ಉಡುಪಿ: ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ದೇಶದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಇಲ್ಲ ಎಂಬ ಕೊರಗು ಕಾಡುತ್ತಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮೀನುಗಾರಿಕಾ ಸಚಿವಾಲಯ ಸ್ಥಾಪಿಸುವ ಮೂಲಕ ಕೊರಗು ನಿವಾರಿಸಿದರು ಎಂದು ಕೇಂದ್ರದ ಮೀನುಗಾರಿಕೆ ಹಾಗೂ ಪಶುಸಂಗೋಪನಾರಾಜ್ಯ ಖಾತೆ ಸಚಿವ ಡಾ.ಎಲ್.ಮುರುಗನ್ ತಿಳಿಸಿದರು.
ಮಲ್ಪೆಯ ಮೀನುಗಾರಿಕಾ ಬಂದರಿಗೆ ಭಾನುವಾರ ಭೇಟಿನೀಡಿ ಮೀನುಗಾರರೊಂದಿಗೆ ಸಂವಾದ ನಡೆಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಯೋಜನೆಯಡಿ ಮೀನುಗಾರಿಕಾ ಸಚಿವಾಲಯಕ್ಕೆ ₹ 20 ಸಾವಿರ ಕೋಟಿ ಪ್ಯಾಕೇಜ್ ನೀಡಲಾಗಿದೆ. ನೀಲಿ ಕ್ರಾಂತಿಗೆ ಒತ್ತು ನೀಡಲಾಗಿದ್ದು, 2024–25ರೊಳಗೆ ದೇಶದಲ್ಲಿ 204 ಮೀನುಗಾರಿಕಾ ಕ್ಲಸ್ಟರ್, ಬಂದರುಗಳ ನಿರ್ಮಾಣ ಮಾಡಲಾಗುವುದು. 70 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.
ಕಳೆದ ಬಜೆಟ್‌ನಲ್ಲಿ ದೇಶದಲ್ಲಿ ಐದು ಮಾದರಿ ಮೀನುಗಾರಿಕಾ ಬಂದರು ಸ್ಥಾಪನೆ ಘೋಷಣೆ ಮಾಡಲಾಗಿದ್ದು, ಇದೀಗ ಬಂದರುಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಬಂದರಿನಲ್ಲಿ ಶೈತ್ಯಾಗಾರ ಹಾಗೂ ಐಸ್ ಪ್ಲಾಂಟ್‌ಗಳ ನಿರ್ಮಾಣ, ಮೀನುಗಾರರಿಗೆ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವ ಮುರುಗನ್ ಹೇಳಿದರು.
ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕಾ ಇಲಾಖೆಯನ್ನು ಬಲಗೊಳಿಸಲಾಗುತ್ತಿದ್ದು, ಸಮುದ್ರ ಉತ್ಪನ್ನಗಳ ರಫ್ತಿಗೆ ಒತ್ತು ಹಾಗೂ ಒಳನಾಡು ಮೀನುಗಾರಿಕೆಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಅಂತರರಾಜ್ಯ ಸಮುದ್ರ ಗಡಿಗಳ ಸಮಸ್ಯೆಗಳ ನಿವಾರಣೆಗೆ ಸಮಿತಿ ರಚನೆ ಬೇಡಿಕೆಯನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿದ್ದಾಗ ಮೀನುಗಾರರಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿತ್ತು. ಯುಪಿಎ ಅವಧಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮೀನುಗಾರರಿಗೆ ಮಾತ್ರ ವಿನಾಯಿತಿ ಎಂಬ ನಿಯಮ ಬಂತು. ಪ್ರಸ್ತುತ ಮೀನುಗಾರರು ಸಂಕಷ್ಟಕ್ಕೆ ತುತ್ತಾಗಿದ್ದು, ಮತ್ತೆ ಎಲ್ಲ ಮೀನುಗಾರರಿಗೂ ಸುಂಕ ವಿನಾಯಿತಿ ಕೊಡಬೇಕು ಎಂದು ಸಚಿವರನ್ನು ಒತ್ತಾಯಿಸಿದರು.
ಕರಾವಳಿಯಲ್ಲಿರುವ ಹೆಚ್ಚಿನ ಮೀನುಗಾರರು ಬಿಜೆಪಿ ಬೆಂಬಲಿಸಿದ್ದಾರೆ. ಅವರ ಸಮಸ್ಯೆ ಈಡೇರಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ನಾಡದೋಣಿ ಮೀನುಗಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪೂರೈಕೆಯಾಗುತ್ತಿರುವ ಸೀಮೆಎಣ್ಣೆಗೆ ಕೋಟಾ ನಿಗದಿಪಡಿಸಿ ಪ್ರತ್ಯೇಕ ಇಲಾಖೆಯ ಮೂಲಕ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.
ಮಲ್ಪೆಯಲ್ಲಿ 2 ಸಾವಿರದಿಂದ 2,500 ಬೋಟ್‌ಗಳಿದ್ದು, ಮಲ್ಪೆ ಬಂದರು ವಿಸ್ತರಣೆಗೆ ಅಗತ್ಯ ಅನುದಾನ ನೀಡಬೇಕು, ಬಂದರು ಡ್ರೆಜ್ಜಿಂಗ್‌ಗೆ ಕ್ರಮ ಕೈಗೊಳ್ಳಬೇಕು. ಡೀಸೆಲ್ ಮೇಲಿನ ರಸ್ತೆ ಸುಂಕವನ್ನು ತೆಗೆದುಹಾಕಬೇಕು ಎಂದು ಶಾಸಕ ರಘುಪತಿ ಭಟ್ ಮನವಿ ಮಾಡಿದರು.
ಮೀನುಗಾರಿಕಾ ಸಚಿವ ಅಂಗಾರ ಮಾತನಾಡಿ, ಅಧಿಕಾರ ಸ್ವೀಕರಿಸಿದ 9 ತಿಂಗಳಲ್ಲಿ 9 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಂದರು, ಜಟ್ಟಿ ನಿರ್ಮಾಣ ಹಾಗೂ ಮೀನುಗಾರರ ಸಮಸ್ಯೆಗಳನ್ನು ಸ್ವತಃ ಅರಿತಿದ್ದೇನೆ. ಶೀಘ್ರ ಮೀನುಗಾರರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಮೀನುಗಾರಿಕಾ ಇಲಾಖೆಗೆ ಸಂಬಂಧಿಸಿದ ನಾಲ್ಕು ಹಾಗೂ ಬಂದರು ಅಭಿವೃದ್ಧಿಗೆ ಸಂಬಂಧಿಸಿದ 12 ಪ್ರಾಜೆಕ್ಟ್‌ಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆ ನೀಡಬೇಕು ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ದಕ್ಷಿಣ ಕನ್ನಡ ಹಾಗೂ ಉಡುಪಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್, ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ದೊಡ್ಮನಿ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಇಲಾಖೆಯ ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.