ADVERTISEMENT

ಕೋಟ: ಭತ್ತದ ಬೆಲೆ ನಿಗದಿ ಬಗ್ಗೆ ರೈತರು, ಮಿಲ್ ಮಾಲಕರ ಸಭೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:46 IST
Last Updated 22 ಅಕ್ಟೋಬರ್ 2024, 14:46 IST
ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಭತ್ತದ ಬೆಲೆಯನ್ನು ಹೆಚ್ಚಳಗೊಳಿಸಬೇಕು ಎನ್ನುವ ರೈತರ ಮನವಿ ಮೇರೆಗೆ ರೈತರು ಹಾಗೂ ಮಿಲ್ ಮಾಲಕರೊಂದಿಗೆ ಸೌಹಾರ್ದಯುತವಾದ ಸಭೆ ನಡೆಯಿತು
ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಭತ್ತದ ಬೆಲೆಯನ್ನು ಹೆಚ್ಚಳಗೊಳಿಸಬೇಕು ಎನ್ನುವ ರೈತರ ಮನವಿ ಮೇರೆಗೆ ರೈತರು ಹಾಗೂ ಮಿಲ್ ಮಾಲಕರೊಂದಿಗೆ ಸೌಹಾರ್ದಯುತವಾದ ಸಭೆ ನಡೆಯಿತು   

ಕೋಟ(ಬ್ರಹ್ಮಾವರ): ಭತ್ತದ ಬೆಲೆ ಹೆಚ್ಚಳಗೊಳಿಸಬೇಕು ಎನ್ನುವ ರೈತರ ಮನವಿ ಮೇರೆಗೆ ಕೋಟದ ರೈತಧ್ವನಿ ಸಂಘಟನೆ ಆಶ್ರಯದಲ್ಲಿ ‘ರೈತರು ಹಾಗೂ ಮಿಲ್ ಮಾಲಕರೊಂದಿಗೆ ಸೌಹಾರ್ದಯುತ’ ಸಭೆ ನಡೆಯಿತು.

ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ, ‘ರೈತರು ಬೆಳೆದ ಭತ್ತಕ್ಕೆ ಹತ್ತಾರು ವರ್ಷದಿಂದ ಬೆಲೆ ಏರಿಕೆಯಾಗಿಲ್ಲ. ಅಕ್ಕಿ ದರದಲ್ಲಿ ನಾಲ್ಕೈದು ಪಟ್ಟು ಏರಿಕೆಯಾದರೂ, ಭತ್ತಕ್ಕೆ ದರ ಹೆಚ್ಚಳವಾಗಿಲ್ಲ. ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರವನ್ನು ಮಿಲ್ ಮಾಲಕರು ಅನುಸರಿಸುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಈ ಬಾರಿ ಉತ್ತಮ ಬೆಲೆ ನೀಡಬೇಕು’ ಎಂದು ತಿಳಿಸಿದರು.

ಮಿಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ತೆಕ್ಕಟ್ಟೆ ರಮೇಶ್ ನಾಯಕ್ ಮಾತನಾಡಿ, ‘ರೈತರೆಲ್ಲರೂ ಒಟ್ಟಾಗಿ ಬೆಲೆ ಏರಿಕೆ ಬಗ್ಗೆ ಧ್ವನಿ ಎತ್ತುತ್ತಿರುವುದು ಇದೇ ಮೊದಲು. ಇದು ಕೃಷಿ ವಲಯದ ಉತ್ತಮ ಬೆಳವಣಿಗೆಯಾಗಿದೆ. ಆದರೆ, ಭತ್ತಕ್ಕೆ ದರ ನಿಗದಿಪಡಿಸುವುದು ಮಿಲ್ ಮಾಲಕರು ಎನ್ನುವ ತಪ್ಪು ಅಭಿಪ್ರಾಯ ಸರಿಯಲ್ಲ. ಜಾಗತಿಕ ಬದಲಾವಣೆ, ಮಾರುಕಟ್ಟೆ ಮೌಲ್ಯ ಅವಲಂಬಿಸಿ ದರ ನಿಗದಿಯಾಗುತ್ತದೆ. ಆದ್ದರಿಂದ ಈಗಿರುವ ದರವನ್ನು ನಾವಾಗಿ ಏರಿಕೆ ಮಾಡುವುದು-ಕಡಿಮೆ ಮಾಡುವುದು ಅಸಾಧ್ಯ. ರೈತರು ಭತ್ತ ಸಂಗ್ರಹ ಮಾಡಿ, ಉತ್ತಮ ಬೆಲೆ ಬಂದ ಮೇಲೆ ಮಾರಾಟ ಮಾಡಬೇಕು. ಸರ್ಕಾರದ ಮಟ್ಟದಲ್ಲಿ ಉತ್ತಮ ಬೆಂಬಲ ಬೆಲೆಗಾಗಿ ಆಗ್ರಹ ಮಾಡಬೇಕು’ ಎಂದರು.

ADVERTISEMENT

ಮಿಲ್ ಮಾಲಕರ ಸಂಘದ ಸಂತೋಷ ನಾಯಕ್, ರೈತಧ್ವನಿಯ ಟಿ.ಮಂಜುನಾಥ, ಸಂಘಟನೆ ಪ್ರಮುಖರಾದ ಪ್ರತಾಪ ಶೆಟ್ಟಿ ಸಾಸ್ತಾನ, ಟಿ.ಮಂಜುನಾಥ, ತಿಮ್ಮ ಕಾಂಚನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.