ADVERTISEMENT

ಉಡುಪಿ:ನಗರಕ್ಕೆ ಬೇಕಿದೆ ಹದ್ದಿನ ಕಣ್ಣಿನ ಕಾವಲು; ಜಂಕ್ಷನ್‌ಗಳಿಗಿಲ್ಲ CC ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 6:45 IST
Last Updated 4 ನವೆಂಬರ್ 2024, 6:45 IST
<div class="paragraphs"><p>ಉಡುಪಿಯ ಅಂಬಲಪಾಡಿ ಬೈಪಾಸ್‌ನಲ್ಲಿ ಸಮರ್ಪಕ ಸಿ.ಸಿ.ಟಿ.ವಿ. ಕಣ್ಗಾವಲು ಇಲ್ಲ</p></div>

ಉಡುಪಿಯ ಅಂಬಲಪಾಡಿ ಬೈಪಾಸ್‌ನಲ್ಲಿ ಸಮರ್ಪಕ ಸಿ.ಸಿ.ಟಿ.ವಿ. ಕಣ್ಗಾವಲು ಇಲ್ಲ

   

ಉಡುಪಿ: ನಗರವು ದಿನೇ ದಿನೇ ಅಭಿವೃದ್ಧಿಯಾಗುತ್ತಿದ್ದರೂ, ವಾಹನಗಳ, ವಸತಿ ಸಮುಚ್ಚಯಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಪ್ರಮುಖ ಸ್ಥಳಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಇನ್ನೂ ಮರೀಚಿಕೆಯಾಗಿದೆ.

ಹೆಚ್ಚು ಅಪಘಾತಗಳು ನಡೆಯುವಂತಹ ಜಂಕ್ಷನ್‌ಗಳಿಗೆ, ಕೆಲವು ವಸತಿ ಪ್ರದೇಶಗಳಿಗೆ ಹಾಗೂ ಇತರ ಸಾರ್ವಜನಿಕ ಪ್ರದೇಶಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕೆಂಬುದು ಜನರ ಪ್ರಮುಖ ಬೇಡಿಕೆಯಾದರೂ ಇದುವರೆಗೂ ಈಡೇರಿಲ್ಲ.

ADVERTISEMENT

ನಗರದ ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಕಳ್ಳತನ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇದೇ. ಈಚೆಗೆ ಪೊಲೀಸ್‌ ಠಾಣೆಯೊಂದರ ಸಮೀಪದ ಸರ್ಕಾರಿ ನೌಕರರ ವಸತಿ ಸಮುಚ್ಚಯದ ಹಲವು ಮನೆಗಳಿಗೆ ನುಗ್ಗಿದ್ದ ಕಳ್ಳರು ನಗ, ನಗದು ಕಳವು ಮಾಡಿದ್ದರು.

ಅದೇ ರೀತಿ ಬ್ರಹ್ಮಗಿರಿ ಬಳಿಯ ಅಪಾರ್ಟ್‌ವೊಂದರಿಂದ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಸರ ಎಳೆದು ಪರಾರಿಯಾಗಿರುವ ಪ್ರಕರಣಗಳೂ ವರದಿಯಾಗಿವೆ.

ವಸತಿ ಸಮುಚ್ಚಯಗಳಿರುವ ಪ್ರದೇಶಗಳಲ್ಲಿ ಸಾಕಷ್ಟು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಇದರಿಂದ ಕಳವು ನಡೆದರೆ ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ. ಅದೂ ಅಲ್ಲದ ಸಿ.ಸಿ.ಟಿ.ಇ. ಕ್ಯಾಮೆರಾ ಇದ್ದರೆ ಕಳ್ಳರಿಗೆ ಅಲ್ಪವಾದರೂ ಭಯವಾಗಬಹುದು ಎನ್ನುತ್ತಾರೆ ವಸತಿ ಪ್ರದೇಶವೊಂದರ ನಿವಾಸಿಗಳು.

ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದರೆ ಸಾಲದು ಅದು ಕಾರ್ಯ ನಿರ್ವಹಿಸುತ್ತಿದೆಯಾ ಎಂಬುದನ್ನು ಕಾಲ ಕಾಲಕ್ಕೆ ಪರಿಶೀಲಿಸಬೇಕು ಎಂದೂ ನಾಗರಿಕರು ಒತ್ತಾಯಿಸುತ್ತಾರೆ.

ನಗರದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕೆಂಬ ಪ್ರಸ್ತಾವವನ್ನು ಪೊಲೀಸ್‌ ಇಲಾಖೆ ನಗರಸಭೆಗೆ ಕಳುಹಿಸಿ ತಿಂಗಳುಗಳು ಕಳೆದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಸಮರ್ಪಕವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಯಾಗದಿರುವುದು ಪೊಲೀಸರ ತನಿಖೆಗೂ ಬಾಧಕವಾಗುತ್ತಿದೆ. ಯಾವುದೇ ಅಪರಾಧ ಕೃತ್ಯವಾಗಲಿ, ಅಪಘಾತವಾಗಲಿ ನಡೆದಾಗ ಮುಖ್ಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ಸಮರ್ಪಕವಾಗಿ ಇವುಗಳ ಅಳವಡಿಕೆಯಾಗದ ಕಾರಣ ಸಮಸ್ಯೆ ಎದುರಾಗುತ್ತಿದೆ.

ನಗರದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳ ಲೈವ್‌ ಮಾನಿಟರಿಂಗ್‌ ವ್ಯವಸ್ಥೆ ಕೂಡ ಇಲ್ಲ. ಈ ಕಾರಣಕ್ಕೆ ಪೊಲೀಸರು ಅಂಗಡಿ, ಬ್ಯಾಂಕ್‌, ಖಾಸಗಿ ವ್ಯಕ್ತಿಗಳು ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆಯೂ ಇದೆ.

ಅಂಬಲಪಾಡಿ ಬೈಪಾಸ್‌, ಕರಾವಳಿ ಬೈಪಾಸ್‌, ಆದಿ ಉಡುಪಿ, ನಿಟ್ಟೂರು, ಅಂಬಾಗಿಲು, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ಜಂಕ್ಷನ್‌, ಶಾರದಾ ಕಲ್ಯಾಣ ಮಂಟಪ ಬಳಿ, ಎಂಜಿಎಂ ಕಾಲೇಜು ಬಳಿ, ಇಂದ್ರಾಳಿ, ಸರ್ವಿಸ್‌ ಬಸ್‌ ನಿಲ್ದಾಣ, ಮಿಷನ್‌ ಕಾಂಪೌಂಡ್‌, ಚಿಟ್ವಾಡಿ ಜಂಕ್ಷನ್‌ ಸೇರಿದಂತೆ ಹಲವು ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಲ್ಲ.

ಈ ಪ್ರದೇಶಗಳಲ್ಲ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕೆಂದು ಸಂಬಂಧಪಟ್ವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ಇವುಗಳನ್ನು ಅಳವಡಿಸಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ ಎನ್ನುತ್ತಾರೆ ನಾಗರಿಕರು.

ಕಲ್ಸಂಕ ಜಂಕ್ಷನ್‌ನಲ್ಲಿ ಸಮರ್ಪಕವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಯಾಗಿಲ್ಲ  ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ
ಉಡುಪಿಯ ಸಿಟಿ ಬಸ್‌ ನಿಲ್ದಾಣ ಬಳಿಯ ಮುಖ್ಯರಸ್ತೆ ಪರಿಸರದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಕಣ್ಣಿಗೆ ಬೀಳುವುದಿಲ್ಲ
ಉಡುಪಿಯ ಕನಕದಾಸ ರಸ್ತೆಯಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾಗಳಿಲ್ಲ

‘ನಗರಸಭೆಗೆ ಪ್ರಸ್ತಾವ ಕಳುಹಿಸಿದ್ದೇವೆ’

ನಗರವನ್ನು ಪ್ರವೇಶಿಸುವ ಮತ್ತು ನಗರದಿಂದ ಹೊರ ಹೋಗುವ ಪ್ರದೇಶಗಳೂ ಸೇರಿದಂತೆ 14 ಕಡೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವ ಕುರಿತು ನಗರ ಸಭೆಗೆ ಈಗಾಗಲೇ ಪ್ರಸ್ತಾವ ಕಳುಹಿಸಿದ್ದೇವೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದರು.

‘ಪ್ರಸ್ತಾವ ಬಂದರೆ ಪರಿಶೀಲಿಸುತ್ತೇವೆ’

ನಗರದ ವಿವಿಧೆಡೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವ ಕುರಿತು ನಾನು ಅಧ್ಯಕ್ಷನಾದ ಬಳಿಕ ಪೊಲೀಸ್‌ ಇಲಾಖೆಯಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ಪ್ರಸ್ತಾವ ಕಳಿಸಿದರೆ ಈ ಕುರಿತು ಪರಿಶೀಲಿಸುತ್ತೇವೆ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸುವ ಸಲುವಾಗಿ ಕಸ ಎಸೆಯುವ ಜಾಗಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದ್ದೇವೆ ಎಂದು ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

ಪ್ರಮುಖ ಜಂಕ್ಷನ್‌ ಮತ್ತು ಪದೇ ಪದೇ ಸಣ್ಣಪುಟ್ಟ ಅಪಘಾತಗಳು ನಡೆಯುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು
-ಸುರೇಶ್ ಆಟೊ ಚಾಲಕ
ಅಂಬಲಪಾಡಿ ಬೈಪಾಸ್‌ನಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಲೇ ಇದೆ. ಇಲ್ಲಿಂದ ನಗರಕ್ಕೆ ಪ್ರವೇಶಿಸುವ ಮಾರ್ಗವು ಇದ್ದು. ಈ ಬೈಪಾಸ್‌ನಲ್ಲಿ ಸಮರ್ಪಕವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು
-ಸುಕುಮಾರ್ ಕಿದಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.