ADVERTISEMENT

ಕಲಾವಿದರಿಗೆ ಜೀವನೋಪಾಯ ಕಲ್ಪಿಸುವ ಚಿಕ್ಕಮೇಳ

ಯಕ್ಷಗಾನ ಉಳಿವಿಗೆ, ಉದಯೋನ್ಮುಖ ಕಲಾವಿದರಿಗೆ ವೇದಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:11 IST
Last Updated 8 ಜುಲೈ 2024, 7:11 IST
ಕರಾವಳಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿರುವ ಚಿಕ್ಕಮೇಳ.
ಕರಾವಳಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮನೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿರುವ ಚಿಕ್ಕಮೇಳ.   

ಬ್ರಹ್ಮಾವರ: ಕರಾವಳಿಯಲ್ಲಿ ನವೆಂಬರ್‌ನಿಂದ ಮೇ ತನಕ ಯಕ್ಷಗಾನ ಮೇಳಗಳು ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ತಿರುಗಾಟ ನಡೆಸಿ ಪ್ರದರ್ಶನ ನೀಡಿ ಮಳೆಗಾಲದಲ್ಲಿ ವಿಶ್ರಾಂತಿ ಪಡೆಯುವುದು ರೂಢಿ. ಪ್ರಸಿದ್ಧ ಕಲಾವಿದರು ತಂಡ ಕಟ್ಟಿಕೊಂಡು ಮಳೆಗಾಲದ ತಿರುಗಾಟವಾಗಿ ಮುಂಬೈ, ಬೆಂಗಳೂರು, ಹುಬ್ಬಳ್ಳಿ, ಬೇರೆ ರಾಜ್ಯ, ವಿದೇಶದಲ್ಲಿ ಪ್ರದರ್ಶನದಲ್ಲಿ ತಲ್ಲೀನರಾಗಿದ್ದರೆ, ಉದಯೋನ್ಮುಖ ಕಲಾವಿದರು ಚಿಕ್ಕಮೇಳ ಕಟ್ಟಿಕೊಂಡು ಊರಿನಲ್ಲಿ ತಿರುಗಾಟ ಮಾಡುತ್ತ ಕಲಾಸಕ್ತರ ಮನೆಯ ಅಂಗಳ, ಚಾವಡಿಯಲ್ಲಿ ಆಟ ಆಡುತ್ತಾರೆ.

ಮುಮ್ಮೇಳ ಮತ್ತು ಹಿಮ್ಮೇಳದ ಕಲಾವಿದರು ಚಿಕ್ಕ ತಂಡ ಕಟ್ಟಿಕೊಂಡು ಪೌರಾಣಿಕ ಪ್ರಸಂಗಗಳ ತುಣುಕುಗಳನ್ನು ಮನೆ ಮನೆಗಳಲ್ಲಿ ಪ್ರದರ್ಶಿಸುತ್ತ ಕಲೆಗೊಂದು ಮರುಚೈತನ್ಯ ನೀಡುತ್ತಿದ್ದಾರೆ. ಭಾಗವತರು, ಚೆಂಡೆ–ಮದ್ದಳೆ ವಾದಕರು, ಸ್ತ್ರೀ–ಪುರುಷ ಪಾತ್ರಧಾರಿ, ಪ್ರಚಾರಕರು ಚಿಕ್ಕಮೇಳದಲ್ಲಿ ಇರುತ್ತಾರೆ. ಒಂದು ಮನೆಯಲ್ಲಿ ಚಿಕ್ಕಮೇಳದ ತಂಡ ಮನೆ ಮಂದಿ ಬೇಡಿಕೆಯಂತೆ 10ರಿಂದ 15 ನಿಮಿಷ ಪ್ರದರ್ಶನ ನೀಡುತ್ತದೆ. ಸಂಜೆ 6ಕ್ಕೆ ಕಲಾಪ್ರಯಾಣ ಆರಂಭಗೊಂಡು ರಾತ್ರಿ 10ರ ಸುಮಾರಿಗೆ ತಿರುಗಾಟ ಸಮಾಪನೆಗೊಳಿಸುತ್ತಾರೆ.

ಶ್ರೀನಿವಾಸ ಕಲ್ಯಾಣ, ರತಿ ಕಲ್ಯಾಣ, ಸುಧನ್ವ ಕಾಳಗ, ಶ್ರೀಕೃಷ್ಣ ಪಾರಿಜಾತ, ಸುಭದ್ರ ಕಲ್ಯಾಣ, ಪಂಚವಟಿ, ಭೀಷ್ಮ ವಿಜಯ ಮುಂತಾದ ಪ್ರಸಂಗಳಿಂದ ಆಯ್ದು ಪ್ರದರ್ಶನ ನೀಡುವುದು ವಾಡಿಕೆ.

ADVERTISEMENT

ಸಂಜೆಯ ತಿರುಗಾಟಕ್ಕೆ ಹೊರಡುವ ಮೊದಲು ತಂಡದ ಸದಸ್ಯರು ಊರಿನ ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಚಿಕ್ಕಮೇಳ ಪ್ರದರ್ಶನದ ಸಂಪ್ರದಾಯ ಮತ್ತು ನಿಯಮಾವಳಿಗಳ ಕರಪತ್ರಗಳನ್ನು ಹಂಚುತ್ತಾರೆ. ಮೇಳ ಬರುವ ನಿಗದಿತ ಸಮಯ ಹೇಳಿ ಬರುತ್ತಾರೆ. ಮನೆ ಮಂದಿ ಚಿಕ್ಕಮೇಳದ ಗಣಪತಿ ದೇವರಿಗೆ ಅಕ್ಕಿ, ತೆಂಗಿನಕಾಯಿ ಸಮರ್ಪಿಸಿ ಇಡುತ್ತಾರೆ. ಯಕ್ಷಗಾನವು ಬೆಳಕಿನ ಸೇವೆ ಎಂಬ ಗೌರವ ಇದ್ದ ಕಾರಣದಿಂದ ದೀಪ ಹಚ್ಚಿ ಇಡುತ್ತಾರೆ. ಮನೆಯ ಚಾವಡಿಯೇ ರಂಗಸ್ಥಳವಾಗಿ, ಮನೆ ಮಂದಿಯೇ ಪ್ರೇಕ್ಷಕರಾಗಿ ಯಕ್ಷಗಾನದ ಪ್ರಸಂಗದ ತುಣುಕನ್ನು ಸವಿಯುತ್ತಾರೆ. ಆಟ ಮುಗಿದ ಬಳಿಕ ಮನೆ ಯಜಮಾನ ನೀಡಿದ ಕಾಣಿಕೆ ಪಡೆದು ಕಲಾವಿದರು ಮುಂದಿನ ಮನೆಗೆ ಸಾಗುತ್ತಾರೆ.

ವೇಷಭೂಷಣದ ಬಾಡಿಗೆ, ತಿರುಗಾಡಲು ಬಳಸಿಕೊಂಡಿರುವ ವಾಹನದ ಬಾಡಿಗೆ ಎಲ್ಲವೂ ಕಳೆದು ಸ್ವಲ್ಪ ಹಣ ಕಲಾವಿದರುಗಳಿಗೆ ಉಳಿಯುತ್ತದೆ. ಚಿಕ್ಕಮೇಳದ ಮಳೆಗಾಲದ ತಿರುಗಾಟದಿಂದ ಕಲೆಯ ಪ್ರಚಾರವು ಆಗುವುದಲ್ಲದೆ, ಜನರಲ್ಲಿ ಕಲಾಸಕ್ತಿ ಮೂಡಿಸುತ್ತಿದೆ.

ಹಿಂದೂ ಸಂಸ್ಕೃತಿಯ ಗಂಡುಕಲೆಯಾದ ಯಕ್ಷಗಾನದ ಉಳಿವಿಗಾಗಿ ಬಹಳ ವರ್ಷಗಳಿಂದ ಬರುತ್ತಿರುವ ಸೇವೆಯ ಚಿಕ್ಕಮೇಳ,  ಹಿಂದೂ ಬಾಂಧವರ ಮನಸಂಕಲ್ಪ ಸಿದ್ಧಿ ದೊರಕಲೆಂದು ಪ್ರಾರ್ಥಿಸಿ ಮಳೆಗಾಲದಲ್ಲಿ 2 ತಿಂಗಳು ಪ್ರದರ್ಶನ ನೀಡುತ್ತಿದ್ದೇವೆ ಎಂದು ಅನಂತಪದ್ಮನಾಭ ಚಿಕ್ಕಮೇಳದ ಸಂಚಾಲಕ ಬಿದ್ಕಲ್‌ಕಟ್ಟೆಯ ಗಣೇಶ ಬಿ.ಕೆ. ಹೇಳುತ್ತಾರೆ.

ವೃತ್ತಿ ವಿರಾಮದಲ್ಲಿ ಇರುವ ಕಲಾವಿದರ ಬದುಕೂ ಸಾಗುತ್ತದೆ. ಅಲ್ಲದೆ ಹೊಸ ಕಲಾವಿದರಿಗೆ ಕಲಾಭ್ಯಾಸ ಆಗಲು ಚಿಕ್ಕಮೇಳ ರಂಗ ತಾಲೀಮು ಆಗಿದೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ನಡೆಯುವ ಈ ಸಣ್ಣಮಟ್ಟಿನ ಯಕ್ಷಗಾನ ಸೇವೆ ಆರಾಧನೆ, ಮನರಂಜನೆ ದೃಷ್ಟಿಯಿಂದ ಕರಾವಳಿಗರಿಗೆ ಶ್ರೇಷ್ಠವೆನಿಸಿದರೆ, ಕಲಾವಿದರಿಗೆ ಜೀವನ ನಿರ್ವಹಣೆಯ ಮಾರ್ಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.