ಉಡುಪಿ: ‘ಆಕ್ಸ್‌ಫರ್ಡ್, ಕೇಂಬ್ರಿಜ್, ಹಾರ್ವರ್ಡ್‌ಗಳ ಜಮಾನ ಹೋಗಿ ‘ಗುರುಕುಲ’ ಜಮಾನ ಬಂದಿದೆ. ಮುಂದೆ ವಿಶ್ವದೆಲ್ಲೆಡೆ ಸನಾತನ ಧರ್ಮದ ಸಾಮ್ರಾಜ್ಯ ನಿರ್ಮಾಣವಾಗಬೇಕು’ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದರು.
ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ (ಬಿವಿಪಿ), ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (ಸಿಎಸ್‌ಯು) ಹಾಗೂ ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ, ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ‘ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ’ಕ್ಕೆ (ಎಐಒಸಿ) ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಸಂಸ್ಕೃತ ಕಲಿಯುವವರು ಕೀಳರಿಮೆ ಹೊಂದಬಾರದು. ಸಂಸ್ಕೃತ ನಮ್ಮ ಮೂಲ ಭಾಷೆ, ಸನಾತನ ಧರ್ಮ ನಮ್ಮ ಮೂಲ ಧರ್ಮ. ಸನಾತನ ಸಂಸ್ಕೃತ ಭಾಷೆಯು ವಿಶ್ವವನ್ನೇ ಸೆಳೆದಿದೆ. ಇದರ ಕಲಿಕೆಗೆ ಇಂದು ಪ್ರೋತ್ಸಾಹ ಸಿಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
‘ಪರಾಧೀನವಾಗಿದ್ದ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಈಗ ನಾವು ಸ್ವಾವಲಂಬಿಗಳಾಗಿದ್ದೇವೆ. ಪತಂಜಲಿ ಆರ್ಥಿಕ ಸಾಮ್ರಾಜ್ಯವನ್ನು ಅಧ್ಯಾತ್ಮ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇವೆ’ ಎಂದು ಹೇಳಿದರು.
ಕಾಶಿ, ಮಥುರಾ, ಬೃಂದಾವನಕ್ಕೆ ಸಿಗುವಂತಹ ಗೌರವ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಸಿಗಬೇಕು. ಇಲ್ಲಿ ಸಂಸ್ಕೃತ ವಿದ್ವಾಂಸರನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದರು.
ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಮಾತನಾಡಿ, ‘ಪ್ರಾಚೀನ ವಿದ್ಯೆಗಳಿಗೆ ಸಂಸ್ಕೃತವೇ ಮೂಲ. ಆದ್ದರಿಂದ ಸಂಸ್ಕೃತ ಭಾಷೆಯನ್ನು ಉಳಿಸುವ ಕೆಲಸವಾಗಬೇಕು. ದಶ ಸಹಸ್ರ ವರ್ಷಗಳಷ್ಟು ಇತಿಹಾಸವಿರುವ ಸಂಸ್ಕೃತ ಭಾಷೆಯೇ ಅತಿ ಶೇಷ್ಠವಾದುದು’ ಎಂದು ಅಭಿಪ್ರಾಯಪಟ್ಟರು.
ಇಂಗ್ಲಿಷ್ ಅಸ್ಪಷ್ಟ ಭಾಷೆ. ಸಂಸ್ಕೃತವು ಸುಸ್ಪಷ್ಟ ಭಾಷೆ. ಉಳಿದ ಭಾಷೆಗಳು ಕಾಲ ಕಾಲಕ್ಕೆ ಪರಿವರ್ತನೆ ಆಗುತ್ತಿದ್ದರೂ ಸಂಸ್ಕೃತ ಮಾತ್ರ ಏಕರೂಪದಲ್ಲಿದೆ.ಸುಗುಣೇಂದ್ರ ತೀರ್ಥ, ಶ್ರೀ ಪರ್ಯಾಯ ಪುತ್ತಿಗೆ ಮಠ ಉಡುಪಿ
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ‘ಪ್ರಾಚ್ಯವಿದ್ಯೆಗಳು ಪುರುಷಾರ್ಥಕ್ಕೆ ಪೂರಕ’ ಎಂದರು.
ಪತಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಅವರು, ‘ಸಂಸ್ಕೃತ ಭಾಷೆಯಲ್ಲಿ ನಮ್ಮ ಸಂಸ್ಕೃತಿ ಇದೆ. ವಿದ್ಯೆ ಪ್ರಾಚೀನವಾದರೂ, ಆಲೋಚನೆಗಳು ಹೊಸತು. ಈ ಭಾಷೆಯನ್ನು ಉಳಿಸುವ ಅಗತ್ಯವಿದೆ’ ಎಂದರು.
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮಾತನಾಡಿದರು. ಪುಣೆ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಸರೋಜಾ ಭಾಟೆ ಅಧ್ಯಕ್ಷತೆ ವಹಿಸಿದ್ದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ವಿದ್ಯೇಶ ತೀರ್ಥ ಸ್ವಾಮೀಜಿ, ಭಾರತೀಯ ವಿದ್ವತ್ ಪರಿಷತ್‌ನ ಅಧ್ಯಕ್ಷ ಪ್ರೊ. ವೀರನಾರಾಯಣ ಪಾಂಡುರಂಗಿ, ಚ.ಮೂ. ಕೃಷ್ಣ ಶಾಸ್ತ್ರಿ, ಪ್ರೊ. ಕವಿತಾ ಹೋಲೆ, ಶಿವಾನಿ ವಿ., ಕೊರಡ ಸುಬ್ರಹ್ಮಣ್ಯಂ, ರಾಘವೇಂದ್ರ ರಾವ್ ಭಾಗವಹಿಸಿದ್ದರು. ಸಮ್ಮೇಳನದಲ್ಲಿ 1500ಕ್ಕೂ ಹೆಚ್ಚು ವಿದ್ವಾಂಸರು ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.