ADVERTISEMENT

'ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ'

ಕೈಗಾರಿಕಾ ಸ್ಪಂದನ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 5:00 IST
Last Updated 27 ಜೂನ್ 2024, 5:00 IST
ಕೈಗಾರಿಕಾ ಸ್ಪಂದನ ಸಮಿತಿ ಸಭೆ ನಡೆಯಿತು
ಕೈಗಾರಿಕಾ ಸ್ಪಂದನ ಸಮಿತಿ ಸಭೆ ನಡೆಯಿತು   

ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಗುರುತಿಸಿರುವ ಶಿವಪುರದ ಕೆರೆಬೆಟ್ಟು ಹಾಗೂ ನಿಟ್ಟೆಯ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಭೂ ಸ್ವಾಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾರಿಕಾ ಸ್ಪಂದನ ಸಮಿತಿ , ಕ್ಲಸ್ಟರ್ ಸಮಿತಿ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಬ್ರಿ ತಾಲ್ಲೂಕಿನ ಶಿವಪುರ ಹಾಗೂ ಕೆರೆಬೆಟ್ಟು ಗ್ರಾಮಗಳಲ್ಲಿ 113.59 ಎಕ್ರೆ, ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ 50.42 ಎಕ್ರೆ, ಬ್ರಹ್ಮಾವರ ತಾಲ್ಲೂಕಿನ ಉಪ್ಪೂರಿನಲ್ಲಿ 101.19 ಎಕ್ರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕೆ.ಐ.ಡಿ.ಬಿ. ಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕಳೆದ ಮಾರ್ಚ್‌ನಲ್ಲಿ 21 ಕ್ಕೂ ಹೆಚ್ಚು ಕೈಗಾರಿಕೆಗಳಲ್ಲಿ ಪ್ರಗತಿ ಕಂಡು ಬಂದಿರುವುದಿಲ್ಲ. ಕೇವಲ ಡಿ ಗ್ರೂಪ್ ಹುದ್ದೆಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲಾ ಹುದ್ದೆಗಳಲ್ಲಿಯೂ ಸ್ಥಳೀಯರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಹೊಸದಾಗಿ ಕೈಗಾರಿಕೆ ಸ್ಥಾಪನೆಗೆ ಹಂಚಿಕೆಯಾಗಿರುವ ಜಮೀನನ್ನು ಬಳಕೆ ಮಾಡಿಕೊಳ್ಳುವುದರೊಂದಿಗೆ ಹೊಸ ಕೈಗಾರಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಪ್ರಾರಂಭಿಸಬೇಕು. ಕೈಗಾರಿಕೆಗಳನ್ನು ಪ್ರಾರಂಭಿಸದೇ ಇದ್ದಲ್ಲಿ ಕೆ.ಐ.ಡಿ.ಬಿ ಕಾಯ್ದೆ ಅನ್ವಯ ಶೇ 2 ರಷ್ಟು ಹೆಚ್ಚುವರಿ ಶುಲ್ಕ ವಸೂಲಿ ಮಾಡಬೇಕು. ಕೈಗಾರಿಕೆ ಚಟುವಟಿಕೆ ಬದಲಾವಣೆ ಮಾಡಿ ನಡೆಸುತ್ತಿದ್ದಲ್ಲಿ ಅವುಗಳಿಗೆ ಪೂರ್ವಾನುಮತಿ ಪಡೆಯದೆ ಇದ್ದಲ್ಲಿ ನೋಟಿಸ್ ನೀಡಿ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಿದರು.

ಕೈಗಾರಿಕ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಪೌರಾಯುಕ್ತ ರಾಯಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಕೆ.ಐ.ಡಿ.ಬಿ ಶ್ರೀನಿವಾಸ ಮೂರ್ತಿ, ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ಶಿಕ್ಷಕರ ಅರ್ಹತಾ ಪರೀಕ್ಷೆ ಪಾರದರ್ಶಕವಾಗಿ ನಡೆಸಿ’

ಜಿಲ್ಲೆಯ ಏಳು ಪರೀಕ್ಷಾ ಕೇಂದ್ರದಲ್ಲಿ ಇದೇ 30 ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಟಿ.ಇ.ಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ ಬೆಳಕಿನ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಮೊದಲ ಹಂತದ ಪರೀಕ್ಷೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದ್ದು ಒಟ್ಟು 960 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ 2 ರಿಂದ 4.30 ರ ವರೆಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಒಟ್ಟು 1653 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು. ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿ ಸೇರಿದಂತೆ ಯಾರೊಬ್ಬರಿಗೂ ಮೊಬೈಲ್ ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದ ಅವರು ಪ್ರತಿಯೊಂದು ಪರೀಕ್ಷಾ ಕೊಠಡಿಗೂ ಸಿ.ಸಿ.ಟಿ.ವಿ. ಕ್ಯಾಮೆರಾ ಆಳವಡಿಸಬೇಕು ಎಂದು ಸೂಚನೆ ನೀಡಿದರು. ಪರೀಕ್ಷೆ ನಡೆಯುವ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದರು. ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸೂಕ್ತ ಆರೋಗ್ಯ ತಪಾಸಣಾ ವ್ಯವಸ್ಥೆ ಸೇರಿದಂತೆ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಡಿಡಿಪಿಐ ಗಣಪತಿ ಕೆ. ಜಿಲ್ಲಾ ಖಜಾನಾಧಿಕಾರಿ ಗೋಪಾಲಸ್ವಾಮಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.