ADVERTISEMENT

‘ಕೊರೊನಾ ನೆಪದಲ್ಲಿ ಖಾತೆಗೆ ಕನ್ನ: ಒಟಿಪಿ ಕೊಡಬೇಡಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 15:18 IST
Last Updated 9 ಏಪ್ರಿಲ್ 2020, 15:18 IST

ಉಡುಪಿ: ಕೊರೊನಾ ಸೋಂಕಿನ ಸಂದರ್ಭವನ್ನು ಬಳಸಿಕೊಂಡು ಕಿಡಿಗೇಡಿಗಳು ಗ್ರಾಹಕರ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಉಡುಪಿ ಬ್ಯಾಂಕ್ ಆಫ್‌ ಬರೋಡದ ಡಿಜಿಎಂ ರವೀಂದ್ರ ರೈ ಫೇಸ್‌ಬುಕ್‌ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಕೊರೊನಾ ಸೋಂಕು ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಹಕರ ಮೊಬೈಲ್‌ಗೆ ಕರೆ ಮಾಡುತ್ತಿರುವ ವಂಚಕರು, ‘ಸರ್ಕಾರದಿಂದ ಕೊರೊನಾ ಸೋಂಕು ತಡೆಗೆ ಹಣ ಕೊಡಲಾಗುತ್ತಿದೆ. ಹಣ ಬೇಕಾದರೆ ಮೊಬೈಲ್‌ಗೆ ಬರುವ ಒಟಿಪಿ ಕೊಡಿ ಎಂದು ನಂಬಿಸುತ್ತಿದ್ದಾರೆ. ಗ್ರಾಹಕರು ಒಟಿಪಿ ಕೊಟ್ಟ ತಕ್ಷಣ ಅವರ ಬ್ಯಾಂಕ್‌ ಖಾತೆಯಿಂದ ಹಣ ದೋಚುತ್ತಿದ್ದಾರೆ.

ಬ್ಯಾಂಕ್‌ನಿಂದ ಲೋನ್‌ ಪಡೆದವರಿಗೂ ಕರೆ ಮಾಡುತ್ತಿರುವ ವಂಚಕರು ಮೂರು ತಿಂಗಳ ಇಎಂಐ ಮುಂದೂಡಿಕೆ ಪ್ರಯೋಜನ ಸಿಗಬೇಕಾದರೆ ಮೊಬೈಲ್‌ಗೆ ಬಂದಿರುವ ಒಟಿಪಿ ಕೊಡುವಂತೆ ಕೇಳುತ್ತಿದ್ದಾರೆ. ಕೊಟ್ಟ ಕೂಡಲೇ ಖಾತೆಯಲ್ಲಿರುವ ಹಣವನ್ನೆಲ್ಲ ಎಗರಿಸುತ್ತಿದ್ದಾರೆ.

ADVERTISEMENT

ಯಾವ ಬ್ಯಾಂಕ್‌ ಅಧಿಕಾರಿಗಳೂ ಗ್ರಾಹಕರಿಗೆ ಕರೆ ಮಾಡಿ ಒಟಿಪಿ, ಪಿನ್‌ ನಂಬರ್ ಕೇಳುವುದಿಲ್ಲ. ಹಾಗಾಗಿ, ಗ್ರಾಹಕರು ಎಟಿಎಂ ನಂಬರ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಜಾಗೃತರಾಗಿರಬೇಕು ಎಂದು ರವೀಂದ್ರ ರೈ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.