ಕೋಟ(ಬ್ರಹ್ಮಾವರ): ಸ್ವಾತಂತ್ರ್ಯ ಹೋರಾಟಗಾರರ ನೆನಪು ಸ್ವಾತಂತ್ರ್ಯೋತ್ಸವ ದಿನಕ್ಕೆ ಸೀಮಿತವಾಗುತ್ತಿರುವುದು ವಿಷಾದನೀಯ. ಸ್ವಾತಂತ್ರ ಹೋರಾಟಗಾರರನ್ನು ಗೌರವಿಸುವುದು ಕುಟುಂಬಸ್ಥರ ತ್ಯಾಗವನ್ನು ಸ್ಮರಿಸಿಕೊಳ್ಳವುದು ಅಗತ್ಯದ ವಿಷಯವಾಗಿದೆ. ಎಂದು ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಉಮೇಶ ಪುತ್ರನ್ ಹೇಳಿದರು.
ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ, ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಗ್ರಾಮ ಪಂಚಾಯಿತಿ ಪ್ರಸ್ತುತಿಯಲ್ಲಿ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸಮಾವೇಶ, ಜಿಲ್ಲಾಮಟ್ಟದ ಚಿತ್ರರಚನೆ ಮತ್ತು ಕಾರಂತರ ಕೃತಿಗಳ ಹೆಸರು ಬರೆಯುವ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಆನಂದ ಸಿ. ಕುಂದರ್ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವಂತಾಗಲಿ ಎಂದು ಹಾರೈಸಿ ಕುಟುಂಬಸ್ಥರನ್ನು ಗೌರವಿಸಿದರು.
ಈ ಸಂದರ್ಭ ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ತಿಮ್ಮ ಪೂಜಾರಿ, ಸ್ವರಾಜ್ 75ರ ಸಂಘಟಕ ಪ್ರದೀಪ್ ಕುಮಾರ್ ಬಸ್ರೂರು, ಟ್ರಸ್ಟಿಗಳಾದ ಸುಬ್ರಾಯ ಆಚಾರ್ ಮಣೂರು, ಸುಶೀಲಾ ಸೋಮಶೇಖರ್ ಇದ್ದರು.
ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ,ವಂದಿಸಿದರು. ಸತೀಶ ವಡ್ಡರ್ಸೆ ನಿರೂಪಿಸಿದರು. ನಂತರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರೊಂದಿಗೆ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಸಮಾಜವಿಜ್ಞಾನ ಶಿಕ್ಷಕ ನರೇಂದ್ರ ಕುಮಾರ್ ಕೋಟ ಸಂವಾದ ನಡೆಸಿ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.