ADVERTISEMENT

ಹಿಜಾಬ್ ವಿವಾದ: ಯಥಾಸ್ಥಿತಿ ಕಾಪಾಡಲು ಆದೇಶ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 15:33 IST
Last Updated 25 ಜನವರಿ 2022, 15:33 IST
   

ಉಡುಪಿ: ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿನ ಸಮವಸ್ತ್ರ ಹಾಗೂ ವಸ್ತ್ರ ಸಂಹಿತೆಯ‌ನ್ನು ಯಥಾಸ್ಥಿತಿ ಮುಂದುವರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದಾರೆ. ಅದರಂತೆ, ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕಿದೆ.

ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿಲ್ಲ. ಆದರೆ, ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಆಯ್ಕೆಯ ವಸ್ತ್ರ ಧರಿಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ವೇಳೆ ಕಾಲೇಜಿನ ವಸ್ತ್ರಸಂಹಿತೆಯ ಮಾಹಿತಿ ಪಡೆದು ಒಪ್ಪಿಕೊಂಡು ಸ್ವಇಚ್ಛೆಯಿಂದ ದಾಖಲಾತಿ ಪಡೆದಿದ್ದಾರೆ.

ಇಷ್ಟು ದಿನ ಇಲ್ಲದ ಗೊಂದಲಗಳನ್ನು ಈಗ ಸೃಷ್ಟಿಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಒಳಿತಲ್ಲ. ವಿವಿಧ ರಾಜ್ಯಗಳ ಪದವಿಪೂರ್ವ ಕಾಲೇಜುಗಳಲ್ಲಿರುವ ಸಮವಸ್ತ್ರ ನೀತಿಸಂಹಿತೆಯನ್ನು ಪರಿಶೀಲಿಸಿ, ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ನೀಡಿರುವ ತೀರ್ಪುಗಳನ್ನು ಅವಲೋಕಿಸಿ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಥವಾ ವಸ್ತ್ರಸಂಹಿತೆ ನಿಗದಿಗೊಳಿಸಲು ಚಿಂತನ ಮಂಥನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ADVERTISEMENT

ಸಮಿತಿಯು ಅಧ್ಯಯನ ನಡೆಸಿ ಸಲ್ಲಿಸುವ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೂ ಸಮವಸ್ತ್ರ ಹಾಗೂ ವಸ್ತ್ರ ಸಂಹಿತೆ ವಿಷಯದಲ್ಲಿ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯಥಾಸ್ಥಿತಿ ಮುಂದುವರಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್‌.ಎನ್.ಪದ್ಮಿನಿ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.