ಉಡುಪಿ: ಬೆಳಿಗ್ಗೆ ಶಾಲೆಗೆ ಹೊರಟ ಮಕ್ಕಳು ಮರಳಿ ಮನೆಗೆ ಬರುವವರೆಗೂ ಹೆತ್ತ ಜೀವಗಳಿಗೆ ನೆಮ್ಮದಿ ಇರುವುದಿಲ್ಲ. ಮಳೆ ಬಿರುಸಾದರೆ, ಆತಂಕವೂ ಹೆಚ್ಚಾಗುತ್ತದೆ. ಪ್ರತಿವರ್ಷ ಮಳೆಗಾಲ ಬಂದಾಗ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೆರೆ ಭೀತಿ ಸೃಷ್ಟಿಯಾಗುತ್ತದೆ.
ಬೈಂದೂರು ಹಾಗೂ ಯಡ್ತರೆ ಮಧ್ಯೆ ಸಂಪರ್ಕ ಕಲ್ಪಿಸುವ ಕುಂಜಲ್ಲಿ ಬಳಿ ಅಪಾಯಕಾರಿ ಕಾಲುಸಂಕ ಇದೆ. ಮಳೆಗಾಲದಲ್ಲಿ ದುಸ್ವಪ್ನವಾಗಿ ಕಾಡುತ್ತದೆ. ನಿತ್ಯ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುತ್ತಾರೆ.
ಸ್ಥಳೀಯರು ಮರದ ದಿಮ್ಮಿಗಳನ್ನು ಜೋಡಿಸಿಟ್ಟು ಕಾಲುಸಂಕವನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮಳೆ ಜೋರಾಗುತ್ತಿದ್ದಂತೆ ನೀರಿನ ಮಟ್ಟ ಸಂಕದ ತಳ ತಲುಪಿ ಆತಂಕ ಸೃಷ್ಟಿಯಾಗುತ್ತದೆ. ಸೇತುವೆ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕೂಗಿಗೆ ಸ್ಪಂದನ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಬೈಂದೂರು ತಾಲ್ಲೂಕಿನ ಕಾಲ್ತೋಡು ಗ್ರಾಮದ ಕಪ್ಪಾಡಿ ಬಳಿಯೂ ಅಪಾಯಕಾರಿ ಕಾಲುಸಂಕ ಇದ್ದು, ಮಳೆಗಾಲದಲ್ಲಿ ಭೀತಿ ಆವರಿಸುತ್ತದೆ.
ಹೆಬ್ರಿಯ ನಕ್ಸಲ್ ಪೀಡಿತ ಕಬ್ಬಿನಾಲೆಯ ಮತ್ತಾವು ಗ್ರಾಮದ್ದೂ ಇದೇ ಕಥೆ. ಪ್ರತಿ ಮಳೆಗಾಲದಲ್ಲಿ ಮತ್ತಾವು ಗ್ರಾಮದ ಮನೆಗಳಿಗೆ ಹೋಗಲು ಮರದ ಪಾಪಿನ ಮೇಲೆ ಸರ್ಕಸ್ ಮಾಡಬೇಕು. ನಡೆಯುವಾಗ ಆಯತಪ್ಪಿ ಬಿದ್ದರೆ ಹೊಳೆಯಲ್ಲಿ ಕೊಚ್ಚಿ ಹೋಗಬೇಕಾಗುತ್ತದೆ. ನಕ್ಸಲ್ ಪ್ಯಾಕೇಜ್ ಅಥವಾ ಯಾವುದಾದರೂ ಒಂದು ಯೋಜನೆಯಡಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂಬ ಬೇಡಿಕೆ ಈಡೇರಿಲ್ಲ.
ಬ್ರಹ್ಮಾವರದ ಸಾಲಿಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿ ಪಾರಂಪಳ್ಳಿ ಪಡುಕೆರೆ ತೋಡ್ಕಟ್ಟು ಹೊಳೆಗೆ ಅಡ್ಡಲಾಗಿ ಮರದ ಸೇತುವೆ ನಿರ್ಮಿಸಲಾಗಿದೆ. ಪಡುಕೆರೆಯಿಂದ ಸಾಲಿಗ್ರಾಮಕ್ಕೆ ಹೋಗಬೇಕಾದರೆ ಈ ಮರದ ಸೇತುವೆಯನ್ನೇ ಬಳಸಬೇಕು. ಮರದ ಸೇತುವೆ ಶಿಥಿಲವಾಗಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.
ಈ ಬಾರಿಯೂ ನೆರೆ ಆತಂಕ
ಪಡುಬಿದ್ರಿಯ ಎರ್ಮಾಳು ಕಲ್ಸಂಕ ಚತುಷ್ಪಥ ಸೇತುವೆ ಕಾಮಗಾರಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ತುಂಬಿಸಿದ ಮಣ್ಣಿನಿಂದ 2018ರ ಮೇ 29ರಂದು ನೆರೆ ಸೃಷ್ಟಿಯಾಗಿತ್ತು. ಪರಿಣಾಮ ಪಾದೆಬೆಟ್ಟು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿ ಜಲಾವೃತಗೊಂಡು, ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಇಬ್ಬರು ಸಹೋದರಿಯರು ತೋಡಿಗೆ ಬಿದ್ದಿದ್ದರು. 9 ವರ್ಷದ ನಿಧಿ ಆಚಾರ್ಯ ನೀರಿನ ಸೆಳೆತಕ್ಕೆ ಸಿಕ್ಕು ಬಲಿಯಾಗಿದ್ದಳು. ಅಕ್ಕ ನಿಶಾಳನ್ನು ಸ್ಥಳೀಯರು ಕಾಪಾಡಿದ್ದರು. ಈ ಬಾರಿಯೂ ಹೆದ್ದಾರಿಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಕೊಂಡಿದ್ದು ನೆರೆ ಭೀತಿ ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.