ADVERTISEMENT

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ: ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 5:05 IST
Last Updated 13 ಏಪ್ರಿಲ್ 2022, 5:05 IST
   

ಉಡುಪಿ: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಶಾಂತ್ ಗೌಡಪ್ಪ ಪಾಟೀಲ ಎಂಬುವರು ದೂರು ನೀಡಿದ್ದು, ಸೆಕ್ಷನ್‌ 306 ಅಡಿಯಲ್ಲಿ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ದೂರಿನ ಸಾರಾಂಶ ಏನು?

ADVERTISEMENT

2020-21ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷ್ಮೀ ದೇವಿ ಜಾತ್ರೆ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಾಗಿತ್ತು. ಜಾತ್ರೆಯ ವಿಷಯ ತಿಳಿಸಿ ಗ್ರಾಮದಲ್ಲಿ ರಸ್ತೆ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಲಾಗಿತ್ತು.

ಆಗ ಸಚಿವರು ಈಶ್ವರಪ್ಪನವರು ‘ನೀವು ಕಾರ್ಯಕರ್ತರಾಗಿದ್ದು, ಕೆಲಸ ಶುರು ಮಾಡಿ, ಕಾಮಗಾರಿಗಳಿಗೆ ಎಷ್ಟೇ ಹಣ ವೆಚ್ಚವಾದರೂ ಪರವಾಗಿಲ್ಲ ಎಂದು ತಿಳಿಸಿದರು. ಊರಿನ ಪ್ರಮುಖರು ಹಾಗೂ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಂತೋಷ ಕೆ.ಪಾಟೀಲ್ ಅವರಿಗೆ ಕೆಲಸ ಪ್ರಾರಂಭಿಸಲು ಸೂಚಿಸಿದ್ದರು.

ಅದರಂತೆ ಸಂತೋಷ ಪಾಟೀಲ್ ಹಾಗೂ ಉಳಿದ ಗುತ್ತಿಗೆದಾರರು ಸೇರಿ ಸುಮಾರು ₹4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೆ ಪೂರ್ಣಗೊಳಿಸಿದರು. ಈ ಕಾಮಗಾರಿಗಳ ಬಿಲ್‌ಗಾಗಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಆಪ್ತರಾದ ಬಸವರಾಜ್, ರಮೇಶ್ ಅವರನ್ನು ಹಲವು ಬಾರಿ ಭೇಟಿಯಾಗಿ ಬಿಲ್‌ ಮಂಜೂರು ಮಾಡುವಂತೆ ವಿನಂತಿ ಮಾಡಲಾಗಿತ್ತು.

ಆದರೆ, ಅವರು, ಹಾಗೆಯೇ ಕೆಲಸ ಆಗುವುದಿಲ್ಲ, 40 ಪರ್ಸೆಂಟ್ ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದರು. ಕಮೀಷನ್ ವಿರುದ್ಧ ಬೆಳಗಾವಿ ಗುತ್ತಿಗೆದಾರರ ಸಂಘದಿಂದ ಸರ್ಕಾರಕ್ಕೆ ದೂರು ಸಲ್ಲಿಸಲಾಗಿತ್ತು. ಗುತ್ತಿಗೆದಾರರಾದ ಸಂತೋಷ ಪಾಟೀಲ್ ಮಾರ್ಚ್‌ನಲ್ಲಿ ಮಾದ್ಯಮಗಳ ಮುಂದೆಯೂ ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮೀಷನ್‌ಗೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದರು.

₹4 ಕೋಟಿ ಕಾಮಗಾರಿ ಹಣದ ಬಿಲ್ ಪಾಸ್ ಮಾಡದ ಕಾರಣ ಮುಂದಾಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಸಚಿವ ಈಶ್ವರಪ್ಪ ಮತ್ತು ಆಪ್ತರಾದ ರಮೇಶ್ ಮತ್ತು ಬಸವರಾಜ್ ವಿರುದ್ಧ ವಿಡಿಯೋ ಮಾಡಿದ್ದರು. 40 ಪರ್ಸೆಂಟ್ ಕಮಿಷನ್ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಹಾಗೂ ಬಿಜೆಪಿ ವರಿಷ್ಠರಿಗೆ, ಪ್ರಧಾನಿ ಕಚೇರಿ‌ಗೂ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಆದರೂ ಬಿಲ್ ಪಾಸ್ ಆಗಿರಲಿಲ್ಲ.

ಬಿಲ್‌ ಮಂಜೂರಾಗದ ಕಾರಣ ಮನನೊಂದ ಸಂತೋಷ್ ಪಾಟೀಲ್ ಮೊಬೈಲಿನಿಂದ ವಾಟ್ಸ್ ಆ್ಯಪ್‌ನಲ್ಲಿ ಡೆತ್ ನೋಟ್ ಸಂದೇಶವನ್ನು ಮಾದ್ಯಮಗಳಿಗೆ ಹಾಗೂ ಆಪ್ತರಿಗೆ ಕಳುಹಿಸಿ ಏ.11ರ ರಾತ್ರಿ 11ರಿಂದ 12ರ ಬೆಳಿಗ್ಗೆ 10ರ ನಡುವೆ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.