ADVERTISEMENT

ಸಂವಿಧಾನದಿಂದ ಕೆಳವರ್ಗಕ್ಕೆ ಭದ್ರ ಬುನಾದಿ: ಮಾವಳ್ಳಿ ಶಂಕರ

ದಲಿತ ಸಂಘರ್ಷ ಸಮಿತಿ: ನೋಟ್‌ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಮೇ 2024, 13:21 IST
Last Updated 27 ಮೇ 2024, 13:21 IST
ಕಾರ್ಯಕ್ರಮದಲ್ಲಿ ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಅವರನ್ನು ಸನ್ಮಾನಿಸಲಾಯಿತು   

ಕೋಟ (ಬ್ರಹ್ಮಾವರ): ದಲಿತರು ಗುಡಿಗೋಪುರ ಸುತ್ತುವುದನ್ನು ಬಿಟ್ಟು ಸಮುದಾಯಕ್ಕೋಸ್ಕರ ದುಡಿದ ತ್ಯಾಗಿಗಳ ಸಮಾಧಿ ಸುತ್ತಲಿ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಕೆಳವರ್ಗದ ಜೀವನಕ್ಕೆ ಭದ್ರ ಬುನಾದಿ ನೀಡಿದೆ. ಶಿಕ್ಷಣದಿಂದ ಕ್ರಾಂತಿ ನಿರ್ಮಿಸಲು ಸಾಧ್ಯ. ಸಮುದಾಯದ ಪೋಷಕರು ಜಾಗೃತರಾಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ ಕರೆ ನೀಡಿದರು.

ಇಲ್ಲಿನ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಹಮ್ಮಿಕೊಂಡ ‘ಅಕ್ಷರದಕ್ಕರೆ’ ಉಚಿತ ನೋಟ್‌ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ 25ನೇ ವರ್ಷದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಜಾತಿವ್ಯವಸ್ಥೆಯ ಕಟ್ಟುಪಾಡು ದಲಿತ ಸಮುದಾಯವನ್ನು ಅಧೋಗತಿಗೆ ತಳ್ಳುವಂತೆ ಮಾಡಿತ್ತು. ಮೇಲ್ವರ್ಗದ ಜನ ದಲಿತ ಸಮುದಾಯವನ್ನು ಹೀನರಾಗಿ ಕಾಣುತ್ತಿದ್ದರು. ಆದರೆ ಇಂದು ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ADVERTISEMENT

ಕೋಟ ಮಣೂರಿನ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ.ಕುಂದರ್, ಮಾವಳ್ಳಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಸಿಎ ಬ್ಯಾಂಕ್ ಅಧ್ಯಕ್ಷ ಕೆ. ಕೃಷ್ಣ ಕಾಂಚನ್, ಯುವ ಭಾಗವತ ನವೀನ್ ಕೋಟ, ಯಕ್ಷ ಸಾಧಕಿ ಲಿಖಿತಾ ಗಿಳಿಯಾರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ದಸಂಸ ಕೋಟ ಹೋಬಳಿ ಸಂಚಾಲಕ ನಾಗರಾಜ ಪಡುಕರೆ ಅಧ್ಯಕ್ಷತೆ ವಹಿಸಿದ್ದರು.

ದಸಂಸ ಜಿಲ್ಲಾ ಸಂಚಾಲಕ ಸುಂದರ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ ಕುಮಾರ್, ರಾಜ್ಯ ಸಮಿತಿ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಚಾಲಕ ಶಾಮರಾಜ್ ಬಿರ್ತಿ, ವಾಸುದೇವ ಮುದ್ದೂರ್, ಕುಂದಾಪುರ ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ಸಂಚಾಲಕ ನಾಗರಾಜ ಉಪ್ಪುಂದ, ಬ್ರಹ್ಮಾವರ ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಜಿಲ್ಲಾ ಸಂಚಾಲಕ ಎನ್.ಎ.ನೇಜಾರ್ ಇದ್ದರು.

ಜಿಲ್ಲಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ, ವಕೀಲ ಟಿ. ಮಂಜುನಾಥ್ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮಂಜುನಾಥ ಕೆ.ಎಸ್, ಸಂತೋಷ್ ಕುಮಾರ್ ಕೋಟ, ನಾಗರಾಜ್ ಗುಳ್ಳಾಡಿ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು.

Cut-off box - ಸರ್ಕಾರಿ ಶಾಲೆಗಳನ್ನೇ ಆಯ್ಕೆ ಮಾಡಿ ಆಂಗ್ಲಮಾಧ್ಯಮದ ವ್ಯಾಮೋಹ ಬಿಡಿ. ಪ್ರಸ್ತುತ ಕನ್ನಡ ಮಾಧ್ಯಮ ಸರ್ವ ಶ್ರೇಷ್ಠತೆ ಪಡೆಯುತ್ತಿದೆ. ಅತಿ ಹೆಚ್ಚು ಅಂಕ ಗಳಿಸುವ ಕೇಂದ್ರ ಸ್ಥಾನವಾಗಿ ಸರ್ಕಾರಿ ಶಾಲೆಗಳು ಗುರುತಿಸಲ್ಪಟ್ಟಿವೆ. ಕನ್ನಡ ಮಾಧ್ಯಮ ತೊಟ್ಟಿಲು. ಅದರೆ ಆಂಗ್ಲಮಾಧ್ಯಮ ಮೆಟ್ಟಿಲಾಗಿ ಏಳಿಗೆಗೆ ತಕ್ಕಂತೆ ಬಳಸಿಕೊಳ್ಳಿ ಎಂದು ಮಾವಳ್ಳಿ ಶಂಕರ ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.