ADVERTISEMENT

ಕಟಾವು ಯಂತ್ರದ ಬಾಡಿಗೆ ನಿಯಂತ್ರಣ ಮಾಡಿ: ರೈತರ ಒಕ್ಕೊರಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 4:24 IST
Last Updated 22 ನವೆಂಬರ್ 2024, 4:24 IST
ಕಾಡೂರು ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆ ನಡೆಯಿತು
ಕಾಡೂರು ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆ ನಡೆಯಿತು    

ಬ್ರಹ್ಮಾವರ: ಭತ್ತದ ಕಟಾವು ಯಂತ್ರದ ಬಾಡಿಗೆ ದರ ಪ್ರಸಕ್ತ ವರ್ಷದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಡೂರು ಗ್ರಾಮ ಪಂಚಾಯಿತಿ ಪ್ರಥಮ ಹಂತದ ಗ್ರಾಮಸಭೆಯಲ್ಲಿ ರೈತರು ಆಗ್ರಹಿಸಿದರು.

ತಂತ್ರಾಡಿ ಚಂದ್ರಶೇಖರ ಭಟ್, ಗ್ರಾ.ಪಂ ಸದಸ್ಯ ರಘುರಾಮ ಶೆಟ್ಟಿ ಸೇರಿದಂತೆ ರೈತ ಪ್ರತಿನಿಧಿಗಳು ಮಾತನಾಡಿ ಅಕಾಲಿಕ ಮಳೆ ಹಾಗೂ ಕಾಡುಪ್ರಾಣಿಗಳ ಹಾವಳಿಯ ನಡುವೆ ಭತ್ತದ ಬೆಳೆ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಕೃಷಿಗಾಗಿ ಹೂಡಿದ ಹಣವೇ ಹಿಂದಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕಟಾವಿಗೆ ದೊಡ್ಡ ಮೊತ್ತ ವೆಚ್ಚ ಮಾಡುವುದು ಕಷ್ಟ ಎಂದರು.

ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಲಂಧರ ಶೆಟ್ಟಿ ಮಾತನಾಡಿ ಭತ್ತ ಕಟಾವು ಯಂತ್ರಗಳಿಗೆ ಸಂಬಂಧಿಸಿ ಸ್ಥಳೀಯವಾಗಿ ವ್ಯವಸ್ಥೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮಂದಾರ್ತಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನೇತ್ರದಾನದ ಮಹತ್ವದ ಕುರಿತು ವಿವರಿಸಿದರು. ಸಾಕ್ಷರತಾ ತಂಡದ ಮುಖ್ಯಸ್ಥರಾದ ಮೀರಾ ಮತ್ತು ಅರ್ಪಿತಾ ನಕಲಿ ಫೋನ್‌ ಕರೆಗಳ ಹಾವಳಿ ಕುರಿತು ಜಾಗೃತಿ ವಹಿಸುವಂತೆ ತಿಳಿಸಿದರು. ನೋಡಲ್ ಅಧಿಕಾರಿ ನಾಗರಾಜ್ ಮಾತನಾಡಿದರು.

ಡಾಕ್ಟರೇಟ್ ಪದವಿ ಪಡೆದ ತಂತ್ರಾಡಿಯ ರಮೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರಭಾವತಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ವೀಣಾ, ಸದಸ್ಯರಾದ ರಘುರಾಮ ಶೆಟ್ಟಿ, ಪಾಂಡುರಂಗ ಶೆಟ್ಟಿ, ವಿಜಯ ಮರಕಾಲ, ಅಮಿತಾ, ಅಮ್ಮಣ್ಣಿ, ಗುಲಾಬಿ, ಗಿರಿಜಾ, ಗಿರೀಶ್, ಸತೀಶ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ ಕೆ.ಸ್ವಾಗತಿಸಿದರು.

ಮನ್‌ರೇಗಾ ಯೋಜನೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ಕಾಡುಪ್ರಾಣಿ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಭತ್ತದ ಕಟಾವು ಯಂತ್ರ ಲಭ್ಯತೆ ಬಗ್ಗೆ ಚರ್ಚೆ
ಗ್ರಾಮಸಭೆಯಲ್ಲಿ ಹೆಚ್ಚಿನ ನಾಗರಿಕರು ಭಾಗವಹಿಸುವುದರೊಂದಿಗೆ ವಿಷಯಧಾರಿತವಾಗಿ ಅರ್ಥಪೂರ್ಣ ಚರ್ಚೆ ಮಾಡುತ್ತಿರುವುದರಿಂದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿದೆ.
–ನಾಗರಾಜ್‌ ನೋಡಲ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.