ADVERTISEMENT

ಜಾನಪದ ಕಲೆಗಳಲ್ಲಿ ಸಹಜತೆ: ಪುತ್ತಿಗೆ ಶ್ರೀ

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೇಳೈಸಿದ ಜಾನಪದ ಹಬ್ಬ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:48 IST
Last Updated 27 ಅಕ್ಟೋಬರ್ 2024, 14:48 IST
ಜಾನಪದ ಹಬ್ಬವನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಭಾನುವಾರ ಉದ್ಘಾಟಿಸಿದರು
ಜಾನಪದ ಹಬ್ಬವನ್ನು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಭಾನುವಾರ ಉದ್ಘಾಟಿಸಿದರು   

ಉಡುಪಿ: ಉತ್ತಮ ಸಂದೇಶಗಳನ್ನು ನೀಡುವ ಜಾನಪದ ಕಲೆಗಳಲ್ಲಿ ಸಹಜತೆ ಕಾಣಬಹುದು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೃಷ್ಣ ಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾನಪದ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಇವತ್ತು ಆಧುನಿಕ ಕಲೆಗಳ ಮುಖಾಂತರ ಕೃತ್ರಿಮತೆಯನ್ನು ಸೃಷ್ಟಿಸುತ್ತಿದ್ದೇವೆ. ಪ್ರಾಚೀನ ಕಲೆಗಳಾದ ಜಾನಪದ ಕಲೆಗಳ ಮೂಲಕ ಮತ್ತೆ ಸಹಜತೆಯನ್ನು ತರಬೇಕು ಎಂದು ಹೇಳಿದರು.

ADVERTISEMENT

ಜಾನಪದ ಕಲೆಯು ಜ್ಞಾನಪ್ರದವಾದ ಕಲೆಯಾಗಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಒಳ್ಳೆಯ ಜ್ಞಾನವನ್ನು ಈ ಕಲೆ ನೀಡುತ್ತಿದೆ. ಈ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ಮಾನವೀಯತೆ ಎಂಬುದು ನಮ್ಮ ಹಿರಿಯರು ಕಟ್ಟಿದ ಮೌಲ್ಯ. ಆ ಮೌಲ್ಯವನ್ನು ಅಳವಡಿಸಿಕೊಂಡು ಜೀವನ ಸಾಗಿಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ನಾನು ಲೋಕಾಯುಕ್ತನಾಗಿ ಕರ್ನಾಟಕಕ್ಕೆ ಬಂದಾಗ ಬಹಳಷ್ಟು ಅನ್ಯಾಯಗಳನ್ನು ಕಂಡಿದ್ದೇನೆ. ಇದು ಯಾಕೆ ಹೀಗೆ ಎಂದು ವಿಚಾರ ಮಾಡಿದಾಗ, ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪ ಎಂದು ನನಗೆ ಅನ್ನಿಸಿತ್ತು ಎಂದು ಹೇಳಿದರು.

ನಾನು ಚಿಕ್ಕವನಿದ್ದಾಗ ನಮ್ಮ ಸಮಾಜವು ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿತ್ತು ಮತ್ತು ತಪ್ಪು ಮಾಡಿದವರನ್ನು ಬಹಿಷ್ಕರಿಸಿ ಶಿಕ್ಷೆ ನೀಡುತ್ತಿತ್ತು. ಇವತ್ತು ಸಮಾಜದ ಭಾವನೆಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಇವತ್ತಿನ ಸಮಾಜವು ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜವಾಗಿದೆ ಎಂದರು.

ಶ್ರೀಮಂತರಾಗಬೇಕೆನ್ನುವ ಪೈಪೋಟಿ ಜನರ ನಡುವೆ ಆರಂಭವಾಗಿದೆ. ಶ್ರೀಮಂತರಾಗುವುದರಲ್ಲಿ ತಪ್ಪಿಲ್ಲ. ಆದರೆ ಕಾನೂನಿನ ಚೌಕಟ್ಟಿನೊಳಗೆ ಆಗಿ. ಇನ್ನೊಬ್ಬರ ಜೇಬಿಗೆ ಕೈಹಾಕಿ, ಇನ್ನೊಬ್ಬರ ಹೊಟ್ಟೆಗೆ ಕಲ್ಲು ಹಾಕಿ ಶ್ರೀಮಂತರಾದರೆ ಅದು ಶಾಶ್ವತವಲ್ಲ ಎಂದು ಹೇಳಿದರು.

ಟ್ರಸ್ಟ್‌ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಗುಜ್ಜಾಡಿ ಸ್ವರ್ಣ ಜುವೆಲ್ಲರ್ಸ್‌ ಮುಖ್ಯ ಹಣಕಾಸು ಅಧಿಕಾರಿ ವರುಣ್‌ ರಾಮದಾಸ್‌ ನಾಯಕ್‌ ಗುಜ್ಜಾಡಿ, ಯಕ್ಷಗಾನ ಕಲಾರಂಗ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರು, ಅರುಣ್‌ ಕುಮಾರ್‌ ಹೆಗ್ಡೆ, ರವಿರಾಜ ನಾಯ್ಕ್‌, ಸುನೀಲ್‌ ಕುಮಾರ್‌ ಶೆಟ್ಟಿ ಇದ್ದರು.

ಅಮಿತಾಂಜಲಿ ಕಿರಣ ನಿರೂಪಿಸಿದರು.

ಗಮನ ಸೆಳೆದ ಕುಣಿತ ಭಜನೆ ಪ್ರೇಕ್ಷಕರನ್ನು ಮೋಡಿ ಮಾಡಿದ ಜನಪದ ನೃತ್ಯಗಳು

ಜಾನಪದ ಕಲೆಗಳು ಯುವ ಜನರಿಗೆ ನಮ್ಮ ಸಂಸ್ಕೃತಿಯ ಬೇರುಗಳನ್ನು ಪರಿಚಯಿಸುವ ಕೆಲಸ ಮಾಡುತ್ತದೆ. ಅವುಗಳಿಗೆ ಪ್ರೋತ್ಸಾಹ ಅಗತ್ಯ

-ಕಿಶೋರ್‌ ಆಳ್ವ ಬೆಂಗಳೂರಿನ ಅದಾನಿ ಸಮೂಹದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.