ADVERTISEMENT

ಭ್ರೂಣ ಹತ್ಯೆ ವೈದ್ಯಕೀಯ ವಲಯ ತಲೆ ತಗ್ಗಿಸುವ ವಿಚಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:42 IST
Last Updated 20 ಅಕ್ಟೋಬರ್ 2024, 7:42 IST
ಕಾರ್ಕಳ ತಾಲ್ಲೂಕಿನ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 12ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಈಚೆಗೆ ನಡೆಯಿತು.
ಕಾರ್ಕಳ ತಾಲ್ಲೂಕಿನ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 12ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಈಚೆಗೆ ನಡೆಯಿತು.   

ಕಾರ್ಕಳ: ಭ್ರೂಣ ಹತ್ಯೆಯು ವೈದ್ಯಕೀಯ ವಲಯ ತಲೆ ತಗ್ಗಿಸುವ ವಿಚಾರವಾಗಿದ್ದು ಇದರ ಕುರಿತು ವೈದ್ಯ ಸಮುದಾಯ ಅಲೋಚನೆ ಮಾಡಬೇಕಾಗಿದೆ ಎಂದು ಬಜಗೋಳಿಯ ವೈದ್ಯ ಡಾ. ವೆಂಕಟಗಿರಿ ರಾವ್ ಹೇಳಿದರು.

ತಾಲ್ಲೂಕಿನ ಕೂಡ ಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ 12ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

'ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಲಿಂಗ ಸಮಾನತೆ ಸಾಧಿಸಿ' ಹಾಗೂ 'ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ ' ನಮ್ಮ ಎಂಬ ಶಿರೋನಾಮೆಯ ಅಡಿಯಲ್ಲಿ ಶಿಬಿರ ನಡೆಯಿತು.

ADVERTISEMENT

ಶಿಬಿರದ 7ದಿನಗಳಲ್ಲಿ ನಿವೃತ್ತ ಶಿಕ್ಷಕ ಮುನಿರಾಜ ರೇಂಜಾಳ ಅವರು ಪರಿಪೂರ್ಣ ಶಿಕ್ಷಣದ ಕುರಿತು, ಡಾ.ಸತ್ಯನಾರಾಯಣ ಭಟ್ ಅವರು ನಮ್ಮ ಪರಿಸರ ನಮ್ಮ ಜವಾಬ್ದಾರಿ ಎಂಬ ಕುರಿತು, ಡಾ. ಚಂದ್ರಕಾಂತ ಜೋಷಿ ಅವರು ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಕುರಿತು, ಬೆನೆಡಿಕ್ಟ್ ಫೆರ್ನಾಂಡಿಸ್ ಅವರು " ಮಾಹಿತಿ ಹಕ್ಕುಗಳ ಅಧಿನಿಯಮದ ಕುರಿತು, ಆರತಿ ಅಶೋಕ್ ಅವರು ನಮ್ಮ ನೈಸರ್ಗಿಕ ಸಂಪನ್ಮೂಲಗಳ ಪ್ರಾಮುಖ್ಯತೆ ಕುರಿತು, ಸಂತೋಷ್ ಮಾಳ ಅವರು ಕರಕೌಶಲ್ಯ ಕುರಿತು, ಸುಜಿತ್ ಮಾಳ ಅವರು ರಂಗ ತರಬೇತಿ ಕುರಿತು ಮಾಹಿತಿ ನೀಡಿದರು.

ರೋಟರಿ ಕ್ಲಬ್ ಕಾರ್ಕಳ ಹಾಗು ವನ್ಯ ಜೀವಿ ಉಪವಿಭಾಗದ ಸಹಯೋಗದಲ್ಲಿ ಕುದುರೆಮುಖ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹ ಮತ್ತು ವಿಲೇವಾರಿ ಕಾರ್ಯಕ್ರಮ ನಡೆಯಿತು. ಆರತಿ ಅಶೋಕ್ ಅವರ ಸಹಯೋಗದಲ್ಲಿ ಸ್ವರ್ಣ ನದಿ ತಟಗಳಲ್ಲಿ ಸು. 300 ಗಿಡಗಳನ್ನು ನೆಟ್ಟು ಜಲರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ದ್ವಿತೀಯ ಪಿ.ಯು .ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 7 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉದ್ಯಮಿ ವಿಶ್ವೇಶ್ವರ ಜೋಶಿ, ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಜಿ ಶೆಟ್ಟಿ , ವಿಶ್ರಾಂತ ಮುಖ್ಯಶಿಕ್ಷಕ ವಸಂತ್ ಎಂ, ವಸಂತ್ ಸೇರಿಗಾರ್, ಸುಧಾಕರ್ ಶೆಟ್ಟಿ , ಹರಿಣಿ, ಯೂಟ್ಯೂಬ್ ಚಾನಲಿನ ಚಂದು, ದಿವಾಕರ್ ಸೇರ್ವೆಗಾರ್ ಇದ್ದರು. ಸ್ವಯಂಸೇವಕ ಗುರುಪ್ರಸಾದ್, ಅಶ್ವಿತಾ ಶಿಬಿರದ ಅನಿಸಿಕೆಗಳನ್ನು ಹಂಚಿಕೊಂಡರು. ಸಂಧ್ಯಾ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಶಿಬಿರದ ವರದಿ ವಾಚಿಸಿ ವಂದಿಸಿದರು. ಸ್ವಯಂ ಸೇವಕಿ ಅನ್ವಿತಾ ನಿರೂಪಿಸಿದರು. ಅತ್ಯುತ್ತಮ ಕಾರ್ಯನಿರ್ವಾಹಣೆಗೆ ಚಿಗುರು ತಂಡ, ಉತ್ತಮ ತಂಡವಾಗಿ ನಿಸರ್ಗ ತಂಡ, ಕ್ರಿಯಾಶೀಲ ತಂಡವಾಗಿ ಬೆಳಕು ತಂಡ ಪ್ರಶಸ್ತಿ ಪಡೆದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.