ADVERTISEMENT

ಉಡುಪಿ | ದುಗ್ಗಣಬೆಟ್ಟು ಜನರ ಗೋಳು ಕೇಳುವವರಾರು?

ಒಳಚರಂಡಿಯಿಂದ ಉಕ್ಕಿ ಹರಿಯುತ್ತಿದೆ ಕೊಳಚೆ: ಬಾವಿಗಳು ಕಲುಷಿತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 7:01 IST
Last Updated 2 ನವೆಂಬರ್ 2024, 7:01 IST
ದುಗ್ಗಣಬೆಟ್ಟು ಬಡಾವಣೆಯಲ್ಲಿ ಒಳಚರಂಡಿ ಉಕ್ಕಿ ಹರಿಯುತ್ತಿರುವುದು
ದುಗ್ಗಣಬೆಟ್ಟು ಬಡಾವಣೆಯಲ್ಲಿ ಒಳಚರಂಡಿ ಉಕ್ಕಿ ಹರಿಯುತ್ತಿರುವುದು   

ಉಡುಪಿ: ಗದ್ದೆ ಅಗೆದು ಹಾಕಿದಂತಹ ರಸ್ತೆ, ಕಾರಂಜಿಯಂತೆ ಚಿಮ್ಮುವ ಕೊಳಚೆ ನೀರು, ಮೂಗು ಮುಚ್ಚದಿದ್ದರೆ ಹೊಟ್ಟೆ ತೊಳಸುವಂತಹ ಗಬ್ಬು ವಾಸನೆ ಜೊತೆಗೆ ಕಚ್ಚಲು ಸನ್ನದ್ಧವಾಗಿರುವ ಬೀದಿ ನಾಯಿಗಳು ...

ಇದು ಉಡುಪಿ ನಗರ ಸಭೆಯ 8ನೇ ನಿಟ್ಟೂರ್‌ ವಾರ್ಡ್‌ನ ದುಗ್ಗಣಬೆಟ್ಟು ಬಡಾವಣೆಯ ದುಸ್ಥಿತಿ. ಇಲ್ಲಿನ ನಿವಾಸಿಗಳ ಪಾಡು ಹೇಳತೀರದು. ಕೊಳಚೆ ನೀರಿನ ದುರ್ವಾಸನೆಯಿಂದ ಊಟವೂ ಸೇರುವುದಿಲ್ಲ. ರಾತ್ರಿಯಾದರೆ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

ದುರಸ್ತಿಗಾಗಿ ಸುಮಾರು ಐದು ತಿಂಗಳ ಹಿಂದೆ ಇಲ್ಲಿನ‌ ಮುಖ್ಯರಸ್ತೆಯನ್ನು ಅಗೆದು ಹಾಕಲಾಗಿ ಆದರೆ ಇದುವರೆಗೆ ಯಾವುದೇ ಕಾಮಗಾರಿ ನಡೆದಿಲ್ಲ. ಮಳೆ ಬಂತೆಂದರೆ ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ವಾಹನ ಸಂಚಾರ ದುಸ್ತರವಾಗಿದೆ.

ADVERTISEMENT

ಮಳೆ ಇಲ್ಲದಿದ್ದರೂ ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುವುದೇ ಸವಾಲಿನ‌ ಕೆಲಸವಾಗಿದೆ.

ದುರಸ್ತಿಗಾಗಿ ರಸ್ತೆಯನ್ನು ಅಗೆಯುವ ವೇಳೆ ಚರಂಡಿಯನ್ನು ಅಧ್ವಾನ ಮಾಡಿ ಹಾಕಲಾಗಿದೆ. ಅಲ್ಲಿಂದ ಸಮಸ್ಯೆ ಆರಂಭವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಚರಂಡಿ ಸಮಸ್ಯೆಯನ್ನು ಹಲವು ಬಾರಿ ನಗರ ಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಅಳಲು ತೋಡಿಕೊಳ್ಳುತ್ತಾರೆ.

ಒಳಚರಂಡಿ ಉಕ್ಕಿ ಹರಿಯುತ್ತಿರುವುರಿಂದ ಸುಮಾರು ಹತ್ತರಷ್ಟು ಮನೆಯವರಿಗೆ ತೊಂದರೆಯಾಗಿದೆ. ಸದಾ ಕಾಲ ಕೊಳಚೆ ನೀರು ಹರಿಯುತ್ತಿರುವುದರಿಂದ ಸಮೀಪದ ಬಾವಿಗಳ ನೀರು ಕೂಡ ಕಲುಷಿತಗೊಂಡು ಬಾವಿಗಳು ಉಪಯೋಗ ಶೂನ್ಯವಾಗಿವೆ.

ಜುಲೈ ತಿಂಗಳಿನಿಂದ ನಮ್ಮ ಮನೆಯ ಮುಂಭಾಗದಲ್ಲೇ ಕೊಳಚೆನೀರು ಹರಿಯುತ್ತಿದೆ. ಇದರಿಂದ ದುರ್ವಾಸನೆ ಹರಡಿದ್ದು, ರೋಗ ಭೀತಿ ಕಾಡುತ್ತಿದೆ. ಬಾವಿಯ ನೀರಿನ ಬಣ್ಣ ಬದಲಾಗಿದ್ದು, ಅದರ ನೀರು ಕುಡಿಯುವುದನ್ನೇ ಬಿಟ್ಟಿದ್ದೇವೆ. ಈಗ ದೂರದ ಮನೆಯೊಂದರಿಂದ ಕುಡಿಯುವ ನೀರು ತರುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಜಯಂತಿ.

ನಮ್ಮ ಮನೆಯಲ್ಲಿ ಸಣ್ಣ ಮಗು ಕೂಡ ಇದ್ದು ಭಯವಾಗುತ್ತದೆ. ಸಂಜೆಯಾದರೆ ಸೊಳ್ಳೆಕಾಟ ವಿಪರೀತವಾಗಿದೆ. ಸಮಸ್ಯೆಯನ್ನು ಶಾಸಕರ ಗಮನಕ್ಕೂ ತಂದಿದ್ದೇವೆ ಆದರೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದೂ ಅವರು ಹೇಳುತ್ತಾರೆ.

‘ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ’

ದುಗ್ಗಣಬೆಟ್ಟವಿನ ಸಮಸ್ಯೆಯನ್ನು ನಗರಸಭೆಯ ಗಮನಕ್ಕೆ ತಂದರೂ ಅವರು ಮಿನಾಮೇಷ ಎಣಿಸುತ್ತಿದ್ದಾರೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಲೇರಿಯಾ ಡೆಂಗಿ ಕಾಲರಾ ಬಂದಾಗ ಎಚ್ಚರ ವಹಿಸುವಂತೆ ಜನರಿಗೆ ಸಲಹೆ ನೀಡಿದರೆ ಸಾಲದು. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸಮಾಜಸೇವಕ ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದ್ದಾರೆ.

‘ಶೀಘ್ರ ಕಾಮಗಾರಿ’

ಒಳಚರಂಡಿಯ ಹಳೆಯ ಪೈಪ್‌ನಿಂದಾಗಿ ಸಮಸ್ಯೆಯಾಗಿದೆ. ಒಳಚರಂಡಿ ಚೇಂಬರ್‌ನಲ್ಲಿ ಕಸ ತುಂಬಿ ತ್ಯಾಜ್ಯ ನೀರು ಹೊರ ಬರುತ್ತಿದೆ. ಕೊಳಚೆ ನೀರು ಸೋರುವಲ್ಲಿ ಹೊಸ ಪೈಪ್‌ಗಳನ್ನು ಹಾಕಿ ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಇಲ್ಲಿನ ರಸ್ತೆಯ ಕಾಮಗಾರಿ ಮಳೆಯಿಂದಾಗಿ ವಿಳಂಬವಾಗಿದೆ ಅದು ಕೂಡ ಶೀಘ್ರ ಆರಂಭವಾಗಲಿದೆ ಎಂದು ನಗರಸಭೆ ಸದಸ್ಯ ಸಂತೋಷ್‌ ಜತ್ತನ್‌ ತಿಳಿಸಿದರು.

ಕೊಳಚೆ ನೀರು ರಸ್ತೆ ಬದಿಯಲ್ಲಿ ಹರಿಯುತ್ತಿದ್ದು ಮನೆಯ ಅಂಗಳಕ್ಕೂ ಬರುತ್ತಿದೆ. ಸಾಂಕ್ರಾಮಿಕ ರೋಗಭೀತಿ ಕಾಡುತ್ತಿದೆ
ಜಯಂತಿ, ಬಡಾವಣೆ ನಿವಾಸಿ
ದುಗ್ಗಣಬೆಟ್ಟುವಿನಲ್ಲಿ ಒಳಚರಂಡಿಯಲ್ಲಿ ಸಮಸ್ಯೆಯಾಗಿದೆ. ಸಕ್ಕಿಂಗ್ ಮೆಷಿನ್‌ ಬಳಸಿ ಕೊಳಚೆ ನೀರನ್ನು ಹೊರತೆಗೆದಿದ್ದೇವೆ. ಪರಿಸರದಲ್ಲಿ ಬ್ಲೀಚಿಂಗ್‌ ಪೌಡರ್‌ ಕೂಡ ಹರಡಿದ್ದೇವೆ.
ಸ್ನೇಹಾ ಶಂಕರ್‌, ಪರಿಸರ ಎಂಜಿನಿಯರ್‌, ನಗರಸಭೆ
ದುಗ್ಗಣಬೆಟ್ಟು ಬಡಾವಣೆಯ ರಸ್ತೆ ದುರವಸ್ಥೆ
ದುಗ್ಗಣಬೆಟ್ಟು ಬಡಾವಣೆಯ ಮನೆಗಳ ಬಳಿಯಲ್ಲೇ ಕೊಳಚೆ ನೀರು ಹರಿಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.