ADVERTISEMENT

ಉಡುಪಿ | ಮತ್ಸ್ಯ ಕ್ಷಾಮ: ನಾಡ ದೋಣಿ ಮೀನುಗಾರರಿಗಿಲ್ಲ ಲಾಭ

ಪ್ರಕ್ಷುಬ್ಧ ಸಮುದ್ರದಿಂದಲೂ ಸಂಕಷ್ಟ: ಕಡಲಿಗಿಳಿದರೂ ಸಿಗುತ್ತಿಲ್ಲ ಮೀನು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:05 IST
Last Updated 25 ಜುಲೈ 2024, 5:05 IST
ಮಲ್ಪೆಯಲ್ಲಿ ನಾಡದೋಣಿ ಮೀನುಗಾರರು ಬಲೆಯಿಂದ ಮೀನು ಬಿಡಿಸುತ್ತಿರುವುದು
ಮಲ್ಪೆಯಲ್ಲಿ ನಾಡದೋಣಿ ಮೀನುಗಾರರು ಬಲೆಯಿಂದ ಮೀನು ಬಿಡಿಸುತ್ತಿರುವುದು   

ಉಡುಪಿ: ಮಳೆಗಾಲದಲ್ಲಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿದ್ದಂತೆ ನಾಡದೋಣಿಗಳ ಮೀನುಗಾರಿಕೆ ಗರಿಗೆದರುತ್ತದೆ. ಆದರೆ ಈ ಬಾರಿ ಗಾಳಿ, ಬಿರುಸಿನ ಮಳೆ ಜೊತೆಗೆ ಮತ್ಸ್ಯ ಕ್ಷಾಮದಿಂದ ನಾಡದೋಣಿ ಮೀನುಗಾರರು ಕಂಗೆಟ್ಟಿದ್ದಾರೆ.

ಎರಡು ತಿಂಗಳು ದೊಡ್ಡ ಬೋಟ್‌ಗಳು ಕಡಲಿಗಿಳಿಯದ ಕಾರಣ ನಾಡದೋಣಿ ಮೀನುಗಾರರಿಗೆ ಅದು ಸುಗ್ಗಿ ಕಾಲ. ಈ ಅವಧಿಯಲ್ಲಿ ಮೀನುಗಳ ಪೂರೈಕೆ ಕೊರತೆ ಇರುವುದರಿಂದ ಅವರು ಹಿಡಿದು ತರುವ ಮೀನಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.

ಈ ಬಾರಿ ಟ್ರಾಲಿಂಗ್ ನಿಷೇಧ ತೆರವಾಗಲು ಇನ್ನು ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ ಮೀನುಗಾರಿಕೆಗೆ ತೆರಳಿದರೂ ಮೀನು ಸಿಗದೆ ಬರಿಗೈಯಲ್ಲಿ ವಾಪಾಸಾಗುವ ಸ್ಥಿತಿ ಇದೆ. ನಾಡದೋಣಿಗೆ ಸಮುದ್ರದಲ್ಲಿ ಹೆಚ್ಚು ದೂರ ಹೋಗಿ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ದಡದ ಸಮೀಪದಲ್ಲಿ ಮೀನುಗಳೇ ಸಿಗುತ್ತಿಲ್ಲ. ಮೀನು ಸಿಗದೆ ದೋಣಿಯ ಎಂಜಿನ್‌ಗೆ ಹಾಕಿದ ಸೀಮೆಎಣ್ಣೆ ವೆಚ್ಚವೂ ನಷ್ಟವಾಗುತ್ತದೆ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಾರೆ.

ಕಂತಲೆ, ಪಟ್ಟಬಲೆ, ಟ್ರಾಲ್, ಕೈರಂಪಣಿ ವಿಧಾನಗಳ ಮೂಲಕ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸಲಾಗುತ್ತದೆ. ಮೀನು ಯಥೇಚ್ಛವಾಗಿ ದೊರಕಿದರೆ ಅದನ್ನು ದೋಣಿಯಲ್ಲಿ ಹೋದವರು ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಾಡದೋಣಿಗಳನ್ನು ಹೊಂದಿರುವ ಹೆಚ್ಚಿನವರು ಅವರೇ ಮೀನುಗಾರಿಕೆಗೆ ತೆರಳುತ್ತಾರೆ.

ADVERTISEMENT

ಮೀನು ಸಿಗದಿದ್ದರೂ ದೋಣಿಯಲ್ಲಿ ತೆರಳಿದ ಮೀನುಗಾರರಿಗೆ ₹200ರಿಂದ ₹300 ಬೋನಸ್‌ ಕೊಡಬೇಕಾಗುತ್ತದೆ. ಸೀಮೆ ಎಣ್ಣೆ, ಬೋನಸ್‌  ಸೇರಿ ಕೈಯಿಂದ ಹಣ ಖರ್ಚಾಗುತ್ತದೆ. ಸೀಮೆಎಣ್ಣೆ ದರ ಲೀಟರ್‌ಗೆ ₹70 ಗಡಿ ದಾಟಿದೆ. ಇದರಿಂದ ಮೀನುಗಾರಿಕೆ ದುಬಾರಿಯಾಗಿದೆ ಎನ್ನುತ್ತಾರೆ ಮಲ್ಪೆಯ ನಾಡದೋಣಿ ಮಾಲೀಕ ನವೀನ್ ಜತ್ತನ್‌.

ಸಿಗಡಿ, ಬಂಗುಡೆ ಮೊದಲಾದ ಮೀನುಗಳು ಸಿಕ್ಕಿದರೆ ಹೆಚ್ಚು ಲಾಭ. ಆದರೆ ಈ ಸಲ ಸಮುದ್ರಕ್ಕೆ ತೆರಳಿದರೂ ಅಂತಹ ಮೀನುಗಳೇ ಸಿಗುತ್ತಿಲ್ಲ ಎನ್ನುತ್ತಾರೆ ಅವರು.

ಮಲ್ಪೆಯಲ್ಲಿ ಅಂದಾಜು 1,200 ನಾಡ ದೋಣಿಗಳಿವೆ. ಆದರೆ ಈ ಬಾರಿ ಎಲ್ಲರಿಗೂ ನಷ್ಟ ಉಂಟಾಗಿದೆ. ಮೀನುಗಾರರು ಬೆಳಿಗ್ಗೆ ತೆರಳಿ ಸಂಜೆ ವಾಪಸ್‌ ಬರುತ್ತಾರೆ. ಈ ಬಾರಿ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದರೂ ಬಂಗುಡೆ, ಬೂತಾಯಿಯಂತಹ ಮೀನುಗಳ ಕ್ಷಾಮ ಎದುರಾಗಿದೆ ಎನ್ನುತ್ತಾರೆ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ‌‌ ಸುಂದರ್‌ ಸಾಲ್ಯಾನ್‌.

ಸಮುದ್ರದ ಅಲೆಗಳ ಅಬ್ಬರಕ್ಕೆ ಅಂಜಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮೀನುಗಾರರು ಹಲವು ಸಲ ವಾಪಸ್‌ ಬಂದಿದ್ದಾರೆ ಎಂದು ಅವರು ತಿಳಿಸಿದರು.

ನಾಡ ದೋಣಿ ಮೀನುಗಾರರಿಗೆ ಈ ವರ್ಷದಷ್ಟು ನಷ್ಟ ಯಾವತ್ತೂ ಆಗಿಲ್ಲ. ನಮಗೆ ಸಿಗುವುದು ಎರಡು ತಿಂಗಳ ಅವಧಿ. ಸಮುದ್ರ ಪ್ರಕ್ಷುಬ್ದಗೊಂಡಿದ್ದ ಕಾರಣದಿಂದ ಹಲವು ದಿನ ಕಡಳಿಗಿಳಿಯಲಾಗಿಲ್ಲ. ಕಡಲಿಗಿಳಿದರೂ ಮೀನುಗಳೇ ಸಿಗುತ್ತಿಲ್ಲ.
ಸುಂದರ್‌ ಸಾಲ್ಯಾನ್‌, ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ‌‌
ಈ ಬಾರಿ ಕಡಲ್ಲಲಿ ಪದೇ ಪದೇ ತೂಫಾನ್‌ ಎದ್ದಿದ್ದರೂ ಮೀನುಗಳೇ ಸಿಗುತ್ತಿಲ್ಲ. ಎರೆಬಾಯಿ ಮೊದಲಾದ ಮೀನುಗಳನ್ನು ಬಿಟ್ಟು ಒಳ್ಳೆಯ ಮತ್ಸಗಳು ಸಿಗುತ್ತಿಲ್ಲ.
ನವೀನ್‌ ಜತ್ತನ್‌, ನಾಡ ದೋಣಿ ಮಾಲಕ ಮಲ್ಪೆ
ನಾಡ ದೋಣಿಯಲ್ಲಿ ಒಂದು ಸಲ ಮೀನು ಹಿಡಿಯಲು ಹೋಗಿ ಬರುವಾಗ ಸೀಮೆ ಎಣ್ಣೆಯ ವೆಚ್ಚವೂ ಸೇರಿ ಕನಿಷ್ಠ ₹3ಸಾವಿರ ಖರ್ಚಾಗುತ್ತದೆ. ಮೀನು ಸಿಗದಿದ್ದರೆ ಎಲ್ಲವೂ ನಷ್ಟ.
ರತನ್‌, ಮೀನುಗಾರ ಮಲ್ಪೆ
ಬಲೆಯಿಂದ ಎರೆಬಾಯಿ ಮೀನು ಬಿಡಿಸುತ್ತಿರುವ ಮೀನುಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.