ADVERTISEMENT

ಉಡುಪಿ | ಪಾರ್ಸೆಲ್‌ ಹೆಸರಿನಲ್ಲಿ ಮಹಿಳೆಗೆ ಮೋಸ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 4:12 IST
Last Updated 24 ಜೂನ್ 2024, 4:12 IST

ಉಡುಪಿ: ಪಾರ್ಸೆಲ್‌ನಲ್ಲಿ ಮಾದಕ ವಸ್ತು ಬಂದಿರುವುದಾಗಿ ಬೆದರಿಸಿ, ಮಹಿಳೆಯಿಂದ ಹಣ ಪಡೆದು ವಂಚಿಸಿರುವ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಾಯಕ ಪ್ರಾಧ್ಯಾಪಕಿ ಹಾಗೂ ಕುಂಜಿಬೆಟ್ಟು ನಿವಾಸಿ ನಮ್ರತಾ ಎಂಬುವವರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮಗೆ ಪಾರ್ಸೆಲ್‌ ಬಂದಿದ್ದು, ಅದರಲ್ಲಿ 5 ಇರಾನ್‌ನ ಪಾಸ್‌ಪೋರ್ಟ್‌, 5 ಡೆಬಿಟ್‌ ಕಾರ್ಡ್‌, ಎರಡು ಕೆ.ಜಿ. ಬಟ್ಟೆ ಮತ್ತು 150 ಗ್ರಾಂ ಮಾದಕವಸ್ತು ಪತ್ತೆಯಾಗಿದೆ. ಈ ಕುರಿತು ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಆನ್‌ಲೈನ್‌ನಲ್ಲಿ ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.

ಅದರಂತೆ ನಮ್ರತಾ ಅವರು ಸ್ಕೈಪ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಮುಂಬೈ ಪೊಲೀಸರ ಸೋಗಿನಲ್ಲಿ ಇನ್ನೊಬ್ಬ ವ್ಯಕ್ತಿ ವಿಡಿಯೊ ಕರೆ ಮಾಡಿ, ನಮ್ರತಾ ಅವರ ಆಧಾರ್‌ ಕಾರ್ಡ್‌, ಬ್ಯಾಂಕ್‌ ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆದಿದ್ದ. ಅನಂತರ ₹7.90ಲಕ್ಷ ಹಣವನ್ನು ಅಪರಿಚಿತ ವ್ಯಕ್ತಿಯು ತನ್ನ ಖಾತೆಗೆ ವರ್ಗಾಹಿಸಿಕೊಂಡು ಮೋಸ ಮಾಡಿರುವುದಾಗಿ ನಮ್ರತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ADVERTISEMENT

ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ: ಮಣಿಪಾಲದ ಎಂಐಟಿಯ ಪಿಎಚ್‌.ಡಿ ವಿದ್ಯಾರ್ಥಿನಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರಿನ ಕೋಡಿಕಲ್‌ ಜೆ.ಬಿ. ಲೊಬೊ ರಸ್ತೆಯ ನಿವಾಸಿ ಬಸವಕುಮಾರ್‌ ಎಂಬುವವರ ಪುತ್ರಿ ವೈದೇಹಿ (26) ಆತ್ಮಹತ್ಯೆ ಮಾಡಿಕೊಂಡವರು.

ಬಯೋ ಮೆಡಿಕಲ್‌ ವಿಭಾಗದಲ್ಲಿ ಪಿಎಚ್‌.ಡಿ ಅಧ್ಯಯನ ನಡೆಸುತ್ತಿದ್ದ ಇವರು ಎಂಐಟಿ ಕ್ವಾರ್ಟರ್ಸ್‌ನ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.