ADVERTISEMENT

‘ಶಿಕ್ಷಣ ರಂಗದಲ್ಲಿ ಅಸಮಾನತೆಯ ತಾಂಡವ’

ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಅನಿತಾ ರಾಂಪಾಲ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:39 IST
Last Updated 20 ಅಕ್ಟೋಬರ್ 2024, 7:39 IST
ಅನಿತಾ ರಾಂಪಾಲ್
ಅನಿತಾ ರಾಂಪಾಲ್   

ಉಡುಪಿ: ಶಿಕ್ಷಣ ರಂಗದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಯೋಗಗಳಲ್ಲೂ ಅಸಮಾನತೆ ತಾಂಡವವಾಡುತ್ತಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ನಿವೃತ್ತ ಡೀನ್‌ ಪ್ರೊ. ಅನಿತಾ ರಾಂಪಾಲ್ ಅಭಿಪ್ರಾಯಪಟ್ಟರು.

ಭಾರತ ಜ್ಞಾನ-ವಿಜ್ಞಾನ ಸಮಿತಿ ಜಿಲ್ಲಾ ಘಟಕದ ವತಿಯಿಂದ ನಗರದ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಶನಿವಾರ ನಡೆದ ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಶಿಕ್ಷಣದ ಸಮಕಾಲೀನ ಸವಾಲುಗಳು ವಿಷಯದ ಕುರಿತು ಅವರು ಮಾತನಾಡಿದರು.

ನಮ್ಮ ದೇಶವು ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ತರಗತಿ, ಪಠ್ಯ ಪುಸ್ತಕಗಳಿಗೆ ಅವುಗಳನ್ನು ಕಲಿಸಲು ಸಾಧ್ಯವಾಗಿದೆಯೇ? ಅವುಗಳಲ್ಲಿ ಅಸಮಾನತೆಯ ಬಗ್ಗೆ ಹೇಳಿದೆಯೇ ಎಂದು ಪ್ರಶ್ನಿಸಿದರು.

ADVERTISEMENT

ಹಸಿವಾದರೆ ಮೀನು ತಿನ್ನಬಹುದು. ಆದರೆ ಮೀನು ಹಿಡಿಯುವುದನ್ನು ಮಕ್ಕಳಿಗೆ ಕಲಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ. ಆಹಾರ ಉತ್ಪಾದನಾ ವಿಧಾನಗಳನ್ನು ಅರ್ಥ ಮಾಡಿಸುವಲ್ಲಿ ಸೋತಿದೆ. ಕೃಷಿಕ, ನೇಕಾರ, ಮೀನುಗಾರ ನೌಕರರೇ ಅಲ್ಲ ಎನ್ನುವಂತಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ತಮಿಳುನಾಡು ವಿರೋಧಿಸಿದೆ. ಎಷ್ಟೋ ರಾಜ್ಯಗಳ ಸರ್ವ ಶಿಕ್ಷಾ ಅಭಿಯಾನದ ಶಿಕ್ಷಕರಿಗೆ ಮೂರ್ನಾಲ್ಕು ತಿಂಗಳುಗಳಿಂದ ಸಂಬಳವೇ ಆಗಿಲ್ಲ. ಶಿಕ್ಷಣದ ಹಕ್ಕು ಜಾರಿಯಾಗುತ್ತಿಲ್ಲ ಎಂದು ಹೇಳಿದರು.

ನಮ್ಮ ದೇಶ ಕ್ರಾಂತಿಕಾರಕ ಸಂವಿಧಾನವನ್ನು ಹೊಂದಿದೆ. ಮಹಿಳೆಯರಿಗೆ ಮತದಾನದ ಹಕ್ಕು ಸ್ವಾತಂತ್ರ್ಯ ಸಿಕ್ಕಾಗಲೇ ದೊರಕಿದೆ. ಆದರೆ ಇಂದು ಸಂವಿಧಾನದ ಪೀಠಿಕೆಯನ್ನು ಶಾಲೆ, ಕಾಲೇಜುಗಳಲ್ಲಿ ದಿನವೂ ಓದಿಸುವಂತಹ ಸ್ಥಿತಿ ಬಂದಿದೆ ಎಂದರು.

ಖಾಸಗಿ ಶಿಕ್ಷಣ ವ್ಯವಸ್ಥೆ ತಮಗೆ ಬೇಕಾಗಿರುವುದನ್ನು ಮಾಡುತ್ತಿವೆ. ಅವನ್ನು ಸರ್ಕಾರಿ ವ್ಯವಸ್ಥೆ ಅನುಸರಿಸುತ್ತಿದೆ. ಶಿಕ್ಷಣದ ಮೂಲಕ ಎಲ್ಲವನ್ನೂ ವಿಮರ್ಶಾತ್ಮಕವಾಗಿ ನೋಡಬೇಕಾಗಿದೆ.
ಶಿಕ್ಷಣಕ್ಕೂ ಉದ್ಯೋಗಕ್ಕೂ ಸಂಬಂಧವೇ ಇಲ್ಲವಾಗಿದೆ. ಸಕಾರಾತ್ಮಕವಾಗಿ ಯೋಚಿಸಿ ಎಂದು ಹೇಳಲಾಗುತ್ತಿದೆ. ಆದರೆ, ವ್ಯವಸ್ಥೆ ಮಾತ್ರ ತನ್ನ ನಕಾರಾತ್ಮಕ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಇಂದು ಕಾರ್ಪೊರೇಟ್ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಪ್ರವೇಶ ಪಡೆಯುತ್ತಿವೆ. ಸಸ್ಯಾಹಾರ - ಮಾಂಸಾಹಾರಗಳ ನಡುವೆ ತಿಕ್ಕಾಟಗಳಾಗುತ್ತಿವೆ.‌ ಸರ್ಕಾರ ಇಂತಹ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ಹೊಂದುವುದು ಅಗತ್ಯವಾಗಿದೆ ಎಂದೂ ಆಶಿಸಿದರು.

ಟೀಚರ್‌ ಶೈಕ್ಷಣಿಕ ಹಬ್ಬದ ಸಮಾರೋಪದಲ್ಲಿ ಪ್ರೊ. ರಾಮಾನುಜಂ ಮಾತನಾಡಿದರು

‘ಸಮಸ್ಯೆಗಳಿಗೆ ಕಂಪ್ಯೂಟರ್‌ ಪರಿಹಾರ ಒದಗಿಸಲ್ಲ’

ಎಲ್ಲಾ ಸಮಸ್ಯೆಗಳಿಗೆ ಕಂಪ್ಯೂಟರ್‌ ಪರಿಹಾರ ಒದಗಿಸಬಲ್ಲುದು ಎಂಬ ಮನೋಭಾವ ಇಂದು ವಿದ್ಯಾರ್ಥಿಗಳಲ್ಲಿ ಮೂಡಿದೆ ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಮಾನುಜಂ ಹೇಳಿದರು.

ಟೀಚರ್ ಶೈಕ್ಷಣಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಇಂದು ಕೃತಕ ಬುದ್ಧಿಮತ್ತೆ (ಎಐ) ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಯನ್ನುಂಟು ಮಾಡುತ್ತಿದೆ. ಇದು ಕಲಿಕೆಗೆ ಸಹಾಯಕವಾಗಬಲ್ಲುದೇ ಹೊರತು ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಶಿಕ್ಷಕರು ಕೂಡ ಬೋಧನೆಗೆ ಅನುಕೂಲವಾಗುವ ಅಂಶಗಳನ್ನು ಎಐನ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿದರು. ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ವಿ. ಭಂಡಾರಿ ರೇಣುಕಾ ಗುಡಿಮನಿ ಸಂತೋಷ್ ನಾಯಕ್ ಪಟ್ಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.