ಕುಂದಾಪುರ: ನಗರದ ಪ್ರಮುಖ ದೇಗುಲವಾದ ಕುಂದೇಶ್ವರ ದೇವಸ್ಥಾನದ ದೀಪೋತ್ಸವಕ್ಕೆ (ನ.23) ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲಿಯೇ ರಾಜಬೀದಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕುಂದಾಪುರ ಹೆಸರಿಗೆ ಅನ್ವರ್ಥಕ ವಾಗಿರುವ ಕುಂದೇಶ್ವರ ದೇವ ಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಯನ್ನು ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ರಸ್ತೆಯ ಇಕ್ಕೇಲಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪುರಸಭೆ ಜೊತೆಯಾಗಿ ಸಮಾಲೋಚನೆ ನಡೆಸಿ ಸ್ಥಳೀಯರ ಹಾಗೂ ಭಕ್ತರ ಅಭಿಪ್ರಾಯ ಸಂಗ್ರಹಿಸಿ, ರಸ್ತೆ ವಿಸ್ತರಣೆ, ಇಂಟರ್‌ಲಾಕ್ ಅಳವಡಿಕೆ, ಚರಂಡಿ ನಿರ್ಮಾಣದ ಕುರಿತು ಅನೌಪಚಾರಿಕ ತೀರ್ಮಾನಕ್ಕೆ ಬರಲಾಗಿತ್ತು.
ಪುರಸಭೆಯ ಸಾಮಾನ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ಅಭಿವೃಧ್ಧಿ ಕಾಮಗಾರಿಗಳ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಕಾಮಗಾರಿಯ ಟೆಂಡರ್ ಹಂತದಲ್ಲಿ ಇದಕ್ಕೆ ನಿಗದಿಯಾಗಿದ್ದ ಮೊತ್ತದ ಬಗ್ಗೆಯೂ ಒಂದಷ್ಟು ಆಕ್ಷೇಪಕಾರಿ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಬೇಸರಗೊಂಡಿದ್ದ ಪುರಸಭೆಯ ಸದಸ್ಯರು, ಸಾಮಾನ್ಯ ಸಭೆಯಲ್ಲಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಸದಸ್ಯರ ಪರವಾಗಿ ಧ್ವನಿ ಎತ್ತಿದ್ದ ಕೆಲ ಸದಸ್ಯರು ಈ ಕುರಿತು ಪೊಲೀಸರಿಗೆ ದೂರು ನೀಡಿ, ತನಿಖೆ ನಡೆಸುವ ಸಲಹೆಯನ್ನು ನೀಡಿದ್ದರು.
ಮರ ತೆರವಿನ ಕುರಿತು ಆಕ್ರೋಶ: ದೇವಸ್ಥಾನದ ಪರಿಸರದ ಅಂದವನ್ನು ಹೆಚ್ಚಿಸುವ ಉದ್ದೇಶದಿಂದ ರಸ್ತೆಯ ಇಕ್ಕೇಲಗಳಲ್ಲಿ ನೆಟ್ಟು ಭಾರಿ ಎತ್ತರಕ್ಕೆ ಬೆಳೆದು ನಿಂತಿದ್ದ ಅಶೋಕ ಗಿಡಗಳನ್ನು ರಸ್ತೆಯ ಅಭಿವೃದ್ಧಿಯ ಹೆಸರಲ್ಲಿ ನೆಲಕ್ಕುರುಳಿದಾಗ ಪರಿಸರ ಪ್ರೇಮಿಗಳು ಹಾಗೂ ದೇಗುಲದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಮರ ತೆರವು ಕಾರ್ಯಾಚರಣೆಯನ್ನು ಆಕ್ಷೇಪಿಸಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಸ್ವಯಂ ಪ್ರೇರಿತರಾಗಿ ದೂರನ್ನು ದಾಖಲಿಸಿಕೊಂಡಿದ್ದರು. ಈ ಕುರಿತು ಸ್ವಷ್ಟನೆ ನೀಡಿದ್ದ ಪುರಸಭೆ
ಈ ಮರಗಳನ್ನು ತೆಗೆಯುವ ಉದ್ದೇಶ ನಮಗಿಲ್ಲ, ಅಭಿವೃದ್ಧಿ ಕಾಮಗಾರಿಗಳ ಜೊತೆಯಲ್ಲಿ ಪರಿಸರದ ಅಂದ ಹೆಚ್ಚಿಸುವ ಗಿಡಗಳನ್ನು ನೆಡುವ ಬಗ್ಗೆ ತಿಳಿಸಿದ್ದರು.
ಲೋಕಾಯುಕ್ತಕ್ಕೆ ದೂರು: ಈ ಎಲ್ಲ ಗೊಂದಲಗಳ ನಡುವೆಯೇ ಕಾಮಗಾರಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳು, ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಿದ್ದರು.
ಹಿಂದಿನ ಪುರಸಭೆಯ ಮುಖ್ಯಾ ಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರ ಮುತುವರ್ಜಿಯಿಂದ ನಿರ್ಮಲ ನಗರ ಯೋಜನೆಯಡಿಯಲ್ಲಿ ಪ್ರಾರಂಭದಲ್ಲಿ ₹ 25 ಲಕ್ಷ ಹಾಗೂ ಎರಡನೇ ಹಂತಕ್ಕೆ ಪುರಸಭಾ ನಿಧಿಯಿಂದ ₹ 15 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಎರಡನೇ ಹಂತದ ಕಾಮಗಾರಿಯ ಟೆಂಡರ್ ನಡೆದು ₹ 12 ಲಕ್ಷಕ್ಕೆ ಅಂತಿಮವಾಗಿತ್ತು. ಇದೀಗ ಮೊದಲನೇ ಹಂತದ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಎರಡನೇ ಹಂತದಲ್ಲಿ ಇಂಟರ್‌ಲಾಕ್ ಹಾಗೂ ಚರಂಡಿ ಕಾಮಗಾರಿಗಳು ಆರಂಭವಾಗಿದ್ದು, ಎಡ ಬದಿಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.