ಉಡುಪಿ: ಎಎನ್‌ಎಫ್ ಎನ್‌ಕೌಂಟರ್‌ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹದ ಮರಣೋತ್ತರ ಪರೀಕ್ಷೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ಆರಂಭಗೊಂಡು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಕ್ರಂನ ಸಂಬಂಧಿಕರು ಯಾರೂ ಕೂಡ ಮಣಿಪಾಲಕ್ಕೆ ಮಂಗಳವಾರ ಬಂದಿರಲಿಲ್ಲ. ಬುಧವಾರ ಬೆಳಿಗ್ಗೆ ಆತನ ತಮ್ಮ ಸುರೇಶ ಗೌಡ ಮತ್ತು ತಂಗಿ ಸುಗಣಾ ಅವರು ಮೃತದೇಹವನ್ನು ಪಡೆಯಲು ಬಂದರು. ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಬೆಳಿಗ್ಗೆ 11.30 ರ ಸುಮಾರಿಗೆ ಮೃತದೇಹವನ್ನು ಮಣಿಪಾಲದ ಆಸ್ಪತ್ರೆಯಿಂದ ವಿಕ್ರಂನ ಹುಟ್ಟೂರಾದ ಕೂಡ್ಲುವಿಗೆ ಕೊಂಡೊಯ್ಯಲಾಯಿತು.
‘ನಮ್ಮ ಕುಟುಂಬದ ಜಾಗ ಇರುವಾಗ, ಅನಾಥ ಶವದಂತೆ ಬಿಟ್ಟುಬಿಡುವುದು ಯಾಕೆ ಎಂಬ ಕಾರಣಕ್ಕೆ ಅಣ್ಣನ ಅಂತ್ಯ ಸಂಸ್ಕಾರಕ್ಕೆ ಒಪ್ಪಿಕೊಂಡಿದ್ದೇವೆ. ಅಣ್ಣನ ಬಗ್ಗೆ ಹಲವು ವರ್ಷಗಳಿಂದ ನಮಗೆ ಯಾವುದೇ ಮಾಹಿತಿ ಇರಲಿಲ್ಲ’ ಎಂದು ವಿಕ್ರಂ ಗೌಡನ ತಂಗಿ ಸುಗುಣಾ ತಿಳಿಸಿದರು.
ಮೃತದೇಹವಿರಿಸಿದ್ದ ಕೆಎಂಸಿ ಆಸ್ಪತ್ರೆಯ ಶವಾಗಾರಕ್ಕೆ ಕೇರಳ ಮತ್ತು ತಮಿಳುನಾಡು ಪೊಲೀಸರ ಗುಪ್ತಚರ ವಿಭಾಗದವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
‘ತಮಿಳುನಾಡಿನಲ್ಲಿ ವಿಕ್ರಂ ಗೌಡನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಆದರೂ ಆತನ ಜೊತೆಗಿರುವವರು ಕರ್ನಾಟಕದ ಗಡಿಭಾಗದಿಂದ ತಮಿಳುನಾಡು ಪ್ರವೇಶಿಸುವ ಸಾಧ್ಯತೆ ಇದೆ’ ಎಂದು ತಮಿಳುನಾಡಿನ ಪೊಲೀಸರೊಬ್ಬರು ತಿಳಿಸಿದರು.
ಆ್ಯಂಬುಲೆನ್ಸ್ ಅಪಘಾತ: ವಿಕ್ರಂ ಗೌಡನ ಮೃತದೇಹವನ್ನು ಮಣಿಪಾಲದಿಂದ ಕೂಡ್ಲುವಿಗೆ ಸಾಗಿಸುತ್ತಿದ್ದಾಗ ಹೆಬ್ರಿ ಬಳಿ ಆ್ಯಂಬುಲೆನ್ಸ್ ರಸ್ತೆಬದಿಗೆ ವಾಲಿ ಅಪಘಾತ ಸಂಭವಿಸಿತ್ತು. ಬಳಿಕ ಸ್ಥಳೀಯರ ನೆರವಿನಿಂದ ಆ್ಯಂಬುಲೆನ್ಸ್ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೊಂಡೊಯ್ಯಲಾಯಿತು.
‘ಆ್ಯಂಬುಲೆನ್ಸ್ ವೇಗವಾಗಿ ಸಂಚರಿಸುತ್ತಿದ್ದಾಗ ದಿಢೀರನೆ ದನವೊಂದು ರಸ್ತೆಗೆ ಅಡ್ಡ ಬಂದಿತ್ತು. ಇದರಿಂದಾಗಿ ಆ್ಯಂಬುಲೆನ್ಸ್ ರಸ್ತೆ ಬದಿಗೆ ಸರಿದಿತ್ತು. ಯಾರಿಗೂ ಗಾಯಗಳಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದರು.
ಹೊಂಚು ಹಾಕಿದ್ದ ಎಎನ್‌ಎಫ್: ವಿಕ್ರಂ ಗೌಡ ಪೀತಬೈಲ್ ಪರಿಸರದ ಜಯಂತ ಗೌಡ ಎಂಬುವವರ ಮನೆಗೆ ದಿನಸಿ ಸಂಗ್ರಹಕ್ಕೆ ಬರಲಿದ್ದಾನೆ ಎಂಬ ಖಚಿತ ಮಾಹಿತಿಯ ಅನ್ವಯ ಎಎನ್‌ಎಫ್ ಸಿಬ್ಬಂದಿ, ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಿ ಅಲ್ಲಿ ಅವಿತುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ವಿಕ್ರಂ ದಿನಸಿಗಾಗಿ ಬಂದಾಗ ಎಎನ್‌ಎಫ್ ಸಿಬ್ಬಂದಿ ಸುತ್ತವರಿದಿದ್ದಾರೆ. ಕೂಡಲೇ ಆತನ ಬಳಿಯಿದ್ದ ಬಂದೂಕಿನಿಂದ ಗಂಡು ಹಾರಿಸಿದ್ದಾನೆ. ಶರಣಾಗಲು ಸೂಚಿಸಿದರೂ ಶರಣಾಗದ ಕಾರಣ ಎಎನ್‌ಎಫ್ ಸಿಬ್ಬಂದಿ ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿವೆ.
ಉಳಿದವರು ಬೆರಳೆಣಿಕೆಯಷ್ಟು: ಕರ್ನಾಟಕದಲ್ಲಿ ಕಬಿನಿ ದಳಂ–2 ಅನ್ನು ಮುನ್ನಡೆಸುತ್ತಿದ್ದ ವಿಕ್ರಂ ಗೌಡ ಹತನಾದ ಬಳಿಕ ರಾಜ್ಯದಲ್ಲಿ ಉಳಿದುಕೊಂಡಿರುವ ನಕ್ಸಲರ ಸಂಖ್ಯೆ ಬೆರಳೆಣಿಯಷ್ಟಿರಬಹುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ ಸೇರಿ ಐದಾರು ಮಂದಿ ಉಳಿದುಕೊಂಡಿರುವ ಸಾಧ್ಯತೆ ಇದೆ. ವಿಕ್ರಂನ ಜೊತೆಗಿದ್ದವರು ಕೇರಳ ಅಥವಾ ತಮಿಳುನಾಡಿಗೆ ಪರಾರಿಯಾಗಿರುವ ಸಾಧ್ಯತೆಯೂ ಇದೆ. ಕೇರಳದಲ್ಲಿ ‘ಥಂಡರ್ ಬೋಲ್ಟ್’ ಪಡೆಯು ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವುದರಿಂದ ನಕ್ಸಲರಿಗೆ ನೆಲೆ ತಪ್ಪಿದಂತಾಗಿದೆ ಎಂದೂ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.