ಉಡುಪಿ: ಸಮಾಜದಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿ, ಸೌಹಾರ್ದ ಅವಶ್ಯವಾಗಿ ಬೇಕು. ಇವೆಲ್ಲವೂ ಒಂದು ಸಮಾಜದ ಶ್ರಮದಿಂದ ಸಾಧ್ಯವಿಲ್ಲ, ಎಲ್ಲ ಸಮಾಜಗಳು ಕೈಜೋಡಿಸಿದರೆ ಮಾತ್ರ ಸಾಧ್ಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಬಹಿಷ್ಕಾರ ಅಭಿಯಾನ ಸೇರಿದಂತೆ ಸಮಾಜದಲ್ಲಿನ ಕದಡಿರುವ ಸೌಹಾರ್ದ ವಾತಾವರಣವನ್ನು ತಿಳಿಗೊಳಿಸುವಂತೆ ಬುಧವಾರ ಮಠದಲ್ಲಿ ತಮ್ಮನ್ನು ಭೇಟಿಯಾದ ಮುಸ್ಲಿಂ, ಕ್ರಿಶ್ಚಿಯನ್ ಧಾರ್ಮಿಕ ಮುಖಂಡರ ಹಾಗೂ ವ್ಯಾಪಾರಿಗಳ ನಿಯೋಗಕ್ಕೆ ಪೇಜಾವರ ಸ್ವಾಮೀಜಿ ಸ್ಪಷ್ಟವಾಗಿ ಹೇಳಿದರು.
ಈಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅರಿವಿದೆ. ಇದಕ್ಕೂ ಮುನ್ನ ಹಿಂದೂ ಸಮಾಜ ತುಂಬಾ ನೋವುಂಡಿದೆ. ಧಾರ್ಮಿಕ ಮುಖಂಡರಿಂದ ಈಗಿನ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ತಳಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಹುಡಕಬೇಕು ಎಂದು ಶ್ರೀಗಳು ನಿಯೋಗಕ್ಕೆ ತಿಳಿಸಿದರು.
ಹಿಂದಿನಿಂದಲೂ ಅನ್ಯಾಯವನ್ನು ಸಹಿಸಿಕೊಂಡು ಬಂದಿದ್ದ ಹಿಂದೂಗಳ ತಾಳ್ಮೆ ಸ್ಫೋಟಗೊಂಡಿದೆ. ಅವರ ನೋವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಪರಸ್ಪರ ಸಂವಾದದ ಮೂಲಕ ಸಮಸ್ಯೆ ಇತ್ಯರ್ಥಪಡಿಸಬಹುದು. ಇನ್ಮುಂದೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂಬುದು ಅರಿವಿಗೆ ಬಂದರೆ, ಸೌಹಾರ್ದದ ವಾತಾವರಣ ಮತ್ತೆ ನೆಲಸಲಿದೆ ಎಂದು ಪೇಜಾವರ ಸ್ವಾಮೀಜಿ ಹೇಳಿದರು.
ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಸೌಹಾರ್ದಯುತವಾಗಿ ಬಾಳೋಣ ಎಂದು ಕರೆ ನೀಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಹಿಂದೂಗಳ ಮೂಲ ನೋವು ಪರಿಹಾರವಾಗಬೇಕು. ಆಗ ಮಾತ್ರ ಶಾಂತಿ, ಸೌಹಾರ್ದ ಮೂಡಲಿದೆ ಎಂದರು.
ಹಲಾಲ್ ಮಾಂಸ ಖರೀದಿಸಬೇಡಿ: ಹಲಾಲ್ ಬೋರ್ಡ್ ತೂಗು ಹಾಕಿರುವ ವ್ಯಾಪಾರಿಗಳಿಂದ ವ್ಯಾಪಾರ ಬಹಿಷ್ಕರಿಸೋಣ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಟ್ವಿಟರ್‌ನಲ್ಲಿ ಕರೆ ನೀಡಿದ್ದಾರೆ.
‘ಮುಸ್ಲಿಮರ ಹೋಟೆಲ್‌ಗಳಲ್ಲಿ ಹಲಾಲ್ ಬೋರ್ಡ್ ಹಾಕುವುದು ಅವರ ಸಂಪ್ರದಾಯ. ಆದರೆ ಹಿಂದೂಗಳ ಹೋಟೆಲ್‌ಗಳಲ್ಲಿ ಹಲಾಲ್ ಬೋರ್ಡ್ ಹಾಕುವುದು ಏಕೆ. ಹಲಾಲ್ ಮಾಂಸವನ್ನು ಹಿಂದೂಗಳಿಗೆ ಬಲವಂತವಾಗಿ ಯಾಕೆ ತಿನ್ನಿಸುತ್ತೀರಿ, ಹಲಾಲ್ ವಿಚಾರದಲ್ಲಿ ಮುಸ್ಲಿಮರಿಗೂ ಹಿಂದೂಗಳಿಗೂ ವ್ಯತ್ಯಾಸವಿಲ್ಲ ಎಂದಾದರೆ ಹಲಾಲ್ ಬಳಸುವ ಹಿಂದೂಗಳ ವ್ಯಾಪಾರವೂ ಬೇಡ. ದಯವಿಟ್ಟು ಹಲಾಲ್ ಬಹಿಷ್ಕರಿಸಿ‘ ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.