ಉಡುಪಿ: ವಿಧಾನಪರಿಷತ್‌ನ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ದಕ್ಷಿಣ ಕನ್ನಡ - ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯ ನಿಟ್ಟಿನಲ್ಲಿ ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಮಗೆ ಉತ್ತಮ ಅವಕಾಶವಿದೆ. ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 6,300 ಮಂದಿ ಮತದಾರರಿದ್ದಾರೆ. ಅವರನ್ನು ನೇರವಾಗಿ ಭೇಟಿಯಾಗಿ ಪಕ್ಷದ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡೋಣ ಎಂದರು.
ರಾಜಕೀಯವಾಗಿ ಈ ಚುನಾವಣೆ ಮುಖ್ಯವಾಗಿದೆ. ಕಾರ್ಯಕರ್ತರೇ ನಮಗೆ ಸ್ಫೂರ್ತಿ. ನಮ್ಮ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಿದರೆ ರಾಜು ಪೂಜಾರಿ ಅವರ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಎಲ್ಲಾ ಕಡೆಯಿಂದಲೂ ಕಾಂಗ್ರೆಸ್‌ಗೆ ತೊಂದರೆ ನೀಡುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಸೂಕ್ತ ಉತ್ತರ ನೀಡಲಿದೆ ಎಂದು ಹೇಳಿದ ಸಚಿವರು, ಉತ್ತರ ಭಾರತದಲ್ಲಿ ಕಾಂಗ್ರೆಸ್ ಸೋಲಿನ ನಡುವೆಯೂ ಪುಟಿದೇಳುವ ಕೆಲಸ ಮಾಡುತ್ತಿದೆ. ಈ ಉಪ ಚುನಾವಣೆ ರಾಜ್ಯ ರಾಜಕೀಯದ ಹೊಸ ದಿಕ್ಸೂಚಿಯಾಗಲಿ ಎಂದು ಹೇಳಿದರು.
ಸಭೆಯಲ್ಲಿ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಗೋಪಾಲ್ ಪೂಜಾರಿ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ, ಪ್ರಸಾದ್ ಕಾಂಚನ್, ಎಂ.ಎ. ಗಪೂರ್ ಉಪಸ್ಥಿತರಿದ್ದರು.
‘ಗೆಲುವಿಗೆ ಗ್ಯಾರೆಂಟಿ ಭರವಸೆ’
ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರೆಂಟಿಗಳಿಂದಾಗಿ ಜನರಿಗೆ ತುಂಬಾ ಪ್ರಯೋಜನವಾಗಿದೆ. ಇದರಿಂದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ರಾಜು ಪೂಜಾರಿ ಅವರು ಗೆಲ್ಲುವ ಪೂರ್ಣ ವಿಶ್ವಾಸ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲ ತಂತ್ರಗಾರಿಕೆಗಳನ್ನು ರೂಪಿಸಿಕೊಂಡಿದ್ದೇವೆ. ಪಕ್ಷದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷವು ಪಂಚಾಯಿತಿಗಳಿಗೆ ಶಕ್ತಿ ತಂದುಕೊಟ್ಟಿದೆ. ಹಿಂದೆ ಪಂಚಾಯಿತಿಗಳಿಗೆ ಒಂದು ವರ್ಷಕ್ಕೆ ₹5 ಲಕ್ಷ ಅನುದಾನ ಬರುತ್ತಿತ್ತು. ಇದು ನೀರಿನ ಬಿಲ್ ವಿದ್ಯುತ್ ಬಿಲ್ ಕಟ್ಟಲು ಸಾಕಾಗುತ್ತಿರಲಿಲ್ಲ. ಅಂತಹ ಪಂಚಾಯಿತಿಗಳಿಗೆ ಈಗ ವರ್ಷಕ್ಕೆ ₹2 ಕೋಟಿಯಿಂದ ₹5 ಕೋಟಿಯಷ್ಟು ಅನುದಾನ ನೀಡಲು ಉದ್ಯೋಗ ಖಾತರಿಯಿಂದ ಸಾಧ್ಯವಾಯಿತು ಎಂದು ಹೇಳಿದರು.
ಬಿಜೆಪಿಯವರು ಈ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಮತದಾರರ ಮನದಾಳದ ಮಾತು ಯಾರಿಗೂ ಅರ್ಥೈಸಲು ಸಾಧ್ಯವಿಲ್ಲ. ನಾವು ಊಹಿಸುವುದೇ ಬೇರೆಯಾಗಿರುತ್ತದೆ ಮತ್ತು ಮತದಾರರ ನಿರ್ಧಾರವೇ ಬೇರೆಯಾಗಿರುತ್ತದೆ ಎಂದು ತಿಳಿಸಿದರು.
ನಮ್ಮಲ್ಲಿ ಅನುದಾನ ಕೇಳುವ ಮೊದಲು ಬಿಜೆಪಿಯವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಲಿ. ಅತಿವೃಷ್ಟಿ ಅನಾವೃಷ್ಟಿ ಪರಿಹಾರವಾಗಿ ಕೇಂದ್ರ ಸರ್ಕಾರವು ಏನು ಕೊಟ್ಟಿದೆ ಎಂದು ಪ್ರಶ್ನಿಸಿದರು.
ಶೋಭಾ ಹೇಳಿಕೆ ಆಧಾರರಹಿತ: ಜಾರಿ ನಿರ್ದೇಶನಾಲಯದ (ಇ.ಡಿ) ಪರಿಶೋಧನೆಯ ಕಾರಣ ಮುಡಾ ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಶೋಭಾ ಅವರನ್ನು ಒಬ್ಬ ಮಹಿಳೆಯಾಗಿ ಗೌರವಿಸುವೆ. ಆದರೆ ಸುಳ್ಳು ಹೇಳುವುದನ್ನು ಸಹಿಸುವುದಿಲ್ಲ. ದಾಖಲೆಗಳನ್ನು ಸುಟ್ಟು ಹಾಕಿರುವುದನ್ನು ಅವರು ನೋಡಿದ್ದಾರಾ ಎಂದು ಪ್ರಶ್ನಿಸಿದರು.
ಇ.ಡಿ. ದಾಳಿಯೇ ರಾಜಕೀಯ ಪ್ರೇರಿತವಾದುದು. ರಾಜಭವನ ರಾಜ್ಯಪಾಲರು ತುಂಬಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರ್ಕಾರದ ಹುನ್ನಾರವಾಗಿದೆ ಎಂದರು.
‘ಕಾಂಗ್ರೆಸ್ ಅಭ್ಯರ್ಥಿ ಪರ ಮತದಾರರ ಒಲವು’
ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜು ಪೂಜಾರಿ ಅವರು ಈ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಯಾಗಿದ್ದು ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ಎರಡು ಜಿಲ್ಲೆಗಳ ಮತದಾರರು ರಾಜು ಪೂಜಾರಿ ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಪೂರ್ಣ ಅರಿವಿರುವ ರಾಜು ಪೂಜಾರಿ ಅವರು ಗೆದ್ದರೆ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.