ADVERTISEMENT

ಉಡುಪಿ: ಬಸ್‌ ನಿಲ್ದಾಣಗಳಿಗೆ ಬೇಕಿದೆ ಹೈಟೆಕ್‌ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 6:16 IST
Last Updated 11 ನವೆಂಬರ್ 2024, 6:16 IST
ಬೈಂದೂರಿನ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ
ಬೈಂದೂರಿನ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣ   

ಉಡುಪಿ: ತುಕ್ಕು ಹಿಡಿದಿರುವ ಆಸನಗಳು, ಎಲ್ಲೆಂದರಲ್ಲಿ ಎಲೆ ಅಡಿಕೆ, ಗುಟ್ಕಾ ಜಗಿದು ಉಗುಳಿದ ಗುರುತು, ಸಂದಿಗೊಂದಿಗಳಲ್ಲಿ ಕಸದ ರಾಶಿ, ಕೆಲವೆಡೆ ಮುರಿದು ಬೀಳಲು ಸಿದ್ಧವಾಗಿರುವ ಮೇಲ್ಚಾವಣಿ ಶೀಟ್‌ಗಳು...

ಇದು ಉಡುಪಿಯ ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಕಾಣ ಸಿಗುವ ದೃಶ್ಯಗಳು. ಬಸ್‌ಗಳಿಗಾಗಿ ಕಾಯುವ ಜನರಿಗೆ ಸ್ವಚ್ಛ ವಾತಾವರಣ ಇಲ್ಲಿ ಮರೀಚಿಕೆಯಾಗಿದೆ. ಉಡುಪಿ ನಗರದ ಮಾತ್ರವಲ್ಲ ಜಿಲ್ಲೆಯ ಬಹುತೇಕ ಬಸ್‌ ನಿಲ್ದಾಣಗಳಲ್ಲೂ ಇದೇ ಪರಿಸ್ಥಿತಿ ಇದೆ.

ಉಡುಪಿಯ ಸರ್ವಿಸ್‌ ಬಸ್‌ ನಿಲ್ದಾಣಕ್ಕೆ ಪ್ರತಿನಿತ್ಯ ನೂರಾರು ಜನರು ಬರುತ್ತಾರೆ. ಎಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಣ್ಣಿಗೆ ಬೀಳುವುದಿಲ್ಲ. ಪ್ರಯಾಣಿಕರಿಗೆ ಕುಳಿತುಕೊಳ್ಳಲೂ ಸಮರ್ಪಕವಾದ ಆಸನಗಳ ವ್ಯವಸ್ಥೆಯೂ ಇಲ್ಲ.

ADVERTISEMENT

ಸರ್ವಿಸ್ ಬಸ್ ನಿಲ್ದಾಣಕ್ಕೆ ಪ್ರವೇಶಿಸುವಲ್ಲಿಯೇ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಇನ್ನೊಂದು ಕಡೆ ಬಸ್ ನಿಲ್ದಾಣ ಪ್ರವೇಶಿಸುವಲ್ಲಿಯೇ ಚರಂಡಿಯ ಸ್ಲ್ಯಾಬ್ ಕುಸಿದು ಅಪಾಯ ಆಹ್ವಾನಿಸುತ್ತದೆ. ಮಳೆ ಬಂದರೆ ಸರ್ವಿಸ್ ಬಸ್ ನಿಲ್ದಾಣದ ಮಂಗಳೂರು ಬಸ್‌ಗಳು ನಿಲುಗಡೆಯಾಗುವಲ್ಲಿ ಚಾವಣಿ ಸೋರುತ್ತದೆ. ಕೆಲವೆಡೆ ಚಾವಣಿಯ ಶೀಟ್‌ಗಳು ಕಿತ್ತು ಹೋಗಿವೆ.

ಪ್ರಯಾಣಿಕರು ಕುಳಿತುಕೊಳ್ಳುವ ಕಬ್ಬಿಣದ ಆಸನಗಳು ಕೂಡ ತುಕ್ಕು ಹಿಡಿದು ಮುರಿದು ಬೀಳುವ ಸ್ಥಿತಿಯಲ್ಲಿವೆ.

ಉಡುಪಿ ನಗರದಲ್ಲಿ ಸರ್ವಿಸ್ ಬಸ್ ನಿಲ್ದಾಣವನ್ನು ಬಿಟ್ಟರೆ ಅತಿ ಹೆಚ್ಚು ಪ್ರಯಾಣಿಕರು ಬರುವ ಸಿಟಿ ಬಸ್ ನಿಲ್ದಾಣದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಮಳೆ ಬಂದರೆ ಕೆಲವೆಡೆ ನೀರು ಸೋರಿಕೆಯಾಗುತ್ತದೆ. ಜೋರಾಗಿ ಗಾಳಿ ಬಂದರೆ ಬಸ್ ನಿಲ್ದಾಣದಲ್ಲಿ ನಿಂತವರು ಒದ್ದೆಯಾಗುತ್ತಾರೆ. ಇಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಬಸ್‌ಗೆ ಕಾಯುವ ಪ್ರಯಾಣಿಕರು ಪರದಾಡುವಂತಾಗಿದೆ.

ನಗರದ ಬಸ್ ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ಬೇಕೆಂದು ಪ್ರಯಾಣಿಕರು ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ. ಆದರೆ ಇದನ್ನು ಸಕಾರಗೊಳಿಸಲು ಸಂಬಂಧಪಟ್ಟವರು ಮುತುವರ್ಜಿ ವಹಿಸಿಲ್ಲ ಎಂಬುದು ಜನರ ಆರೋಪವಾಗಿದೆ.

ಹಲವು ಉನ್ನತ ಶಿಕ್ಷಣ ಸಂಸ್ಥೆಗಳಿರುವ ಮಣಿಪಾಲದಲ್ಲೂ ಬಸ್ ನಿಲ್ದಾಣಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲೂ ಸ್ವಚ್ಛತೆ ಕೊರತೆ ಇದೆ.

ಸ್ವಚ್ಛತೆ ಕಾಣದ ಉಡುಪಿಯ ಸರ್ವೀಸ್‌ ಬಸ್‌ ನಿಲ್ದಾಣ  ಪ್ರಜಾವಾಣಿ ಚಿತ್ರ: ಉಮೇಶ್‌ ಮಾರ್ಪಳ್ಳಿ

ಉಗುಳುವವರಿಗೆ ದಂಡ ಹಾಕಿ: ಬಸ್ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದರಿಂದ ರೋಗ ಭೀತಿ ಕಾಡುತ್ತಿದೆ. ಅಂತಹ ವ್ಯಕ್ತಿಗಳಿಗೆ ಸಂಬಂಧಪಟ್ಟವರು ದಂಡ ಹಾಕಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪೂರಕ ಮಾಹಿತಿ: ಹಮೀದ್‌ ಪಡುಬಿದ್ರಿ, ವಿಶ್ವನಾಥ ಆಚಾರ್ಯ, ರಾಘವೇಂದ್ರ ಹಿರಿಯಡ್ಕ, ವಾಸುದೇವ ಭಟ್‌

ಉಡುಪಿಯ ಸರ್ವೀಸ್‌ ಬಸ್‌ ನಿಲ್ದಾಣದಲ್ಲಿ ಕಸದ ರಾಶಿ
ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ಮೂಲ ಸೌಕರ್ಯ ಕೊರತೆಯಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.‌ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕು
ಶ್ರೀಶ ಕುಮಾರ್ ವಿದ್ಯಾರ್ಥಿ
ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಸ್ವಚ್ಛತೆ ಕಾಪಾಡುವಂತೆ ಅಂಗಡಿ ಮಳಿಗೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು
ಸುಬ್ರಹ್ಮಣ್ಯ ಪ್ರಯಾಣಿಕ
ಉಡುಪಿಯ ಹಳೆ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣ ಪರಿಸರದಲ್ಲಿ ಕಸದ ರಾಶಿ

‘ಸೌಕರ್ಯ ಕಲ್ಪಿಸಲು ಚಿಂತನೆ’

ನಗರದ ಬಸ್ ನಿಲ್ದಾಣಗಳಿಗೆ ಮೂಲ ಸೌಕರ್ಯ ಒದಗಿಸಲು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಸರ್ವಿಸ್ ಬಸ್ ನಿಲ್ದಾಣದಲ್ಲಿ ಕಿತ್ತು ಹೋಗಿರುವ ಮೇಲ್ಚಾವಣಿ ಶೀಟ್‌ಗಳನ್ನು ಶೀಘ್ರ ಬದಲಿಸಲಾಗುವುದು. ನಗರದ ಕೆ.ಎಸ್.‌ಆರ್.ಟಿ.ಸಿ. ಹಳೆ ಬಸ್ ನಿಲ್ದಾಣಕ್ಕೆ ಈಚೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಬಸ್ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕುರಿತೂ ಚಿಂತನೆ ನಡೆಸಲಾಗುವುದು  ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದರು.

ಕಿರಿದಾದ ಬಸ್‌ ನಿಲ್ದಾಣ: ಪ್ರಯಾಣಿಕರಿಗೆ ಸಂಕಷ್ಟ

ಪಡುಬಿದ್ರಿ: ಬೆಳೆಯುತ್ತಿರುವ ಪಡುಬಿದ್ರಿಯಲ್ಲಿ ಕಿರಿದಾದ ಬಸ್‌ ನಿಲ್ದಾಣದಿಂದಾಗಿ ಪ್ರಯಾಣಿಕರು ಸಮಸ್ಯೆ ಅನುಭವಿಸುತಿದ್ದಾರೆ. ಉಡುಪಿ ಮಂಗಳೂರು ಹಾಗೂ ಕಾರ್ಕಳಕ್ಕೆ ತೆರಳುವ ಪ್ರಯಾಣಿಕರು ಈ ಬಸ್‌ ನಿಲ್ದಾಣಕ್ಕೆ ಪ್ರತಿನಿತ್ಯ ಬರುತ್ತಾರೆ. ಈ ನಿಲ್ದಾಣ ಕಿರಿದಾಗಿರುವುದರಿಂದ‌ ಪ್ರಯಾಣಿಕರು ಮಳೆ ಬಿಸಿಲಿಗೆ ಬಸ್‌ ನಿಲ್ದಾಣದ‌ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೆಜಮಾಡಿಯಲ್ಲಿ ಬಸ್‌ ನಿಲ್ದಾಣವಿದ್ದರೂ ನಿರ್ವಹಣೆ ಇಲ್ಲದೆ ಪ್ರಯಾಣಿಕರು ನಿಲ್ದಾಣದ ಒಳಗೆ ಹೋಗಲು ಹಿಂಜಿರಿಯುತ್ತಾರೆ. ತಾಲ್ಲೂಕು ಕೇಂದ್ರವಾಗಿರುವ‌ ಕಾಪುವಿನಲ್ಲಿ ಬಸ್‌‌ ನಿಲ್ದಾಣ ಬೇಕು ಎಂಬುವುದು ಇಲ್ಲಿನ‌ ನಾಗರಿಕರ‌ ಆಗ್ರಹವಾಗಿದೆ.

ಹಿರಿಯಡ್ಕಕ್ಕೆ ಬೇಕು ಬಸ್ ನಿಲ್ದಾಣ

ಹಿರಿಯಡಕ: ಉಡುಪಿಯಿಂದ ಶಿವಮೊಗ್ಗ ಚಿಕ್ಕಮಗಳೂರು ಕಾರ್ಕಳ ಧರ್ಮಸ್ಥಳ ಸುಬ್ರಹ್ಮಣ್ಯ ಭಾಗಗಳಿಗೆ ತೆರಳಲು ಹಿರಿಯಡ್ಕವು ಸಂಪರ್ಕ ಕೊಂಡಿ. ಇಲ್ಲಿನ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ವಿಶೇಷ ದಿನಗಳಂದು ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಬರುತ್ತಾರೆ. ಆದರೆ ಹಿರಿಯಡ್ಕ ಪೇಟೆಗೆ ಸುಸಜ್ಜಿತ ಬಸ್ ನಿಲ್ದಾಣದ ಕೊರತೆಯಿದೆ. ಹಲವು ದಶಕಗಳಿಂದ ಹೆಬ್ರಿಗೆ ಹೋಗುವ ಪ್ರದೇಶದಲ್ಲಿ ಅಂಗಡಿಗಳ ಮಧ್ಯೆ ಒಂದು ಪುಟ್ಟ ಬಸ್ ನಿಲ್ದಾಣವಿದ್ದರೂ ಸ್ಥಳಾವಕಾಶದ ಕೊರತೆ ಇಕ್ಕಟ್ಟಾದ ಜಾಗದಿಂದ ಕೆಲ ಬಸ್‌ಗಳು ನಿಲ್ದಾಣ ಇರುವ ಜಾಗಕ್ಕಿಂತ ಮುಂದೆ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿ ಇಳಿಸಿ ಹೋಗುತ್ತಿವೆ‌‌. ಇದೀಗ ರಾಷ್ಟ್ರೀಯ ಹೆದ್ದಾರಿ 169 ಎ  ಕಾಮಗಾರಿ ನಡೆಯುತ್ತಿದ್ದು ರಸ್ತೆ ವಿಸ್ತರಣೆ ಬಳಿಕವಾದರೂ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಬಸ್‌ ನಿಲ್ದಾಣ ಉದ್ಘಾಟನೆ ಎಂದು?

ಬೈಂದೂರು: ಸುಮಾರು ಏಳು ವರ್ಷಗಳ ಹಿಂದೆ ಶಂಕುಸ್ಥಾಪನೆಗೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಯಡ್ತರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಒದಗಿ ಬಂದಿಲ್ಲ. ಕಾಮಗಾರಿ ಆರಂಭಿಸಿ ಏಳು ಮಳೆಗಾಲ ಕಳೆದರೂ ಸದ್ಯಕ್ಕಂತೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಉಡುಪಿಯ ನಿಲ್ದಾಣ ಈಗಾಗಲೇ ಉದ್ಘಾಟನೆಗೊಂಡು ಕಾರ್ಯಾಚರಿಸುತ್ತಿದೆ ಎಂದು ಜನರು ದೂರಿದ್ದಾರೆ. ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಬೈಂದೂರು ಯಡ್ತರೆ ಬೈಪಾಸ್‌ ಬಳಿಯ ಈ ನಿಲ್ದಾಣ ಪ್ರಯಾಣಿಕರಿಗೆ ಅತಿ ಅಗತ್ಯವಾದ ನಿಲ್ದಾಣವಾಗಿದ್ದು ಸರ್ಕಾರ ಉಳಿದ ಕಾಮಗಾರಿಗಳಿಗೆ ಬೇಕಾಗಿರುವ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಕಾರ್ಕಳ  ನಿಲ್ದಾಣ: ಅವ್ಯವಸ್ಥೆಗಳ ಆಗರ

ಕಾರ್ಕಳ: ಪ್ರಸ್ತುತ ನಗರದಲ್ಲಿರುವ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿಂದ ಉಡುಪಿ ಹಾಗೂ ಹೆಬ್ರಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಮತ್ತು ಮಂಗಳೂರು ಹಾಗೂ ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಈ ನಿಲ್ದಾಣಕ್ಕೆ ಬರುತ್ತವೆ. ಕಿರಿದಾದ ಜಾಗದಲ್ಲಿ ಬಸ್‌ಗಳು ಬಂದು ತಿರುಗಿ ಅದರ ಸ್ಥಳದಲ್ಲಿ ನಿಲ್ಲುವುದೇ ಸವಾಲಾಗಿದೆ. ಪ್ರಯಾಣಿಕರಿಗಾಗಿ ಕುಳಿತುಕೊಳ್ಳಲು ಸ್ಥಳಾವಕಾಶ ಆಸನಗಳಿರುವ ಆವರಣವು ನೆಲಮಟ್ಟದಿಂದ ಎತ್ತರದಲ್ಲಿರುವುದರಿಂದ ಮಕ್ಕಳು ಪ್ರಾಯದವರಿಗೆ ಸಮಸ್ಯೆಯಾಗುತ್ತಿದೆ. ಆಟೊಗಳ ಓಡಾಟ ಸರಕು ಸಾಗಣೆ ವಾಹನಗಳ ಓಡಾಟದ ಮಧ್ಯೆ ಪ್ರಯಾಣಿಕ ನುಸುಳಿ ತೆರಳಬೇಕಾದ ಅನಿವಾರ್ಯತೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.