ಉಡುಪಿ: ಮಹಾತ್ಮಾ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಗಾಂಧೀಜಿಯ ಜೀವನಗಾಥೆ, ತತ್ವ ಸಿದ್ಧಾಂತ, ಹೋರಾಟಗಳನ್ನು ಬಿಂಬಿಸುವ ವಿವರಗಳನ್ನು ಯುವ ಜನಾಂಗಕ್ಕೆ ತಿಳಿಸಲು ಡಿಜಿಟಲ್ ಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು, ಶಿವಮೊಗ್ಗ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾರಾಮಗೌಡ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ಸಹಯೋಗದಲ್ಲಿ ನ.4ರಂದು ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಬೆಳಿಗ್ಗೆ 11ಕ್ಕೆ ಚಿತ್ರ ಪ್ರದರ್ಶನ ನಡೆಯಲಿದೆಎಂದು ಮಾಹಿತಿ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ನಗರಸಭಾ ಸದಸ್ಯರು ಉಪಸ್ಥಿತರಿರಲಿದ್ದಾರೆ. ಪ್ರಾದೇಶಿಕ ಜನಸಂಪರ್ಕ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ಎಂ.ನಾಗೇಂದ್ರ ಸ್ವಾಮಿ, ಮಾಹೆ ಕುಲಪತಿ ಎಚ್.ಎಸ್.ಬಲ್ಲಾಳ್ ಇರಲಿದ್ದಾರೆ ಎಂದು ತಿಳಿಸಿದರು.
ಗಾಂಧೀಜಿ ಅವರ ಬದುಕು, ಚಳವಳಿ, ಹೋರಾಟದ ಹಾದಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಥಿಂಕಿಂಗ್ ಕ್ಯಾಪ್ಸ್ ಸಂಸ್ಥೆಯು ಆಗ್‌ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಚಿತ್ರಗಳನ್ನು ಪ್ರದರ್ಶಿಸಲಿದೆ. ಗಾಂಧೀಜಿ ಅವರೊಟ್ಟಿಗೆ ಸಾಗುತ್ತಾ ಅವರ ಬದುಕನ್ನು ಅರಿಯುವಂತಹ ವಿಭಿನ್ನ ಅನುಭವ ಪಡೆಯಬಹುದು ಎಂದರು.
ದೇಶದ 26 ಕಡೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಲ್ಲಿ ಮಣಿಪಾಲವನ್ನು ಆಯ್ಕೆ ಮಾಡಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನ.4ರಿಂದ 8ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ; ಪತ್ರಕರ್ತ, ಸಾಮಾಜಿಕ ಹೋರಾಟಗಾರ, ಚಿಂತಕ, ಆರ್ಥಿಕ ತಜ್ಞರಾಗಿದ್ದವರು. ಗಾಂಧೀಜಿಯನ್ನು ಸಮಗ್ರವಾಗಿ ಅರ್ಥಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪ್ರೊ.ವರದೇಶ ಹಿರೇಗಂಗೆ ತಿಳಿಸಿದರು.
ಸಮಾಜದಲ್ಲಿರುವ ಅಶಾಂತಿ, ಹಿಂಸೆ, ಅರಾಜಕತೆಗೆ ಗಾಂಧೀಜಿ ತತ್ವ ಸಿದ್ಧಾಂತಗಳು ಮಾತ್ರ ಪರಿಹಾರವಾಗಬಲ್ಲವು. ಈ ನಿಟ್ಟಿನಲ್ಲಿ ಯುವಜನತೆಗೆ ಗಾಂಧೀಜಿ ಅವರ ಮೌಲ್ಯಯುತ ಜೀವನವನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಥಿಂಕಿಂಗ್ ಕ್ಯಾಪ್ಸ್ ಸಂಸ್ಥೆಯ ಪುನೀತ್, ನಿಶಾಂತ್ ಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.