ADVERTISEMENT

‘ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಾರಿ ತಪ್ಪಿಸುವ ಪ್ರಯತ್ನ’

ಅಕ್ರಮವಾಗಿ ಎಂಡೋಸಲ್ಫಾನ್‌ ಕ್ಯಾನ್‌ ಹೂಳಲಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 4:55 IST
Last Updated 26 ನವೆಂಬರ್ 2024, 4:55 IST
 ಡಾ. ರವೀಂದ್ರನಾಥ ಶಾನುಭಾಗ್‌ 
 ಡಾ. ರವೀಂದ್ರನಾಥ ಶಾನುಭಾಗ್‌    

ಉಡುಪಿ: ‘ಕೇರಳದ ಪ್ಲಾಂಟೇಶನ್ ಕಾರ್ಪೊರೇಷನ್‌ನವರ ಗೋದಾಮುಗಳಲ್ಲಿ ಉಳಿದಿದ್ದ ವಿಷಕಾರಕ ಕೀಟ ನಾಶಕವನ್ನು ಕರ್ನಾಟಕದ ಗಡಿಭಾಗವಾದ ಕೇರಳದ ಮಿಂಚಿನಪದವಿನ ಪಾಳು ಬಾವಿಯಲ್ಲಿ ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿ ದಾರಿ ತಪ್ಪಿಸುವ ಪ್ರಯತ್ನ’ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಉಡುಪಿ ಅಧ್ಯಕ್ಷ ರವೀಂದ್ರನಾಥ ಶಾನುಭಾಗ್‌ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಗೇರು ತೋಟದಿಂದ ಸಂಗ್ರಹಿಸಿದ ಮಣ್ಣು ಮತ್ತು ನೀರಿನಲ್ಲಿ ಎಂಡೋಸಲ್ಫಾನ್‌ ಅಂಶ ಪತ್ತೆಯಾಗಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು ಎಂದು ಹೇಳಿದರು.

ಮಣ್ಣು ಮತ್ತು ನೀರಿನಲ್ಲಿ ಎಂಡೋಸಲ್ಫಾನ್‌ ಅಂಶವಿದೆ ಹಾಗೂ ಇದು ಕೇರಳ- ಕರ್ನಾಟಕ ಗಡಿ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಾವು ರಾಷ್ಟ್ರೀಯ ಹಸಿರು ನಾಯ್ಯಾಲಯಕ್ಕೆ ನೀಡಿದ್ದ ದೂರಿನಲ್ಲಿ ಹೇಳಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ADVERTISEMENT

ಗೇರು ಕಾರ್ಪೊರೇಷನ್‌ನಲ್ಲಿ ಸಿಬ್ಬಂದಿಯಾಗಿದ್ದ ಅಚ್ಚುತ ಮಣಿಯಾಣಿ ಎಂಬುವರು 2013ರಲ್ಲಿ ನಿವೃತ್ತರಾದಾಗ, ಸುಮಾರು 600 ಲೀಟರ್‌ ಎಂಡೋಸಲ್ಫಾನನ್ನು ಕೇರಳ- ಕರ್ನಾಟಕದ ಗಡಿಭಾಗದ ಮಿಂಚಿನಪದವು ಎಂಬಲ್ಲಿರುವ ಗೇರು ತೋಟದಲ್ಲಿ ಹೂಳಿದ್ದಾರೆ ಎಂದು ಮಾಹಿತಿ ನೀಡಿದ್ದರು. 2011ರಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತಾನೂ ಭಾಗವಹಿಸಿದ್ದೆ ಎಂಬ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ಇದರ ಸತ್ಯಾಸತ್ಯತೆಯನ್ನು ಪರಮರ್ಶಿಸುವಂತೆ ಸರ್ಕಾರಿ ಇಲಾಖೆಗಳಿಗೆ ನಿರ್ದೇಶನ ನೀಡಲು ನಾವು ನ್ಯಾಯಾಲಯವನ್ನು ವಿನಂತಿಸಿದ್ದೆವು ಎಂದರು.

ಪಾಳು ಬಾವಿಯಲ್ಲಿ ಹಾಕಿರುವ 30 ಅಡಿ ಮಣ್ಣನ್ನು ಹೊರತೆಗೆದು ಅದರ ಕೆಳಗೆ ಎಂಡೋಸಲ್ಫಾನ್‌ ತುಂಬಿದ ಕ್ಯಾನ್‌ಗಳಿವೆಯೇ ಎಂಬುದನ್ನು ಖಚಿತಪಡಿಸುವ ಬದಲು ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಎಂಡೋಸಲ್ಫಾನ್‌ ಅಂಶವಿಲ್ಲ ಎಂದು ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ನೀಡಿ ದೂರಿನಲ್ಲಿರುವ ಪ್ರಮುಖ ಅಂಶಗಳನ್ನು ವಿಷಯಾಂತರ ಮಾಡುವ ಪ್ರಯತ್ನ ನಡೆದಿದೆ ಎಂದು ಶಾನುಭಾಗ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.