ಉಡುಪಿ: ನಿಸರ್ಗ ದತ್ತವಾಗಿ ದೊರಕಿರುವ ಸುಂದರವಾದ ಕಡಲ ತೀರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಪ್ರತಿ ನಾಗರಿಕರೂ ಕೈಜೋಡಿಸಬೇಕು. ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತ್ಯಜಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಕರೆ ನೀಡಿದರು.
ಮಲ್ಪೆ ಬೀಚ್‌ನಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಭೂ ವಿಜ್ಞಾನ ಇಲಾಖೆ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಹಾಗೂ ಸ್ಧಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಬೀಚ್ ಸ್ವಚ್ಛತೆ ಹಾಗೂ ಸುರಕ್ಷತೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ‘ಸ್ವಚ್ಛ ಸಾಗರ ಸುರಕ್ಷಿತ ಸಾಗರ’ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆಗಾಗಿ ಪೂರಕ ಪ್ರಯತ್ನಗಳು ಹಾಗೂ ಚಟುವಟಿಗಳು ದೈನಂದಿನ ದಿನಚರಿಯ ಭಾಗವಾಗಬೇಕು. ಇದರಿಂದ ಪರಿಸರ ಸ್ವಚ್ಛವಾಗುವ ಜತೆಗೆ ಕಡಲ ತೀರಗಳು ಸ್ವಚ್ಛ, ಸುಂದರ ಹಾಗೂ ಸುರಕ್ಷಿತವಾಗಿರುತ್ತವೆ. ಯುವಜನತೆ ಪರಿಸರ ರಕ್ಷಣೆಗೆ ಪೂರಕವಾಗಿ ತೊಡಗಿಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ ರಕ್ಷಣೆಯ ಅರಿವು ಮೂಡಿಸಬೇಕು. ಶಿಕ್ಷಕರು ಶಾಲೆಗಳಲ್ಲಿ ಪರಿಸರ ಪ್ರೇಮ ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾತನಾಡಿ, ಕಡಲ ತೀರದ ಸ್ವಚ್ಛತೆ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಪ್ರಕ್ರಿಯೆಯಾಗಬೇಕು. ಈ ಮೂಲಕ ಪ್ರಕೃತಿಯ ಜತೆಗೆ ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು.ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ಮಲ್ಪೆ ಬೀಚ್‌ನ ಹಿರಿಮೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಡಲ ತೀರದ ಸ್ವಚ್ಛತೆ ಹಾಗೂ ಸುರಕ್ಷತೆ ಅತಿ ಮಹತ್ವದ್ದು ಎಂದರು.
ಪ್ರತಿಯೊಬ್ಬರೂ ಸ್ವಯಂ ಪ್ರೇರಣೆ ಹಾಗೂ ಕಾಳಜಿಯಿಂದ ಸಮದ್ರ ತೀರಗಳ ಸ್ವಚ್ಛತಾ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಂಡು, ಪ್ರಕೃತಿದತ್ತವಾಗಿ ಬಂದಿರುವ ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯ ಅಧೀಕ್ಷಕ ಅಬ್ದುಲ್ ಅಹಮದ್, ಭಾರತೀಯ ತಟ ರಕ್ಷಣಾ ಪಡೆಯ ಕಮಾಂಡೆಂಟ್ ಅವಿನಾಶ್, ಪೌರಾಯುಕ್ತ ಡಾ.ಉದಯ್ ಕುಮಾರ್ ಶೆಟ್ಟಿ, ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಡಾ.ಆಶಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂದೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನೆಹರೂ ಯುವ ಕೇಂದ್ರದ ಯುವಜನ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.