ADVERTISEMENT

ಪೌರಕಾರ್ಮಿಕರು ನಗರದ ಆರೋಗ್ಯ ಕಾಪಾಡುವ ವೈದ್ಯರು: ಶಾಸಕ ಕೆ.ರಘುಪತಿ ಭಟ್‌

ಪೌರಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 10:24 IST
Last Updated 27 ಸೆಪ್ಟೆಂಬರ್ 2018, 10:24 IST
ಕಾರ್ಯಕ್ರಮದಲ್ಲಿ 5 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 5 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.   

ಉಡುಪಿ: ಪೌರ ಕಾರ್ಮಿಕರು ನಗರದ ಬೆನ್ನೆಲುಬಿದ್ದಂತೆ. ಸುಂದರ ನಗರವನ್ನು ಸೃಷ್ಟಿಸುವ ಶಕ್ತಿ ಪೌರಕಾರ್ಮಿಕರಲ್ಲಿ ಇದೆ. ವರ್ಷಪೂರ್ತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ ಎಂದು ಶಾಸಕ ಕೆ.ರಘುಪತಿ ಭಟ್‌ ತಿಳಿಸಿದರು.

ನಗರಸಭೆಯ ವತಿಯಿಂದ ಗುರುವಾರ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವವಂತಹ ವೈದ್ಯರಿದ್ದಂತೆ. ನಗರಸಭೆಯಲ್ಲಿ ಪೌರಯುಕ್ತರು ಇಲ್ಲದಿದ್ದರೂ ಪೌರಕಾರ್ಮಿಕರ ಸೇವೆ ಅತ್ಯಗತ್ಯ. ಪೌರಕಾರ್ಮಿಕ ಮುಕ್ತ ನಗರಸಭೆಯ ಕಲ್ಪನೆ ಅಸಾಧ್ಯ ಎಂದರು.

ADVERTISEMENT

ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರು ನಿಜವಾದ ನಾಯಕರು. ಅವರ ಪ್ರಾಮಾಣಿಕತೆಯ ಪ್ರತಿಫಲವಾಗಿ ಉಡುಪಿ ನಗರಸಭೆ ಸ್ವಚ್ಛ ಪ್ರಶಸ್ತಿ ಪಡೆದುಕೊಂಡಿದೆ. ಪೌರಕಾರ್ಮಿಕರು ವೃತ್ತಿಯ ಬಗ್ಗೆ ಕೀಳೆರಿಮೆ ಇಟ್ಟುಕೊಳ್ಳಬಾರದು ಎಂದು ಶಾಸಕರು ಸಲಹೆ ನೀಡಿದರು.

ಕಾರ್ಮಿಕರು ದುಶ್ಚಟಗಳಿಂದ ದೂರಾಗಿ ಮಕ್ಕಳ ಉತ್ತಮ ಭವಿಷ್ಯಕ್ಕೆ ಶ್ರಮಿಸಬೇಕು. ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಕಾಳಜಿ ವಹಿಸಬೇಕು. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಸಿರುವ ಪೌರ ಕಾರ್ಮಿಕರು ತಮ್ಮ ಕುಟುಂಬದ ಆರೋಗ್ಯ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಲಭ್ಯವಾಗುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರ ಪೌರ ಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ಸ್ವಚ್ಛತೆಯ ಅಧ್ಯಯನಕ್ಕಾಗಿ ಸಿಂಗಾಪುರ ಸೇರಿದಂತೆ ಹಲವು ದೇಶಗಳಿಗೆ ಪ್ರವಾಸಕ್ಕೆ ಕಳುಹಿಸುತ್ತಿದೆ. ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ಮಾಡಲಾಗುತ್ತಿತ್ತು. ಮುಂದೆ ಸರ್ಕಾರದ ಆದೇಶದಂತೆ ನಗರಸಭೆಯ ಸಂಪೂರ್ಣ ಸಚ್ಛತೆಯನ್ನು ಖಾಯಂ ಪೌರ ಕಾರ್ಮಿಕರು ನಿರ್ವಹಿಸಬೇಕಾಗುತ್ತದೆ. 700 ಜನರಿಗೆ ಒಬ್ಬರು ಪೌರ ಕಾರ್ಮಿಕರನ್ನು ನೇಮಕ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ 5 ಮಂದಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರಸಭೆ ಪೌರಾಯುಕ್ತ ಜನಾರ್ಧನ್‌, ಪರಿಸರ ಎಂಜಿನಿಯರ್‌ ರಾಘವೇಂದ್ರ, ಆದರ್ಶ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರಶೇಖರ್‌, ಉದ್ಯಮಿ ಜೆರಿ ವಿನ್ಸೆಂಟ್‌ ಡಯಾಸ್‌, ಗಣೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.