ADVERTISEMENT

ಉಡುಪಿ ಜಿಲ್ಲೆಯಲ್ಲಿ ಚರ್ಮ ಗಂಟು ರೋಗ ಉಲ್ಭಣ: ಹೈನುಗಾರರು ಹೈರಾಣ

ಜಾನುವಾರುಗಳ ಜೀವಕ್ಕೆ ಕಂಟಕ; 2,136 ರಾಸುಗಳಿಗೆ ಸೋಂಕು

ಬಾಲಚಂದ್ರ ಎಚ್.
Published 25 ಡಿಸೆಂಬರ್ 2022, 19:30 IST
Last Updated 25 ಡಿಸೆಂಬರ್ 2022, 19:30 IST
ಚರ್ಮ ಗಂಟು ರೋಗಪೀಡಿತ ರಾಸುಗಳು.
ಚರ್ಮ ಗಂಟು ರೋಗಪೀಡಿತ ರಾಸುಗಳು.   

ಉಡುಪಿ: ರೈತರು ಹಾಗೂ ಹೈನುಗಾರರ ಆರ್ಥಿಕ ಬೆನ್ನೆಲುಬಾಗಿರುವ ಜಾನುವಾರುಗಳಿಗೆ ಮಾರಕ ಚರ್ಮ ಗಂಟು (ಲಿಂಪಿ ಸ್ಕಿನ್‌ ಡಿಸೀಸ್‌) ರೋಗ ಬಾಧಿಸುತ್ತಿದೆ. ರಾಸುಗಳ ಜೀವಕ್ಕೆ ಕಂಟಕವಾಗುತ್ತಿರುವ ಚರ್ಮ ಗಂಟು ರೋಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಆತಂಕ ಸೃಷ್ಟಿಸಿದೆ.

ಪಶು ಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2,57,184 (ದನ, ಎಮ್ಮೆಗಳು ಸೇರಿ) ಜಾನುವಾರು ಇದ್ದು, ಈ ಪೈಕಿ 2,267 ಜಾನುವಾರು ಚರ್ಮ ಗಂಟು ರೋಗಕ್ಕೆ ತುತ್ತಾಗಿವೆ. 185 ಗ್ರಾಮಗಳಲ್ಲಿ ಲಿಂಪಿ ಸ್ಕಿನ್‌ ಸೋಂಕು ಕಾಣಿಸಿಕೊಂಡಿದ್ದು ರೋಗ ಉಲ್ಭಣವಾಗುವ ಭೀತಿ ಎದುರಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಇದುವರೆಗೂ 8 ದನಗಳು ಮೃತಪಟ್ಟಿವೆ.

ರೋಗಕ್ಕೆ ತುತ್ತಾಗಿದ್ದ 2,136 ಜಾನುವಾರುಗಳ ಪೈಕಿ 831 ರಾಸುಗಳು ಗುಣಮುಖವಾಗಿವೆ. 1,428 ಜಾನುವಾರುಗೆ ಚಿಕಿತ್ಸೆ ನೀಡಲಾಗುತ್ತಿದೆ. ರೈತರು, ಹೈನುಗಾರರು ಆತಂಕ ಪಡುವ ಅಗತ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಸಾಕು ಎನ್ನುತ್ತಾರೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು.

ADVERTISEMENT

ಆತಂಕ ಏಕೆ?: ರಾಜ್ಯದ ಇತರೆ ಜಿಲ್ಲೆಗಳಲ್ಲಿ ಚರ್ಮ ಗಂಟು ರೋಗ ವ್ಯಾಪಕವಾಗಿದ್ದು ಸಾವಿರಾರು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡ ಆರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಒಂದೂ ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ.

ತಿಂಗಳಿಂದೀಚೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡ ಸೋಂಕು, ಆರಂಭದಲ್ಲಿ ಬೆರಳೆಣಿಕೆ ರಾಸುಗಳಿಗೆ ತಗುಲಿ ಇದೀಗ 2 ಸಾವಿರದ ಗಡಿ ದಾಟಿದೆ. ಸೋಂಕಿನ ಪ್ರಮಾಣ ಏರುಗತಿಯಲ್ಲಿ ಸಾಗಿರುವುದು ಹೈನುಗಾರರ ಆತಂಕಕ್ಕೆ ಕಾರಣವಾಗಿದೆ.

ರೋಗ ನಿಯಂತ್ರಣಕ್ಕೆ ಕ್ರಮ ಏನು: ಚರ್ಮ ಗಂಟು ರೋಗ ಹರಡದಂತೆ ತಡೆಯಲು ಪಶು ಸಂಗೋಪನಾ ಇಲಾಖೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕುತ್ತಿದೆ. ಇದುವರೆಗೂ 1,59,721 ಡೋಸ್‌ ಲಸಿಕೆ ಹಾಕಲಾಗಿದ್ದು, ಶೇ 62ರಷ್ಟು ಗುರಿ ಸಾಧನೆಯಾಗಿದೆ. 88279 ಡೋಸ್ ಲಸಿಕೆ ದಸ್ತಾನು ಇದೆ ಎಂದು ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಶಂಕರ ಶೆಟ್ಟಿ.

ಕಡ್ಡಾಯ ಲಸಿಕೆ ಹಾಕಿಸಿ: ಲಿಂಪಿ ಸ್ಕಿನ್ ರೋಗದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕಾದರೆ ಹೈನುಗಾರರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಲಸಿಕೆ ಹಾಕಿಸಲು ಪಶು ಆಸ್ಪತ್ರೆಗೆ ಬರುವ ಅಗತ್ಯವಿಲ್ಲ. ಪಶು ವೈದ್ಯರು ಹಾಗೂ ಸಿಬ್ಬಂದಿ ಪ್ರತಿ ಹಳ್ಳಿಗಳಿಗೂ ಭೇಟಿನೀಡುತ್ತಿದ್ದು ನಿಮ್ಮ ಮನೆಬಾಗಿಲಿಗೆ ಬಂದು ಲಸಿಕೆ ಹಾಕಲಿದ್ದಾರೆ.

ದನಗಳು ಮೇಯಲು ಹೋಗಿವೆ, ಲಸಿಕೆ ಹಾಕಿಸಿದರೆ ಹಾಲು ಕಡಿಮೆಯಾಗುತ್ತದೆ ಎಂಬ ಸಬೂಬುಗಳನ್ನು ಹೇಳದೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ಇದರಿಂದ ನಿಮ್ಮ ಜಾನುವಾರುಗಳು ಸೋಂಕಿನಿಂದ ಸುರಕ್ಷಿತವಾಗುವುದರ ಜತೆಗೆ ಗ್ರಾಮದಲ್ಲಿರುವ ಇತರ ಜಾನುವಾರುಗಳಿಗೂ ಸೋಂಕು ಹರಡುವ ಅಪಾಯ ಕಡಿಮೆಯಾಗುತ್ತದೆ.

ದನಗಳಿಗೆ ಲಸಿಕೆ ಹಾಕಿಸಿ ಒಂದು ತಿಂಗಳ ಬಳಿಕ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗುತ್ತದೆ. ಅಲ್ಲಿಯವರೆಗೂ ರಾಸುಗಳು ರೋಗ ಪೀಡಿತ ದನಗಳ ಜತೆ ಸಂಪರ್ಕ ಸಾಧಿಸದಂತೆ ಎಚ್ಚರವಹಿಸಬೇಕು ಎಂದು ಡಾ.ಶಂಕರ ಶೆಟ್ಟಿ ಮಾಹಿತಿ ನೀಡಿದರು.

ಚಿಕಿತ್ಸೆ ಏನು?: ಚರ್ಮಗಂಟು ರೋಗ ಕಾಣಿಸಿಕೊಂಡರೆ ಹೈನುಗಾರರು ಭಯಪಡಬೇಕಾದ ಅಗತ್ಯವಿಲ್ಲ. ಸಮೀಪದಲ್ಲಿರುವ ಪಶು ವೈದ್ಯರನ್ನು ಸಂಪರ್ಕಿಸಿದರೆ ಅಗತ್ಯ ಔಷಧೋಪಚಾರ ಮಾಡಲಿದ್ದಾರೆ. ಒಂದು ವಾರದಲ್ಲಿ ರೋಗ ಗುಣವಾಗುತ್ತದೆ. ರೋಗ ಪೀಡಿತ ಜಾನುವಾರುಗಳನ್ನು ಮೇಯಲು ಹೊರಗೆ ಬಿಡಬಾರದು.

ಸೋಂಕು ಹೇಗೆ ಹರಡುತ್ತದೆ: ಚರ್ಮ ಗಂಟು ‘ಕ್ಯಾಪ್ರಿಪಾಕ್ಸ್‌’ ಎಂಬ ವೈರಾಣುವಿನಿಂದ ಬರುವ ರೋಗ. ಆಫ್ರಿಕಾದಲ್ಲಿ ಕಾಣಿಸಿಕೊಂಡ ಈ ರೋಗ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದೆ. ಆರಂಭದಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ಈಚೆಗೆ ಹೆಚ್ಚಾಗಿದೆ. ಸೋಂಕು ಪೀಡಿತ ದನಗಳನ್ನು ಕಚ್ಚುವ ನೊಣ, ಉಣ್ಣೆ ಹಾಗೂ ಸೊಳ್ಳೆಗಳು ಆರೋಗ್ಯವಂತ ಜಾನುವಾರುಗೆ ಕಚ್ಚಿದಾಗ ಲಿಂಪಿ ಸ್ಕಿನ್‌ ಸೋಂಕು ಹರಡುತ್ತದೆ.

ದನಗಳ ಕುತ್ತಿಗೆ, ಕಾಲು, ಕೆಚ್ಚಲಿನ ಭಾಗಗಳಲ್ಲಿ ಹೆಚ್ಚಾಗಿ ಗಂಟುಗಳು ಕಾಣಿಸಿಕೊಂಡು, ಕ್ರಮೇಣ ಗಂಟುಗಳು ದೊಡ್ಡದಾಗಿ ಒಡೆದು ರಕ್ತಸ್ರಾವ ಉಂಟಾಗುತ್ತದೆ. ತಕ್ಷಣ ಚಿಕಿತ್ಸೆ ಕೊಡಿಸದಿದ್ದರೆ ಜಾನುವಾರುಗಳು ಸಾವನ್ನಪ್ಪಬಹುದು. ಸೋಂಕು ಹರಡದಂತೆ ಗಂಟಿನ ಮೇಲೆ ಬೇವಿನ ಎಣ್ಣೆ, ಬೆಳ್ಳುಳ್ಳಿ, ಕರ್ಪೂರ ಲೇಪಿಸಬಹುದು. ಅಥವಾ ಮಿಥಿಲಿನ್ ಬ್ಲೂ ದ್ರಾವಣ ಹಚ್ಚಬಹುದು. ಮುಖ್ಯವಾಗಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ಪಶು ವೈದ್ಯರು.

ಹಾಲು ಸುರಕ್ಷಿತ: ಚರ್ಮಗಂಟು ರೋಗ ಬಾಧಿತ ಹಸುವಿನ ಹಾಲನ್ನು ಸೇವಿಸಬಹುದು. ಹಾಲನ್ನು ಕುದಿಸಿ ಕುಡಿಯುವುದರಿಂದ ಸಮಸ್ಯೆ ಇಲ್ಲ. ರೋಗ ಪೀಡಿತ ಹಸುಗಳಲ್ಲಿ ಹಾಲಿನ ಪ್ರಮಾಣ ಶೇ 20 ರಿಂದ 30ರಷ್ಟು ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.

***

ಜಿಲ್ಲೆಯಲ್ಲಿರುವ ಒಟ್ಟು ಜಾನುವಾರು ಸಂಖ್ಯೆ–2,57,184

ರೋಗ ಕಾಣಿಸಿಕೊಂಡಿರುವ ಗ್ರಾಮಗಳ ಸಂಖ್ಯೆ–185

ಚರ್ಮ ಗಂಟು ರೋಗ ಕಾಣಿಸಿಕೊಂಡ ರಾಸುಗಳು–2,267

ರೋಗದಿಂದ ಗುಣಮುಖವಾದ ಜಾನುವಾರು–831

ಮರಣ ಹೊಂದಿದ ಜಾನುವಾರು–8

ಚಿಕಿತ್ಸೆಯಲ್ಲಿರುವ ಜಾನುವಾರು–1,428
***

ಚರ್ಮ ಗಂಟು ರೋಗಕ್ಕೆ ಲಸಿಕೆ (ಡಿ.24ರವರೆಗಿನ ಮಾಹಿತಿ)

ಪ್ರತಿದಿನ ಹಾಕಲಾಗುತ್ತಿರುವ ಲಸಿಕೆ–11,800

ಇದುವರೆಗೂ ಹಾಕಲಾಗಿರುವ ಲಸಿಕೆ–1,59,721

ಶೇಕಡವಾರು ಲಸಿಕೆ ಸಾಧನೆ–ಶೇ 62

ದಾಸ್ತಾನಿರುವ ಒಟ್ಟು ಲಸಿಕೆ–88279

ಲಸಿಕೆಯ ಬೇಡಿಕೆ–0

***
ತಾಲ್ಲೂಕು–ಒಟ್ಟು ಜಾನುವಾರು–ರೋಗ ಬಾಧಿತ–ಗುಣಮುಖ

ಉಡುಪಿ–17,117–78–9

ಕಾಪು–14,614–93–1

ಬ್ರಹ್ಮಾವರ–42,245–537–0

ಕುಂದಾಪುರ–62564–153–16

ಬೈಂದೂರು–42208–220–78

ಕಾರ್ಕಳ–55446–314–217

ಹೆಬ್ರಿ–22990–872–510

ಸಿಬ್ಬಂದಿ ಕೊರತೆ

ಜಿಲ್ಲೆಯಲ್ಲಿರುವ 2.27 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಗೆ ಲಸಿಕೆ ಹಾಕುವುದು ಪಶು ಸಂಗೋಪನಾ ಇಲಾಖೆಗೆ ದೊಡ್ಡ ಸವಾಲಾಗಿದೆ. ಇಲಾಖೆಯಲ್ಲಿ ತೆರವಾದ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ನಡೆದಿಲ್ಲ. ಪರಿಣಾಮ ಲಸಿಕೆ ಹಾಕಲು ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಹೆಚ್ಚಾಗಿದೆ. ಒಟ್ಟು 357 ಮಂಜೂರಾದ ಹುದ್ದೆಗಳ ಪೈಕಿ ಕೇವಲ 78 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಚದುರಿದಂತೆ ಮನೆಗಳು ಇರುವುದರಿಂದ ಲಸಿಕೆ ಹಾಕುವ ವೇಗ ಕಡಿಮೆಯಾಗಿದೆ.

ಗ್ರಾಮಕ್ಕೆ ಇಬ್ಬರು ಲಸಿಕಾ ಸಿಬ್ಬಂದಿ

ಪಶು ಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಸಮಸ್ಯೆ ಇದ್ದರೂ ಹೈನುಗಾರರ ಹಿತ ದೃಷ್ಟಿಯಿಂದ ಗ್ರಾಮಕ್ಕೆ ಇಬ್ಬರಂತೆ ಲಸಿಕೆ ಹಾಕುವವರನ್ನು ಹೊರ ಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗಿದೆ. ಇದರಿಂದ ಲಸಿಕಾಕರಣಕ್ಕೆ ಹೆಚ್ಚು ಸಮಸ್ಯೆಯಾಗಿಲ್ಲ.

–ಡಾ.ಶಂಕರ ಶೆಟ್ಟಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.