಕಾರ್ಗಿಲ್‌ ಮೀನುಗಳು ಸಿಕ್ಕಿವೆ. ಬರಿಗೈಲಿ ಮರಳುವ ಬದಲು ಕೂಲಿಯ ಖರ್ಚಿಗಾದರೂ ಆಗಲಿ ಎಂಬ ಕಾರಣಕ್ಕೆ ಹೊತ್ತು ತಂದಿದ್ದೇವೆ ಎಂದು ನಿರಾಸೆ ವ್ಯಕ್ತಪಡಿಸಿದರು ಕೋಟ್ಯಾನ್‌.

ADVERTISEMENT

ಆಗಸ್ಟ್‌ನಿಂದ ನವೆಂಬರ್‌ವರೆಗಿನ ಅವಧಿ ಮೀನುಗಾರಿಕೆಗೆ ಸುಗ್ಗಿ ಸಮಯ. ಸಾಮಾನ್ಯವಾಗಿ ಈ ಋತುವಿನಲ್ಲಿ ರಫ್ತು ಮಾಡಲು ಯೋಗ್ಯವಾದಂತಹ ಅಂಜಲ್‌, ಪಾಂಪ್ಲೆಂಟ್‌, ಬಂಗುಡೆ, ಬೊಂಡಾಸ್‌, ರಿಬ್ಬನ್‌ ಬೊಂಡಾಸ್‌ ಮೀನುಗಳು ಹೇರಳವಾಗಿ ದೊರೆಯುತ್ತವೆ. ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಹೆಚ್ಚಾಗಿದ್ದು, ಒಂದಷ್ಟು ಲಾಭ ಸಿಗುತ್ತಿತ್ತು. ಆದರೆ, ಈ ಬಾರಿ ಬಲೆ ಬೀಸಿದರೆ ಕಾರ್ಗಿಲ್‌ ಹಾಗೂ ಜೆಲ್ಲಿಗಳೇ ಸಿಗುತ್ತಿವೆ ಎಂದು ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಕೃಷ್ಣ ಎಸ್‌.ಸುವರ್ಣ ಬೇಸರ ವ್ಯಕ್ತಪಡಿಸಿದರು.

ಲಕ್ಷದ್ವೀಪದಂತಹ ಕಡೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಕಡುಕಪ್ಪುಬಣ್ಣದ ಕಾರ್ಗಿಲ್ ಮೀನುಗಳು ಚಂಡಮಾರುತ ಬೀಸಿದಾಗ ಪಥ ಬದಲಿಸುತ್ತವೆ. ಹಿಂಡು ಹಿಂಡಾಗಿ ಕರಾವಳಿ ತೀರಗಳತ್ತ ನುಗ್ಗುತ್ತವೆ. ಇವುಗಳು ಹೆಚ್ಚಾಗಿ ಕಾಣಿಸಿಕೊಂಡರೆ ಮೀನಿನ ಕ್ಷಾಮ ಎದುರಾಗಿದೆ ಎಂದರ್ಥ ಎನ್ನುತ್ತಾರೆ ಸುವರ್ಣ.

ಕಾರ್ಗಿಲ್‌ ಮೀನುಗಳಿಗೆ ಹರಿತವಾದ ಹಲ್ಲುಗಳಿದ್ದು, ಇತರೆ ಜಾತಿಯ ಮೀನುಗಳ ಮೇಲೆ ದಾಳಿ ಮಾಡುತ್ತವೆ. ಈ ಕಾರಣಕ್ಕೆ ಉತ್ತಮ ತಳಿಯ ಮೀನುಗಳು ಹೆದರಿ ವಲಸೆ ಹೋಗುತ್ತವೆ. ವಿಪರೀತ ವಾಸನೆಯ ಕಾರಣಕ್ಕೆ ಇತರೆ ಮೀನುಗಳ ಜತೆ ಬೆರೆಸದೆ, ಪ್ರತ್ಯೇಕವಾಗಿ ತರಬೇಕು. ಗೊಬ್ಬರ ಬಿಟ್ಟರೆ ಯಾವುದಕ್ಕೂ ಕಾರ್ಗಿಲ್‌ ಪ್ರಯೋಜನವಿಲ್ಲ ಎನ್ನುತ್ತಾರೆ ಮೀನುಗಾರ ದಯಾನಂದ ಕೋಟ್ಯಾನ್‌.

ನೋಡಲು ಸುಂದರವಾಗಿರುವ ಆಕಾಶಬುಟ್ಟಿ ಮಾದರಿಯನ್ನು ಹೋಲುವ ಜೆಲ್ಲಿ ಮೀನುಗಳು ಇತರೆ ಮೀನಿನ ಮರಿಗಳನ್ನು ತಿಂದುಹಾಕುತ್ತವೆ. ಬಲೆಗೆ ಅಂಟಿಕೊಂಡರೆ ಬಿಡಿಸಲು ಕಷ್ಟ. ಬರಿಗೈಲಿ ಬಿಡಿಸಿದರೆ ತುರಿಕೆಯಾಗುತ್ತದೆ. ಈ ಬಾರಿ ಹೇರಳವಾಗಿ ಬಲೆಗೆ ಸಿಗುತ್ತಿದ್ದು, ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ ಎಂದು ಮೀನುಗಾರರು ನೋವು ತೋಡಿಕೊಂಡರು.

ಮೀನಿನ ಕ್ಷಾಮ: ಆತಂಕ
ಹಿಂದೆಂದೂ ಮೀನುಗಾರಿಕೆ ಇಷ್ಟೊಂದು ಸಂಕಷ್ಟಕ್ಕೆ ಸಿಲುಕಿರಲಿಲ್ಲ. ಅಕ್ಟೋಬರ್ ಅವಧಿಯಲ್ಲಿ ಬಂದರಿನಲ್ಲಿ ಶೇ 90ರಷ್ಟು ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿರುತ್ತಿದ್ದವು. ಈ ಬಾರಿ ಶೇ 50ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿಕೊಂಡಿವೆ. ಎರಡ್ಮೂರು ವರ್ಷಗಳಿಂದ ಮೀನಿಗೆ ಬರ ಇದೆ. ದೊಡ್ಡ ಬೋಟ್‌ಗಳು ಸಮುದ್ರಕ್ಕಿಳಿದರೆ ₹ 4 ರಿಂದ ₹ 5 ಲಕ್ಷ ಖರ್ಚಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಲಾಭ ಇರಲಿ, ಅಸಲು ನೋಡಲು ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದರು.

*
ಕಡಲಿನಲ್ಲಿ ಪ್ಲಾಸ್ಟಿಕ್‌ ಪ್ರಮಾಣ ಹೆಚ್ಚಾದಾಗ ಜೆಲ್ಲಿಫಿಶ್‌ಗಳ ಸಂತತಿ ಹೆಚ್ಚಾಗುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಇವುಗಳು ಕಾಣಿಸಿಕೊಂಡರೆ ಮೀನುಗಾರಿಕೆಗೆ ಹಿನ್ನಡೆ ಖಚಿತ.
–ಕೃಷ್ಣ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ

ಮಲ್ಪೆ ಬಂದರಿನಲ್ಲಿ ರಾಶಿಹಾಕಲಾಗಿದ್ದ ಕಾರ್ಗಿಲ್‌ ಮೀನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.