ADVERTISEMENT

‘ಕೋವಿಶೀಲ್ಡ್ ಲಸಿಕೆಯಿಂದ ಪುರುಷ ಫಲವತ್ತತೆಗೆ ತೊಂದರೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 16:06 IST
Last Updated 13 ಸೆಪ್ಟೆಂಬರ್ 2022, 16:06 IST
   

ಉಡುಪಿ: ಕೋವಿಶೀಲ್ಡ್‌ ಲಸಿಕೆಯು ಪುರುಷರ ಫಲವತ್ತತೆ ಸಾಮರ್ಥ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂಬ ಅಂಶವನ್ನು ತಜ್ಞರು ಬಹಿರಂಗಪಡಿಸಿದ್ದಾರೆ.

ಮಣಿಪಾಲದ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ಈಚೆಗೆ ಭಾರತೀಯ ಫಲವತ್ತತೆ ತಜ್ಞರ ತಂಡ ನಡೆಸಿದ ಪ್ರಾಯೋಗಿಕ ಅಧ್ಯಯನದಲ್ಲಿ ಲಸಿಕೆ ಪಡೆದವರ ವೀರ್ಯಾಣುಗಳ ಗುಣಮಟ್ಟದಲ್ಲಿ ಬದಲಾವಣೆ ಕಂಡುಬಂದಿಲ್ಲ.

ವೀರ್ಯಾಣುಗಳ ಸಂಖ್ಯೆ, ಅವುಗಳ ಚಲನ ಶೀಲತೆ, ಗುಣಲಕ್ಷಣ ಹಾಗೂ ರಚನೆಯಲ್ಲಿಯೂ ಬದಲಾವಣೆಗಳು ಕಂಡುಬಂದಿಲ್ಲ. ಗರ್ಭಧಾರಣೆಗೆ ಯಾವ ಅಡ್ಡಿಯಾಗುವುದಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ADVERTISEMENT

ವರದಿಯ ಪ್ರಮುಖ ಅಂಶಗಳು ಸೆ.5ರಂದು ಇಂಗ್ಲೆಂಡ್‌ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಅಂಡ್ ಫರ್ಟಿಲಿಟಿ ಜರ್ನಲ್‌ನಲ್ಲಿಯೂ ಪ್ರಕಟಿಸಲಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ ವಿವಿ ತಿಳಿಸಿದೆ.

ಕೋವಿಡ್‌ ಲಸಿಕೆ ಪಡೆದರೆ ಸಂತಾನ ಫಲವತ್ತತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಲಸಿಕೆಯನ್ನು ಪಡೆಯದ 53 ಪುರುಷರ ವೀರ್ಯವನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು.

ಕೋವಿಡ್‌ ಲಸಿಕೆ ಹಾಕಿಸಿಕೊಂಡ 2 ತಿಂಗಳ ಬಳಿಕ ಮತ್ತೊಮ್ಮೆ ಅವರ ವೀರ್ಯವನ್ನು ಪರೀಕ್ಷೆ ಮಾಡಲಾಯಿತು. ವೀರ್ಯದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಎಂಬ ಅಂಶವನ್ನು ತಜ್ಞರು ವರದಿಯಲ್ಲಿ ದೃಢಪಡಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಣಿಪಾಲ ಅಕಾಡೆಮಿ ಆಫ್‌ ಹೈಯರ್ ಎಜುಕೇಷನ್‌ ಕುಲಪತಿ ಡಾ.ಎಂ.ಡಿ.ವೆಂಕಟೇಶ್‌, ಕೋವಿಡ್ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿದ್ದ ಪೂರ್ವಾಗ್ರಹ ಹೋಗಲಾಡಿಸಲು ಹಾಗೂ ಲಸಿಕೆ ಸುರಕ್ಷಿತ ಎಂಬ ಸತ್ಯವನ್ನು ತಿಳಿಸಲು ವರದಿ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.