ADVERTISEMENT

ದುಡ್ಡನ್ನು ದುಶ್ಚಟಕ್ಕೆ ಹಾಕಿ ಹಾಳು ಮಾಡದಿರಿ: ಶ್ರೀನಿವಾಸ ಶೆಟ್ಟಿಗಾರ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 4:10 IST
Last Updated 25 ಅಕ್ಟೋಬರ್ 2024, 4:10 IST
ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು
ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು   

ಬಾರ್ಕೂರು(ಬ್ರಹ್ಮಾವರ): ‌‘ದುಡಿದ ದುಡ್ಡನ್ನು ದುಶ್ಚಟಕ್ಕೆ ಹಾಕಿ ಹಾಳು ಮಾಡದೆ, ಉತ್ತಮ ವ್ಯಕ್ತಿಗಳಾಗಿ ಗೌರವಸ್ಥರಾಗಿ ಬಾಳಿ’ ಎಂದು ಬಾರ್ಕೂರು ರಂಗನಕೇರಿಯ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್‌ ಹೇಳಿದರು.

ಬ್ರಹ್ಮಾವರ ತಾಲ್ಲೂಕು ಬಾರ್ಕೂರು ಕಚ್ಚೂರು ಮಾಲ್ತಿದೇವಿ ದೇವಸ್ಥಾನ, ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಗುರುವಾರ ಮುಕ್ತಾಯಗೊಂಡ 1874ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.

ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನಚಂದ್ರ ಶೆಟ್ಟಿ ರಟ್ಟಾಡಿ ಮಾತನಾಡಿ, ‘ರಾಜ್ಯದಲ್ಲಿ ಇಂದು 1.30 ಲಕ್ಷಕ್ಕೂ ಹೆಚ್ಚು ಮಂದಿ ಪಾನಮುಕ್ತರಾಗಿದ್ದಾರೆ. ಈ ಪೈಕಿ ಬಾರ್ಕೂರು ಶಿಬಿರಾರ್ಥಿಗಳು ಕೂಡ ಸೇರ್ಪಡೆ ಆಗಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾತಿ ಪದ್ಧತಿ ದೂರಪಡಿಸಿ, ಸಾಮಾಜಿಕ ಸಾಮರಸ್ಯ ಬೆಳೆಸಿದೆ’ ಎಂದರು.

ADVERTISEMENT

ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಮಾತನಾಡಿ, ‘ಒಬ್ಬ ವ್ಯಕ್ತಿ ಕುಡಿತಬಿಟ್ಟರೂ ಸಮಾಜದಲ್ಲಿ ಪರಿವರ್ತನೆ ಆಗುತ್ತದೆ. ಇನ್ನೂ ಶಿಬಿರದಲ್ಲಿ ಭಾಗವಹಿಸಿದ 65 ಮಂದಿಯೂ ಸಂಪೂರ್ಣ ಪಾನಮುಕ್ತರಾದರೆ ಸಮಾಜದಲ್ಲಿ ಬಹಳ ದೊಡ್ಡ ಪರಿವರ್ತನೆಯಾಗುತ್ತದೆ’ ಎಂದರು.

ಬ್ರಹ್ಮಾವರ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರಕಾಶ ಶೆಟ್ಟಿ ಮಾತನಾಡಿ, ‘ಕುಡಿತದ ಮನೆಯಲ್ಲಿರುವ ನೋವುಗಳು ಯಾರಿಗೂ ಬೇಡ. ಕುಡಿತವನ್ನು ದೂರ ಮಾಡುವ ಮದ್ಯವರ್ಜನ ಶಿಬಿರ ಮತ್ತು ವಿದ್ಯಾರ್ಥಿಗಳಲ್ಲಿ ದುಶ್ಚಟದ ವಿರುದ್ಧ ಅರಿವು ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾದದ್ದು’ ಎಂದರು.

ಬಾರ್ಕೂರು ಶಾಂತಾರಾಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ನಾಯ್ಕ, ಮಾಲ್ತಿದೇವಿ ದೇವಸ್ಥಾನದ ಗುರಿಕಾರ ಕಮಲಾಕ್ಷ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅಚ್ಚುತ ಪೂಜಾರಿ, ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ ಆಚಾರ್ಯ, ಬಾರ್ಕೂರು ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ, ಕೂಡ್ಲಿ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಉಡುಪ, ಜನಜಾಗೃತಿ ವೇದಿಕೆ ಸದಸ್ಯರಾದ ಲಕ್ಷ್ಮಣ ನಾಯ್ಕ, ಶ್ರೀನಿವಾಸ ವಡ್ಡರ್ಸೆ, ಅಮರ ಹೆಗ್ಡೆ, ಹನೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ, ವ್ಯವಸ್ಥಾಪನ ಸಮಿತಿಯ ಕೋಶಾಧಿಕಾರಿ ವಿಜಯ ಪೂಜಾರಿ, ಉಪಾಧ್ಯಕ್ಷೆ ಶಾರದಾ, ಶೌರ್ಯ ವಿಪತ್ತು ತಂಡದ ಮಾಸ್ಟರ್ ಮಂಜುನಾಥ ಪೂಜಾರಿ, ಕ್ಯಾಪ್ಟನ್ ಪುರುಷೋತ್ತಮ, ಒಕ್ಕೂಟದ ವಲಯಾಧ್ಯಕ್ಷೆ ಗೌರಿ ಪೂಜಾರಿ, ಚಂದ್ರ ಮರಕಾಲ ಇದ್ದರು.

ಸೇವಾ ಪ್ರತಿನಿಧಿ ಕುಸುಮಾ ಹೆಬ್ಬಾರ್ ಪ್ರಾರ್ಥಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ರಾಘವೇಂದ್ರ ನಿರೂಪಿಸಿದರು. ಬಾರ್ಕೂರು ವಲಯ ಮೇಲ್ವಿಚಾರಕ ರವೀಂದ್ರ ಎಸ್ ವಂದಿಸಿದರು.

ಬ್ರಹ್ಮಾವರ ತಾಲ್ಲೂಕು ಬಾರ್ಕೂರು ಕಚ್ಚೂರು ಮಾಲ್ತಿದೇವಿ ದೇವಸ್ಥಾನ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ ಗುರುವಾರ ಮುಕ್ತಾಯಗೊಂಡ 1874ನೇ ಮದ್ಯವರ್ಜನ ಶಿಬಿರದಲ್ಲಿ ಉದ್ಯಮಿ ಬಾರ್ಕೂರು ಶಾಂತಾರಾಮ ಶೆಟ್ಟಿ ಮಾತನಾಡಿದರು
ಮಧ್ಯವರ್ಜನ ಶಿಬಿರದಿಂದಾಗಿ ಅನೇಕ ಕುಟುಂಬಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿದೆ. ಶಿಬಿರಾರ್ಥಿಗಳು ಮದ್ಯಪಾನ ಬಿಡುವ ದೃಢ ನಿರ್ಧಾರದಿಂದ ಈ ಕ್ಷೇತ್ರದಿಂದ ಹೊರಗೆ ಹೋಗಿ.
ಶಾಂತಾರಾಮ ಶೆಟ್ಟಿ ಉದ್ಯಮಿ ಬಾರ್ಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.