ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಕೆ.ಜಿ.ರೋಡ್ ಬಳಿ ಶುಕ್ರವಾರ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿ ₹8 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಉಪ್ಪೂರು ಗ್ರಾಮದ ನಿವಾಸಿಗಳಾದ ಸತ್ಯರಾಜ್, ಕೃಷ್ಣ, ಶಕಿಲೇಶ್ ಬಂಧಿತರು. ಅವರು ಕೆ.ಜಿ ರೋಡ್ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮುಂಬೈನಿಂದ ತರಿಸಿಕೊಂಡಿದ್ದ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ₹8,11,040 ಮೌಲ್ಯದ 10 ಕೆ.ಜಿ 138 ಗ್ರಾಂ ಗಾಂಜಾ, ₹1,570 ನಗದು, ₹1,570 ಮೌಲ್ಯದ 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ಪ್ರಶಾಂತ್, ಮಾಯಪ್ಪ, ಪರಶುರಾಮ್ ಕಾರ್ಯಾಚರಣೆ ನಡೆಸಿದ್ದರು.
ಸೇತುವೆಗಳಲ್ಲಿ ಕಡಿವಾಣ ಅಗತ್ಯ: ಕೊಳಲಗಿರಿ ಮಣಿಪಾಲ ಸಂಪರ್ಕಿಸುವ ಶೀಂಬ್ರ ಸೇತುವೆಯಲ್ಲಿ ರಾತ್ರಿ ಸಮಯದಲ್ಲಿ ಮಣಿಪಾಲದ ವಿದ್ಯಾರ್ಥಿಗಳು ಗಾಂಜಾ ಸೇವನೆ, ಮದ್ಯ ಕುಡಿಯುವುದು ಕಂಡು ಬರುತ್ತಿದ್ದು, ಸಾರ್ವಜನಿಕರು ಅನೇಕ ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಗಸ್ತು ಇದ್ದರೂ ಇಲ್ಲಿ ಅನೇಕರು ಗಾಂಜಾ, ಮದ್ಯ ಸೇವಿಸುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆರೂರು ಕೊಳಲಗಿರಿ ಸಂಪರ್ಕಿಸುವ ಆರೂರು ಸೇತುವೆ ಬಳಿ ರಾತ್ರಿ ಮದ್ಯಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.