ಬ್ರಹ್ಮಾವರ (ಉಡುಪಿ): ಮಹಿಳೆಯೊಬ್ಬರ ಮನೆಗೆ ನುಗ್ಗಿ ಅವರನ್ನು ಚುಡಾಯಿಸಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಕೇರಳದ ಕಾರ್ಮಿಕರೊಬ್ಬರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಕೇರಳದ ಕೊಲ್ಲಂನ ಬಿಜು ಮೋಹನ್ (42) ಮೃತ ವ್ಯಕ್ತಿ.
ಚೇರ್ಕಾಡಿ ಸೂರೆಬೆಟ್ಟಿನಲ್ಲಿ ಶನಿವಾರ ರಾತ್ರಿ ಮದ್ಯ ಕುಡಿದು ಮಾಡಿ ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಚುಡಾಯಿಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಠಾಣೆಗೆ ಕರೆತಂದಿದ್ದರು. ಈ ಬಗ್ಗೆ ಮಹಿಳೆ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು.
ಬ್ರಹ್ಮಾವರ ಪೊಲೀಸ್ ಠಾಣೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
‘ಮಹಿಳೆಯನ್ನು ಚುಡಾಯಿಸಿರುವ ಬಗ್ಗೆ ಠಾಣೆಗೆ ದೂರವಾಣಿ ಕರೆ ಬಂದಿತ್ತು. ಅದರಂತೆ ಪೊಲೀಸರು ಬಿಜು ಮೋಹನ್ ಎಂಬಾತನನ್ನು ಠಾಣೆಗೆ ಕರೆತಂದಿದ್ದರು. ಪೊಲೀಸ್ ಲಾಕಪ್‌ನಲ್ಲಿದ್ದ ಆತ ಶನಿವಾರ ರಾತ್ರಿ 3.45ರ ಸುಮಾರಿಗೆ ಗೋಡೆಗೆ ತಲೆ ಬಡಿದುಕೊಂಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತನನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆತ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ’ ಎಂದು ಡಾ. ಅರುಣ್ ಕುಮಾರ್ ಹೇಳಿದ್ದಾರೆ.
‘ಮೃತ ವ್ಯಕ್ತಿಯು ಕೂಲಿ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದು, ಆತನ ಕುಟುಂಬದವರಿಗೆ ಮಾಹಿತಿ ನೀಡಿದ್ದೇವೆ. ಅವರು ಏನು ದೂರು ನೀಡುತ್ತಾರೆ ಎಂಬುದನ್ನು ಆಧರಿಸಿ ಮುಂದಿನ ತನಿಖೆ ನಡೆಯಲಿದೆ. ಇದು ಲಾಕಪ್ ಡೆತ್ ಪ್ರಕರಣವಾಗಿರುವುದರಿಂದ ಸಿಐಡಿ ತನಿಖೆ ನಡೆಯಲಿದೆ’ ಎಂದಿದ್ದಾರೆ.
ಮಣಿಪಾಲದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.