ಉಡುಪಿ: ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯಲ್ಲಿ ಉತ್ಸವಗಳು, ಧಾರ್ಮಿಕ ಕಾರ್ಯಕ್ರಮಗಳು ನಿತ್ಯ ನಿರಂತರ. ಉಡುಪಿಯ ಕೃಷ್ಣಮಠ ಹಾಗೂ ಅಷ್ಠಮಠಗಳು ಧಾರ್ಮಿಕ ಉತ್ಸವಗಳ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದು ವರ್ಷವಿಡೀ ಕಾರ್ಯಕ್ರಮಗಳು ನಡೆಯುತ್ತವೆ.
ವರ್ಷಾರಂಭದಲ್ಲಿ ನಡೆದ ವೈಭವದ ತೆಪ್ಪೋತ್ಸವ, ಸಪ್ತೋತ್ಸವ, ಚೂರ್ಣೋತ್ಸವ ಹಾಗೂ ತ್ರಿರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಕಣ್ತುಂಬಿಕೊಂಡರು. ಉಡುಪಿ ಜಿಲ್ಲೆಯಾಗಿ 25 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ನಡೆದ ರಜತ ಮಹೋತ್ಸವ ಹಾಗೂ ಬೀಚ್ ಉತ್ಸವ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿತು.
ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಹಾಗೂ ಪರಶುರಾಮ ಥೀಂ ಪಾರ್ಕ್ ಅನ್ನು ಜ.27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ ಸದ್ಯ ವಿವಾದದ ಕೇಂದ್ರವಾಗಿದೆ.
ಫೆ.11 ಹಾಗೂ 12ರಂದು ಮೊದಲ ಬಾರಿಗೆ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಯಕ್ಷಗಾನ ಸಂಬಂಧಿ ಗೋಷ್ಠಿಗಳು, ಯಕ್ಷಗಾನ ಪ್ರದರ್ಶನ ಯಕ್ಷಾಭಿಮಾನಗಳ ಮನಸೂರೆಗೊಂಡಿತು.
ಮಣಿಪಾಲದ ಶಿವಪಾಡಿಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22ರಿಂದ ಮಾರ್ಚ್ 5ರವರೆಗೆ ನಡೆದ ಅತಿರುದ್ರ ಮಹಾಯಾಗ ಲಕ್ಷಾಂತರ ಭಕ್ತರನ್ನು ಸೆಳೆಯಿತು.
ಮಾರ್ಚ್ 15ರಂದು ಇತಿಹಾಸ ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವೈಭವದ ಶ್ರೀ ಮನ್ಮಹಾರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಏ.22ರಂದು ಜಿಲ್ಲೆಯಾದ್ಯಂತ ಮುಸ್ಲಿಮರು ಸಂಭ್ರಮದಿಂದ ಈದ್ ಉಲ್ ಫಿತ್ರ್ (ರಂಜಾನ್) ಹಬ್ಬ ಆಚರಿಸಿದರು. ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಮೇ 25ರಂದು ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ವಿಧಿಗಳಲ್ಲಿ ಒಂದಾದ ಅಕ್ಕಿ ಮುಹೂರ್ತವು ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶಿಷ್ಯರಾದ ಸುಶ್ರೀಂದ್ರತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಿತು. ಜೂನ್ 25ರಂದು ಕಟ್ಟಿಗೆ ಮುಹೂರ್ತ, ಡಿ6ರಂದು ಧಾನ್ಯ ಮುಹೂರ್ತ ನೆರವೇರಿತು.
ಸೆ.6 ಹಾಗೂ 7ರಂದು ಕೃಷ್ಣಮಠದಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನಡೆಯಿತು. ರಥಬೀದಿಯಲ್ಲಿ ಕೃಷ್ಣನ ಲೀಲಾ ವಿನೋದಾವಳಿಗಳನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಅಷ್ಟಮಿಯ ದಿನ ಮುದ್ದು ಕೃಷ್ಣ ವೇಷಧಾರಿಗಳು ಗಮನ ಸೆಳೆದರು.
ಅ.10ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಶೌರ್ಯ ರಥಯಾತ್ರೆಯಲ್ಲಿ ಹಲವು ಮಠಾಧೀಶರು ಭಾಗವಹಿಸಿದ್ದರು.
ಅ.15ರಿಂದ 9 ದಿನಗಳ ಕಾಲ ನವರಾತ್ರಿ ಅಂಗವಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ಸೇರಿದಂತೆ ಜಿಲ್ಲೆಯ ಪ್ರಮುಖ ದುರ್ಗಾಲಯಗಳಲ್ಲಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಭೇಟಿನೀಡಿ ದೇವರ ದರ್ಶನ ಪಡೆದರು. ಕೃಷ್ಣಮಠದಲ್ಲಿ ಕೃಷ್ಣನಿಗೆ 9 ದಿನ ನವ ದುರ್ಗೆಯರ ಅಲಂಕಾರ ಮಾಡಲಾಗಿತ್ತು.
ಅ.29ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೈದಾನದಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಡಿ.5ರಂದು ಬ್ರಹ್ಮಾವರ ತಾಲ್ಲೂಕಿನ ಕೋಟ ವಿವೇಕ ವಿದ್ಯಾಲಯ ಆವರಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಿತು. ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಷಷ್ಟ್ಯಬ್ದ ಅಭಿವಂದನಾ ಸಮಾರಂಭ ಡಿ.16ರಂದು ರಥಬೀದಿಯಲ್ಲಿ ನೆರವೇರಿತು. ಭಕ್ತರಿಂದ ಶ್ರೀಗಳಿಗೆ ಸುವರ್ಣಾಭಿಷೇಕ, ಪುಷ್ಪಾಭಿಷೇಕ ನಡೆಯಿತು.
ಡಿ.25ರಂದು ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ಮಸ್ ಆಚರಿಸಿದರು. ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.