ADVERTISEMENT

ಉಡುಪಿ: ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 6:10 IST
Last Updated 12 ನವೆಂಬರ್ 2023, 6:10 IST
   

ಉಡುಪಿ: ಉಡುಪಿ: ಭಾನುವಾರ ಊರಿನ ತುಂಬೆಲ್ಲ ದೀಪಾವಳಿ ಸಂಭ್ರಮ, ಸಡಗರ ಮನೆಮಾಡಿದ್ದರೆ ಹಂಪನಕಟ್ಟೆಯ ನೇಜಾರಿನ ತೃಪ್ತಿ ಬಡಾವಣೆಯಲ್ಲಿರುವ ಹಸೀನಾ ಅವರ ಮನೆಯಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿತ್ತು. ಬೆಳ್ಳಂಬೆಳಿಗ್ಗೆಯೇ ಮನೆಯ ತುಂಬೆಲ್ಲ ರಕ್ತದ ಕೋಡಿ ಹರಿದಿತ್ತು. ನಾಲ್ಕು ಜೀವಗಳು ಮನೆಯ ಒಂದೊಂದು ಮೂಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವು.

ಉಡುಪಿಯ ಪಾಲಿಗೆ ಇದೊಂದು ಘೋರ ಹಾಗೂ ಬೆಚ್ಚಿಬೀಳಿಸುವ ಘಟನೆ. ಹಂತಕನ ದುಷ್ಕೃತ್ಯಕ್ಕೆ ತಾಯಿ ಮಕ್ಕಳಾದ ಹಸೀನಾ, ಅಫ್ಸಾನ್, ಅಯ್ನಾಜ್, ಅಸೀಮ್ ಕೊಲೆಯಾಗಿ ಹೋಗಿದ್ದರು. ಈ ಕೃತ್ಯದಿಂದ ನಾಗರಿಕ ಸಮಾಜ ಬೆಚ್ಚಿಬಿದ್ದಿದೆ.

ಬೆಳ್ಳಂಬೆಳಿಗ್ಗೆ ಹರಿದ ನೆತ್ತರು

ADVERTISEMENT

ಬೆಳಿಗ್ಗೆ 8.30 ರಿಂದ 9ರ ಸುಮಾರಿಗೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಸೀನಾ ಅವರ ಮನೆಗೆ ನುಗ್ಗಿದ ಹಂತಕ ಮನಬಂದಂತೆ ಕುಟುಂಬದ ಸದಸ್ಯರಿಗೆ ಚೂರಿಯಿಂದ ಇರಿದಿದ್ದಾನೆ. ಮಹಿಳೆಯರ ಚೀರಾಟ ಕಂಡು ಪಕ್ಕದ ಮನೆಯವರು ಹೊರಗೆ ಬಂದಾಗ ಸಿಕ್ಕಿಬೀಳುವ ಭಯದಿಂದ ಕಾಲ್ಕಿತ್ತಿದ್ದಾನೆ.

ಆಟೋದಲ್ಲಿ ಬಂದನಾ ಹಂತಕ: ಚಾಲಕ ಹೇಳಿದ್ದೇನು?

‘ಬಿಳಿಯ ಶರ್ಟ್‌, ಮುಖಕ್ಕೆ ಮಾಸ್ಕ್‌ ಧರಿಸಿದ್ದ, ನೋಡಲು ಬೆಳ್ಳಗೆ ಹಾಗೂ ಬೊಕ್ಕ ತಲೆಯವನಾಗಿದ್ದ ವ್ಯಕ್ತಿಯೊಬ್ಬ ಬೆಳಿಗ್ಗೆ 8.30ರ ಸುಮಾರಿಗೆ ಸಂತೆಕಟ್ಟೆ ಆಟೋ ನಿಲ್ದಾಣಕ್ಕೆ ಬಂದು ತೃಪ್ತಿ ಬಡಾವಣೆಗೆ ಹೋಗಬೇಕು ಎಂದು ಕೇಳಿದ. ಬಡಾವಣೆ ಅಷ್ಟು ಪರಿಚಿತವಾಗಿರದಿದ್ದರೂ ಹತ್ತಿಸಿಕೊಂಡು ಹಂಪನಕಟ್ಟೆ ಮಾರ್ಗವಾಗಿ ಹೊರಟೆ.

ತೃಪ್ತಿ ಬಡಾವಣೆ ಬರುತ್ತಿದ್ದಂತೆ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ರಸ್ತೆಯ ಬದಿಯ ಮನೆಯ ಮುಂದೆ ಆಟೋ ನಿಲ್ಲಿಸುವಂತೆ ಹೇಳಿದ. ₹ 70 ಬಾಡಿಗೆ ಕೊಟ್ಟು ಮರು ಮಾತನಾಡದೆ ಮನೆಯೊಳಗೆ ಹೊರಟ. ಮನೆಯ ಮುಂದೆ ಹುಡುಗನೊಬ್ಬ ಸೈಕಲ್‌ ತುಳಿಯುತ್ತಿದ್ದ ದೃಶ್ಯ ಕಾಣಿಸಿತು. ಅಲ್ಲಿಂದ ಆಟೋವನ್ನು ಮತ್ತೆ ಸಂತೆಕಟ್ಟೆ ನಿಲ್ದಾಣಕ್ಕೆ ತಂದು ನಿಲ್ಲಿಸಿಕೊಂಡೆ.

9 ಗಂಟೆ ಸುಮಾರಿಗೆ ಅದೇ ವ್ಯಕ್ತಿ ಅವಸರದಲ್ಲಿ ಸಂತೆಕಟ್ಟೆ ನಿಲ್ದಾಣಕ್ಕೆ ಬಂದ. 15 ನಿಮಿಷ ಕಾಯಲು ಹೇಳಿದ್ದರೆ ನಿಮ್ಮನ್ನು ಮರಳಿ ಕರೆದುಕೊಂಡು ಬರುತ್ತಿದ್ದೆ ಎಂದು ಆತನಿಗೆ ಹೇಳಿದೆ. ಅದಕ್ಕೆ ಆತ ಸರಿಯಾಗಿ ಪ್ರತಿಕ್ರಿಯೆ ನೀಡದೆ ಉಡುಪಿಯ ಕರಾವಳಿ ಜಂಕ್ಷನ್‌ ಕಡೆಗೆ ಹೋಗಬೇಕು ಎಂದ. ಆಟೋ ಬಾಡಿಗೆ ಮಾಡುವ ಸರದಿ ಬೇರೆಯವರದ್ದಾಗಿದ್ದರಿಂದ ನಾನು ಹೋಗಲಾಗಲಿಲ್ಲ. ಬದಲಾಗಿ ಮತ್ತೊಬ್ಬ ಚಾಲಕ ಆತನನ್ನು ಆಟೋದಲ್ಲಿ ಕರೆದೊಯ್ದರು. ಇದಾದ ಅರ್ಧ ಗಂಟೆಯಲ್ಲಿ ತೃಪ್ತಿ ಬಡಾವಣೆಯಲ್ಲಿ ನಾಲ್ವರನ್ನು ಕೊಲೆ ಮಾಡಿರುವ ವಿಚಾರ ತಿಳಿಯಿತು. ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಒಂದು ತಾಸಿನ ಹಿಂದೆ ಆಟೋದಲ್ಲಿ ಬಂದ ವ್ಯಕ್ತಿ ಕೊಲೆಯಾದ ಮನೆಯ ಮುಂದೆ ಇಳಿದಿದ್ದು ಸ್ಪಷ್ಟವಾಯಿತು ಎಂದು ಆಟೋ ಚಾಲಕ ಶ್ಯಾಂ ವಿವರ ನೀಡಿದರು.

ಬೆಚ್ಚಿಬಿದ್ದ ಸ್ಥಳೀಯರು

ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿರುವುದನ್ನು ತಿಳಿದು ಉಡುಪಿ ಬೆಚ್ಚಿಬಿದ್ದಿತ್ತು. ಸಂತೆಕಟ್ಟೆ, ಹಂಪನಕಟ್ಟೆ, ಹೂಡೆ, ನೇಜಾರು ಸೇರಿದಂತೆ ಹಲವು ಕಡೆಗಳಿಂದ ನಾಗರಿಕರು ಘಟನಾ ಸ್ಥಳಕ್ಕೆ ಬಂದು ಜಮಾಯಿಸಿದ್ದರು. ಎಲ್ಲರ ಮುಖದಲ್ಲೂ ಆತಂಕ ಎದ್ದು ಕಾಣುತ್ತಿತ್ತು. ರಸ್ತೆಗೆ ಅಡ್ಡಲಾಗಿ ನಿಂತ ಪೊಲೀಸರು ಯಾರನ್ನೂ ಮನೆಯ ಹತ್ತಿರ ಬಿಡಲಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ನೂರಾರು ಮಂದಿ ಸ್ಥಳದಲ್ಲಿ ನೆರೆದಿದ್ದರು.

ಕುಟಂಬಸ್ಥರ ಆಕ್ರಂದನ

ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಗಳು ಜಮಾಯಿಸಿದರು. ಯಾವ ತಪ್ಪಿಗಾಗಿ ಕೊಲೆ ಮಾಡಿದ್ದಾರೆ ಎಂದು ಗೋಳಾಡಿದರು. ಮೃತ ಹಸೀನಾ ಸಹೋದರ ತಂಗಿ ಹಾಗೂ ತಂಗಿಯ ಮಕ್ಕಳ ಸಾವನ್ನು ನೆನೆದು ಬಿಕ್ಕಳಿಸಿ ಅತ್ತರು. ಪೊಲೀಸರು ಯಾರನ್ನೂ ಮನೆಯೊಳಗೆ ಬಿಡಲಿಲ್ಲ. ಸಂಬಂಧಿಗಳನ್ನು ನೆರೆಯ ಮನೆಗೆ ಕಳಿಸಲಾಯಿತು.

ಮೆಟಲ್ ಡಿಕ್ಟೆಟರ್ ಶೋಧ

ಕೊಲೆಗೆ ಬಳಸಿದ ಆಯುಧವನ್ನು ಪಕ್ಕದ ಖಾಲಿ ನಿವೇಶನದೊಳಗೆ ಎಸೆದಿರಬಹುದು ಎಂಬ ಶಂಕೆಯಿಂದ ಪೊಲೀಸರು ಎರಡು ಮೆಟಲ್ ಡಿಟೆಕ್ಟರ್ ಸಾಧನದಿಂದ ನಿವೇಶನದ ಇಂಚಿಂಚೂ ಜಾಗವನ್ನು ಶೋಧಿಸಿದರು. ಆದರೆ ಯಾವ ವಸ್ತುವೂ ಪತ್ತೆಯಾಗಲಿಲ್ಲ.

ಫೊರೆನ್ಸಿಕ್ ತಜ್ಞರ ಭೇಟಿ

ಮಂಗಳೂರಿನ ಫೊರೆನ್ಸಿಕ್ ತಜ್ಞರ ತಂಡ ಕೊಲೆಯಾದ ಸ್ಥಳಕ್ಕೆ ಭೇಟಿನೀಡಿ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿತು. ಮಣಿಪಾಲದ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ತಂಡವೂ ಸಹಕಾರ ನೀಡಿತು. ಪಂಚನಾಮೆ ನಡೆಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.

ಅನಾಥವಾಗಿ ಬಿದ್ದಿದ್ದ ಸೈಕಲ್‌

ಮೃತ ಬಾಲಕ ಅಸೀಮ್‌ ಬಳಸುತ್ತಿದ್ದ ಸೈಕಲ್‌ ಮನೆಯ ಅಂಗಳದಲ್ಲಿ ಅನಾಥವಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದರು. ಸೈಕಲ್ ತುಳಿಯುತ್ತಿದ್ದ ಮುಗ್ಧ ಬಾಲಕನನ್ನೂ ಬಿಡದೆ ಹತ್ಯೆ ಮಾಡಿದ ಕೊಲೆಗಾರನಿಗೆ ತಕ್ಕ ಶಿಕ್ಷೆಯಾಗುವಂತೆ ಶಪಿಸುತ್ತಿದ್ದ ದೃಶ್ಯ ಕಂಡುಬಂತು. ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದರಿಂದ ಅಂಗಳದಲ್ಲಿ ಬಿದ್ದಿದ್ದ ಸೈಕಲ್‌ ಅನ್ನು ಪೊಲೀಸರು ತೆರವುಗೊಳಿಸಿರಲಿಲ್ಲ.

ಶೌಚಾಲಯದಲ್ಲಿ ಅವಿತು ಜೀವ ಉಳಿಸಿಕೊಂಡ ವೃದ್ಧೆ

ಚೂರಿ ಇರಿತಕ್ಕೊಳಗಾದ ಹಾಜಿರಾ (70) ಹಂತಕನಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ಹೋಗಿ ಬಾಗಿಲು ಹಾಕಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ವೃದ್ಧೆ ಪೊಲೀಸರು ಬಂದು ಬಾಗಿಲು ಬಡಿದರೂ ತೆಗೆದಿರಲಿಲ್ಲ. ಬಳಿಕ ಬಾಗಿಲನ್ನು ದೂಡಿ ಗಂಭೀರ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಬಾಲಕ ಅಸೀಮ್ ಬೆಳಿಗ್ಗೆ ಸ್ನೇಹಿತರ ಜತೆ ಆಟವಾಡಿ ಉಪಾಹಾರ ಸೇವಿಸಲು ಮನೆಗೆ ಬಂದಿದ್ದ. ಅಂಗಳದಲ್ಲಿ ಆಟವಾಡುತ್ತಿದ್ದಾಗ ತಾಯಿ ಹಾಗೂ ಅಕ್ಕಂದಿರ ಚೀರಾಟ ಕೇಳಿ ಮನೆಯೊಳಗೆ ಹೋಗಿದ್ದಾನೆ. ಈ ವೇಳೆ ಬಾಲಕನನ್ನೂ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಲೆಯಾದ ಯುವತಿ ಅಫ್ಸಾನ್ ಗಗನಸಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಯ್ನಾಜ್ ಬಿಕಾಂ ಓದುತ್ತಿದ್ದರು. ಅಸೀಮ್ ಜಿಎಂ ಶಾಲೆಯಲ್ಲಿ ಓದುತ್ತಿದ್ದ. ಕೊಲೆಯಾದ ಹಸೀನಾ ಅವರ ಮತ್ತೊಬ್ಬ ಪುತ್ರ ಬೆಂಗಳೂರಿನಲ್ಲಿ ಖಾಸಗಿ ವಿಮಾನಯಾನ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಉತ್ತಮ ಬಾಂಧವ್ಯ

‘ಮೃತ ಹಸೀನಾಳ ಕುಟುಂಬ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಯಾರೊಂದಿಗೂ ದ್ವೇಷ ಇರಲಿಲ್ಲ. ಎಲ್ಲರೊಂದಿಗೆ ಈ ಕುಟುಂಬದವರು ಆತ್ಮೀಯತೆಯಿಂದ ಇದ್ದರು. ಹತ್ಯೆ ಘಟನೆ ಆಘಾತ ತಂದಿದೆ. ಇಂತಹ ಕೃತ್ಯ ಈ ಭಾಗದಲ್ಲಿ ನಡೆದಿರುವುದು ಇದೇ ಮೊದಲು’ ಎಂದು ಅಕ್ಕಪಕ್ಕದ ಮನೆಯವರು ವಿಷಾದ ವ್ಯಕ್ತಪಡಿಸಿದರು.

ಮೃತ ಹಸೀನಾಳ ಪತಿ ನೂರ್ ಅಹಮದ್‌ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಮಾಹಿತಿ ನೀಡಲಾಗಿದೆ. ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.