ADVERTISEMENT

ಹಬ್ಬ ಕಳೆದರೂ ಇಳಿಯದ ಹಣ್ಣು ಹಂಪಲುಗಳ ದರ

ಹಣ್ಣು ಹಂಪಲುಗಳ ದರ ವಿಪರೀತ ಏರಿಕೆ: ಗ್ರಾಹಕನ ಜೇಬಿಗೆ ಹೊರೆ

ನವೀನ ಕುಮಾರ್ ಜಿ.
Published 13 ಸೆಪ್ಟೆಂಬರ್ 2024, 5:49 IST
Last Updated 13 ಸೆಪ್ಟೆಂಬರ್ 2024, 5:49 IST
ತರಕಾರಿ
ತರಕಾರಿ   

ಉಡುಪಿ: ಗಣೇಶ ಹಬ್ಬ ಕಳೆದರೂ ತರಕಾರಿ, ಹಣ್ಣುಗಳ ಬೆಲೆ ಇಳಿಕೆಯಾಗದೆ ಖರೀದಿಗೆ ಬರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಸಾಮಾನ್ಯವಾಗಿ ಹಬ್ಬ ಕಳೆದ ಕೂಡಲೇ ತರಕಾರಿಗಳ ಬೆಲೆ ಅಲ್ಪ ಇಳಿಕೆಯಾಗುತ್ತದೆ. ಆದರೆ, ಈ ಬಾರಿ ಬೆಲೆ ಇಳಿಕೆಯಾಗಿಲ್ಲ ಎನ್ನುತ್ತಾರೆ ಉಡುಪಿ ಸರ್ವಿಸ್‌ ಬಸ್‌ ನಿಲ್ದಾಣ ಬಳಿಯ ಮಾರಾಟಗಾರರು.

ಕಳೆದ ವಾರ ಕೆ.ಜಿ.ಗೆ ₹50 ಇದ್ದ ಈರುಳ್ಳಿ ದರ ₹60ಕ್ಕೆ ಏರಿಕೆಯಾಗಿದೆ. ಟೊಮೆಟೊ ಬೆಲೆ ಕೆ.ಜಿ.ಗೆ ₹30 ಇದೆ. ಅಲಸಂಡೆ ಕೆ.ಜಿ.ಗೆ ₹70ಕ್ಕೇರಿದೆ.

ADVERTISEMENT

ಜಿಲ್ಲೆಯಲ್ಲಿ ತರಕಾರಿ ಬೆಳೆಯುವವರ ಸಂಖ್ಯೆ ವಿರಳ. ಇಲ್ಲಿಗೆ ಶಿವಮೊಗ್ಗ ಹಾಗೂ ಇತರ ಜಿಲ್ಲೆಗಳಿಂದ ತರಕಾರಿಗಳು ಬರುತ್ತವೆ. ಸಾಗಣೆ ವೆಚ್ಚ, ಕಾರ್ಮಿಕರ ಕೂಲಿ ಸೇರಿದಾಗ ತರಕಾರಿಗಳ ಬೆಲೆಯೂ ಏರಿಕೆಯಾಗುತ್ತದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಜಯಾನಂದ.

ಅಷ್ಟಮಿಯ ನಂತರ ಸಾಲು ಸಾಲು ಹಬ್ಬಗಳು ಬರುವುದರಿಂದ ತರಕಾರಿಗಳಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಈ ಬಾರಿ ಕೆಲವು ಪ್ರದೇಶಗಳಲ್ಲಿ ಅತಿಯಾಗಿ ಮಳೆ ಬಂದಿರುವ ಕಾರಣ ತರಕಾರಿ ಕೃಷಿ ನಾಶವಾಗಿದೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದೆ ದರ ಏರಿಕೆಯಾಗಿದೆ ಎಂದೂ ಅವರು ಹೇಳುತ್ತಾರೆ.

ತರಕಾರಿಗಳ ಜೊತೆ ಹಣ್ಣುಗಳ ದರವೂ ವಿಪರೀತ ಏರಿಕೆಯಾಗಿರುವುದು ಗ್ರಾಹಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇರುವ ಏಲಕ್ಕಿ ಬಾಳೆಹಣ್ಣಿನ ದರ ಕೆ.ಜಿ.ಗೆ ₹120 ಆಗಿದೆ. ಚೌತಿ ಹಬ್ಬ ಮುಗಿದರೂ ಇದರ ಬೆಲೆ ಇಳಿಕೆಯಾಗಿಲ್ಲ. ಸಾಮಾನ್ಯವಾಗಿ ಏಲಕ್ಕಿ ಬಾಳೆ ಹಣ್ಣು ಕೆ.ಜಿ.ಗೆ ₹80 ಇರುತ್ತಿತ್ತು.

ದಾಳಿಂಬೆ ಹಣ್ಣಿನ ದರ ಕೆ.ಜಿ.ಗೆ ₹180 ಮತ್ತು ಡ್ರ್ಯಾಗನ್‌ ಫ್ರೂಟ್‌ನ ಬೆಲೆ ಕೆ.ಜಿ.ಗೆ ₹240 ಆಗಿದೆ. ಎರಡು ವಾರಗಳ ಹಿಂದೆ ಡ್ರ್ಯಾಗನ್‌ ಫ್ರೂಟ್‌ ಬೆಲೆ ಕೆ.ಜಿ.ಗೆ ₹180ರಿಂದ ₹200 ಇತ್ತು.

ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಆವಕ ಕಡಿಮೆ ಆಗಿರುವುದರಿಂದ ಬೆಲೆ ಇಳಿಕೆಯಾಗಿಲ್ಲ. ಇದರಿಂದ ಗ್ರಾಹಕರು ಹೆಚ್ಚು‌ ತರಕಾರಿ ಖರೀದಿಸುವುದಿಲ್ಲ. ಅದರಿಂದ ನಮಗೂ ನಷ್ಟ.
–ಜಯಾನಂದ ತರಕಾರಿ ವ್ಯಾಪಾರಿ
ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ ಕೊಂಚವೂ ಇಳಿಕೆಯಾಗಿಲ್ಲ. ಸಾಮಾನ್ಯವಾಗಿ ಈ ಅವಧಿಯಲ್ಲಿ ಇಳಿಕೆಯಾಗುತ್ತಿತ್ತು. ಅತ್ಯಗತ್ಯವಿರುವ ತರಕಾರಿಗಳನ್ನಷ್ಟೇ ಖರೀದಿ ಮಾಡಿದ್ದೇನೆ.
–ವರದೇಶ್ ಪೈ ಗ್ರಾಹಕ
ಹಬ್ಬದ ವೇಳೆ ಹಣ್ಣು –ಹಂಪಲು ಬೆಲೆ ಏರಿಕೆಯಾಗಿತ್ತು. ಖರೀದಿಯೂ ಜೋರಾಗಿತ್ತು. ಈಗಲೂ ಅದೇ ಬೆಲೆ ಮುಂದುವರಿದಿರುವುದರಿಂದ ಖರೀದಿಸುವವರು ಕಡಿಮೆಯಾಗಿದ್ದಾರೆ.
ಸಾದಿಕ್ ಹಣ್ಣು ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.