ಉಡುಪಿ: ಟ್ರಾಲಿಂಗ್ ನಿಷೇಧ ತೆರವಾಗಿ ತಿಂಗಳು ಕಳೆದರೂ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾ ದೋಣಿಗಳು ಮತ್ತೆ ದಡ ಸೇರಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.
ಸಾಮಾನ್ಯವಾಗಿ ಆಗಸ್ಟ್ 10ರ ನಂತರ ಮೀನುಗಾರಿಕಾ ಚಟುವಟಿಕೆಗಳು ಚುರುಕುಗೊಂಡು, ದೋಣಿಗಳು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುತ್ತವೆ. ಮಲ್ಪೆಯಲ್ಲಿ ಸಮುದ್ರ ಪೂಜೆ ನಡೆಸಿದ ಬಳಿಕ ಬಹುತೇಕ ದೋಣಿಗಳು ಕಡಳಿಗಿಳಿಯುತ್ತವೆ. ಈ ಬಾರಿ ತೂಫಾನ್ ಕಾರಣಕ್ಕೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದೋಣಿಗಳ ಕಡಳಿಗಿಳಿದಿಲ್ಲ. ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಕೂಡಾ ಕಾರವಾರ, ಮಲ್ಪೆ, ಗಂಗೊಳ್ಳಿ ಮೀನುಗಾರಿಕಾ ಬಂದರುಗಳಿಗೆ ಮರಳಿವೆ.
ದೋಣಿಗಳು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದರೆ ಹತ್ತರಿಂದ ಹದಿನೈದು ದಿವಸಗಳ ಬಳಿಕ ಮರಳುತ್ತವೆ. ಆದರೆ ಹವಾಮಾನ ಇಲಾಖೆಯು ತೂಫಾನ್ ಕುರಿತು ಮುನ್ಸೂಚನೆ ನೀಡಿದರೆ ಮರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಬೋಟ್‌ಗೆ ಬಳಸಿದ ಡೀಸೆಲ್‌ನ ಖರ್ಚು, ಮೀನುಗಳಿಗೆ ಹಾಕಲು ಕೊಂಡೊಯ್ದ ಮಂಜುಗಡ್ಡೆಗೆ ಹಾಕಿರುವ ಹಣವೂ ನಷ್ಟವಾಗುತ್ತದೆ ಎನ್ನುತ್ತಾರೆ ಬೋಟ್ ಮಾಲಕರು.
ಮೀನುಗಾರಿಕಾ ಚಟುವಟಿಕೆ ನಡೆದರಷ್ಟೇ ಮಲ್ಪೆ ಸುತ್ತಮುತ್ತಲಿನ ಮೀನುಗಾರರಿಗೆ ಹಾಗೂ ಮೀನುಗಾರಿಕೆಯನ್ನೇ ನಂಬಿರುವ ಅನೇಕ ಕುಟುಂಬಗಳಿಗೆ ಆಸರೆಯಾಗುತ್ತದೆ. ಈ ಬಾರಿ ಮೀನುಗಾರಿಕೆ ನಡೆಯದ ಕಾರಣ ಮೀನು ಮಾರಾಟ ಮಾಡುವ ಮಹಿಳೆಯರು ಸೇರಿದಂತೆ ಹಲವರ ಸ್ಥಿತಿ ಸಂಕಷ್ಟಮಯವಾಗಿದೆ.
ಎರಡು ತಿಂಗಳ ಬಿಡುವಿನ ಬಳಿಕ ಮೀನುಗಾರಿಕೆ ಆರಂಭವಾಗುವ ಈ ಕಾಲದಲ್ಲಿ ಸಾಮಾನ್ಯವಾಗಿ ಸಾಕಷ್ಟು ಮತ್ಸಸಂಪತ್ತು ಸಿಗುತ್ತಿತ್ತು. ಈ ಸಲ ಅಲೆಗಳ ಅಬ್ಬರ ಮತ್ತು ಹವಾಮಾನ ಇಲಾಖೆಯ ಎಚ್ಚರಿಕೆಯಿಂದಾಗಿ ದೋಣಿಗಳು ಅಲ್ಲಲ್ಲಿ ಬಂದರಿನಲ್ಲಿ ಲಂಗರು ಹಾಕಿವೆ. ಇದರಿಂದ ದೋಣಿ ಮಾಲಕರಿಗೂ, ಮೀನುಗಾರರಿಗೂ ತುಂಬಾ ನಷ್ಟವಾಗಿದೆ ಎನ್ನುತ್ತಾರೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.
ಮೀನುಗಾರಿಕೆಗಾಗಿ ಆಳಸಮುದ್ರಕ್ಕೆ ತೆರಳಿದ್ದ ಕೆಲ ದೋಣಿಗಳಿಗೂ ಮೀನು ಸಿಕ್ಕಿಲ್ಲ. ಮತ್ಸಕ್ಷಾಮವೂ ಈ ಬಾರಿ ಕಾಡುತ್ತಿದೆ. ಕಳೆದ ವಾರ ಮಲ್ಪೆಯಲ್ಲಿ ಒಂದು ಕೆ.ಜಿ. ಬಂಗುಡೆ ಮೀನು ₹402ಕ್ಕೆ ಮಾರಾಟವಾಗಿತ್ತು. ಕೇರಳದ ಮೀನುಗಾರರು ಕೂಡ ಈ ಬಾರಿ ಇಲ್ಲಿ ದಡ ಸೇರಿದ್ದಾರೆ ಎನ್ನುತ್ತಾರೆ ಮಲ್ಪೆಯ ಮೀನುಗಾರ ರತನ್.
ಗ್ರಾಹಕರಿಗೂ ಬರೆ: ಆಗಸ್ಟ್ ತಿಂಗಳು ಸಾಕಷ್ಟು ಮತ್ಸಸಂಪತ್ತು ಸಿಗುವ ಕಾಲ. ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಯುವುದರಿಂದ, ಪ್ರತಿ ದೋಣಿಗಳು ಕಡಲಿನಿಂದ ಮರಳುವಾಗ ಸಾಕಷ್ಟು ಮೀನುಗಳನ್ನು ಹೊತ್ತು ತರುತ್ತವೆ. ಮೀನುಗಳ ಲಭ್ಯತೆ ಅಧಿಕವಾದಂತೆ ದರವೂ ಕಡಿಮೆಯಾಗುತ್ತದೆ. ಆದರೆ ಈ ಬಾರಿ ಮೀನುಗಳೇ ಸಿಗದ ಕಾರಣ ಸಣ್ಣ ದೋಣಿಗಳಲ್ಲಿ ಹಿಡಿದು ತರುವ ಮೀನುಗಳ ದರವೂ ದುಬಾರಿಯಾಗಿದೆ. ಇದರಿಂದ ಗ್ರಾಹಕರ ಜೇಬಿಗೂ ಹೊರೆಯಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ದೋಣಿಗಳು ಕಡಲಿಗೆ ತೆರಳುವುದು ಮತ್ತು ಅರ್ಧದಿಂದ ಮರಳಿ ಬರುವುದೇ ಆಗಿದೆ. ಮೀನು ಹುಡುಕುವ ಹಿಡಿಯುವ ವಾತಾವರಣ ಸಮುದ್ರದಲ್ಲಿಲ್ಲ.ದಯಾನಂದ ಸುವರ್ಣ, ಮೀನುಗಾರರ ಸಂಘದ ಅಧ್ಯಕ್ಷ ಮಲ್ಪೆ
ಸಮುದ್ರಕ್ಕೆ ತೆರಳಿದ್ದ ಲೈಲ್ಯಾಂಡ್ ಪರ್ಸೀನ್ ದೋಣಿಗಳು ತೂಫಾನ್ ಕಾರಣಕ್ಕೆ ಮಲ್ಪೆ ಬಂದರಿಗೆ ಮರಳಿವೆ. ಅವರಿಗೆ ಮೀನುಗಳೇ ಸಿಕ್ಕಿಲ್ಲ. ಸೆ.15ರ ಬಳಿಕವೇ ಮೀನುಗಾರಿಕೆ ಚುರುಕುಗೊಳ್ಳುವ ಸಾಧ್ಯತೆ ಇದೆ.ರತನ್, ಮೀನುಗಾರ ಮಲ್ಪೆ
ಬಂಗುಡೆ ಬೂತಾಯಿ ಮೀನುಗಳು ಈ ಸಲ ಸಿಗುತ್ತಿಲ್ಲ. ಅಂಜಲ್ ಮಾಂಜಿ ಮೀನುಗಳ ದರ ವಿಪರೀತ ಜಾಸ್ತಿಯಾಗಿದೆ. ಮಲ್ಪೆ ದಕ್ಕೆಗೆ ಬಂದರೆ ಮೀನುಗಳೇ ಇಲ್ಲ.ಸುರೇಂದ್ರ, ಗ್ರಾಹಕ ಮಲ್ಪೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.