ಉಡುಪಿ: ದೀಪಾವಳಿ ಹಬ್ಬದ ಅಂಗವಾಗಿ ನಗರದ ಎಲ್ಲೆಡೆ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ತರಕಾರಿ, ಹಣ್ಣು ಹಂಪಲು, ಬಟ್ಟೆ, ಸಿಹಿತಿಂಡಿಗಳ ಅಂಗಡಿಯಗಳಲ್ಲಿ ಗ್ರಾಹಕರು ಕಿಕ್ಕಿರಿತು ತುಂಬಿದ್ದರು.
ರಸ್ತೆ ಬದಿ ಹೂವು ಮಾರಾಟ ಕೂಡ ಗರಿಗೆದರಿತ್ತು. ರಥಬೀದಿ, ಸರ್ವೀಸ್ ಬಸ್ ನಿಲ್ದಾಣದ ಬಳಿ, ಬ್ರಹ್ಮಗಿರಿ, ಅಂಬಲಪಾಡಿ ಮೊದಲಾದ ಕಡೆಗಳಲ್ಲಿ ವ್ಯಾಪಾರಿಗಳು ರಸ್ತೆ ಬದಿ ಹೂವುಗಳನ್ನು ಮಾರಾಟ ಮಾಡಿದರು. ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸಿದರು.
ಪ್ರತಿವರ್ಷವೂ ಹಬ್ಬಗಳ ಸಂದರ್ಭಗಳಲ್ಲಿ ಹಾಸನ, ಹಾವೇರಿ ಮೊದಲಾದೆಡೆಗಳಿಂದ ಹೂವಿನ ವ್ಯಾಪಾರಿಗಳು ಇಲ್ಲಿಗೆ ಬಂದು ಮಾರಾಟ ಮಾಡುತ್ತಾರೆ.
‘ಈ ಬಾರಿ ಮಳೆ ವಿಪರೀತವಾಗಿ ಸುರಿದ ಕಾರಣ ಹೂವಿನ ಬೆಳೆ ಹಾನಿಯಾಗಿದ್ದು, ಈ ಕಾರಣಕ್ಕೆ ಹೂವಿನ ದರ ಜಾಸ್ತಿಯಾಗಿದೆ’ ಎಂದು ಹೂವು ಮಾರಾಟಗಾರ ಹಾಸನದ ಶಿವಪ್ರಸಾದ್ ತಿಳಿಸಿದರು.
ಈ ಬಾರಿ ಚೆಂಡು ಹೂವು, ಸೇವಂತಿಗೆ, ಕಾಕಡ ಮೊದಲಾದವುಗಳ ದರ ಮಾರಿಗೆ ₹100 ಆಗಿದೆ.
ನಗರದ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರು ಹಬ್ಬದ ಖರೀದಿಗಾಗಿ ಗುರುವಾರ ಕಿಕ್ಕಿರಿದು ತುಂಬಿದ್ದರು. ಚಿನ್ನದ ಅಂಗಡಿಗಳಲ್ಲೂ ಖರೀದಿ ಜೋರಾಗಿತ್ತು.
ತರಕಾರಿ ದರ ಏರಿಕೆ: ತರಕಾರಿ, ಹಣ್ಣಿನ ದರ ಏರಿಕೆಯಾಗಿರುವುದು ಹಬ್ಬದ ಸಂದರ್ಭದಲ್ಲಿ ಗ್ರಾಹಕರ ಜೇಬಿಗೆ ಬರೆ ಎಳೆದಿದೆ.
ಮಂಗಳೂರು ಸೌತೆಕಾಯಿ ಕೆ.ಜಿ.ಗೆ ₹28, ಬೆಂಡೆಕಾಯಿ ಕೆ.ಜಿ.ಗೆ ₹48, ಬೀನ್ಸ್ ಕೆ.ಜಿ.ಗೆ ₹75, ಟೊಮ್ಯಾಟೊ ಕೆ.ಜಿ.ಗೆ ₹65, ಬೀಟ್‌ರೂಟ್ ದರ ಕೆ.ಜಿ.ಗೆ ₹38 ಆಗಿದ್ದು, ಬಹುತೇಕ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ಹೆಚ್ಚಾಗಿದೆ.
ಏಲಕ್ಕಿ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹90 ಆಗಿದೆ. ಪ್ರತಿ ಹಬ್ಬದ ಸಂದರ್ಭದಲ್ಲೂ ಇದಕ್ಕೆ ದರ ಏರಿಕೆಯಾಗುತ್ತದೆ. ಪೂಜೆಯ ಸಂದರ್ಭದಲ್ಲೂ ಏಲಕ್ಕಿ ಬಾಳೆ ಹಣ್ಣನ್ನು ಬಳಸುವ ಕಾರಣ ಬೇಡಿಕೆಯೂ ಹೆಚ್ಚಾಗಿದೆ.
‘ಪ್ರತಿವರ್ಷವೂ ಹಬ್ಬದ ಸಂದರ್ಭದಲ್ಲಿ ತರಕಾರಿ ದರ ಏರಿಕೆಯಾಗುತ್ತದೆ. ಈ ಬಾರಿ ಕೆಲವೆಡೆ ಭಾರಿ ಮಳೆ ಬಂದಿದ್ದ ಕಾರಣ ತರಕಾರಿ ಬೆಳೆ ಹಾನಿಯಾಗಿದೆ. ಈ ಕಾರಣಕ್ಕೂ ದರ ಏರಿಕೆಯಾಗಿದೆ ’ ಎಂದು ಉಡುಪಿಯ ಸರ್ವೀಸ್ ಬಸ್ ನಿಲ್ದಾಣ ಬಳಿಯ ತರಕಾರಿ ಮಾರಾಟಗಾರ ಆನಂದ ತಿಳಿಸಿದರು.
ಈ ಬಾರಿಯೂ ಹಬ್ಬದ ಸಂದರ್ಭದಲ್ಲಿ ತರಕಾರಿ ಹಣ್ಣು ಹೂವಿನ ದರ ವಿಪರೀತ ಏರಿಕೆಯಾಗಿದೆ. ಆದರೆ ಕೊಂಡುಕೊಳ್ಳುವ ಅನಿವಾರ್ಯತೆ ನಮಗಿದೆಶ್ರೀನಿವಾಸ ಗ್ರಾಹಕ ಉಡುಪಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಕುದುರಿದೆ. ನಗರದ ವಿವಿಧೆಡೆ ರಸ್ತೆ ಬದಿಯಲ್ಲಿ ಹಣತೆ ಮಾರಾಟ ಜೋರಾಗಿತ್ತು. ₹5 ರಿಂದ ಹಿಡಿದು ₹50ರ ವರೆಗಿನ ವಿವಿಧ ಗಾತ್ರದ ಹಣತೆಗಳನ್ನು ಮಾರಾಟಕ್ಕಿಡಲಾಗಿತ್ತು. ಪಟಾಕಿ ಅಂಗಡಿಗಳಲ್ಲಿ ವಿವಿಧ ಬಗೆಯ ಕ್ಯಾಂಡಲ್‌ಗಳು ಮಾರಾಟಕ್ಕಿದ್ದರೂ ಹಣತೆಗೆ ಬೇಡಿಕ ಕುಸಿದಿಲ್ಲ ಎನ್ನುತ್ತಾರೆ ಮಾರಾಟಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.