ಉಡುಪಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೋರಾಟದ ಹೆಜ್ಜೆ ಗುರುತುಗಳು ಉಡುಪಿಯಲ್ಲಿ ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿವೆ. 8 ದಶಕಗಳ ಹಿಂದೆ ಕೃಷ್ಣನೂರಿನಲ್ಲಿ ಬಾಪು ಹೊತ್ತಿಸಿದ ಭಾವೈಕ್ಯತೆ ಹಾಗೂ ಸಾಮರಸ್ಯದ ಹಣತೆ ಇಂದಿಗೂ ಬೆಳಕು ನೀಡುತ್ತಿದೆ.
ಅಸ್ಪೃಶ್ಯತೆ ಹಾಗೂ ಸಾಮಾಜಿಕ ಪಿಡುಗುಗಳ ನಿವಾರಣೆಯಿಂದ ಮಾತ್ರ ದೇಶಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗಲು ಸಾಧ್ಯ ಎಂದು ಬಲವಾಗಿ ನಂಬಿದ್ದ ಗಾಂಧೀಜಿ, ಜನರ ಮನ ಪರಿವರ್ತನೆಗೆ 1933ರಲ್ಲಿ ದೇಶದಾದ್ಯಂತ ಅಖಿಲ ಭಾರತ ಮಟ್ಟದ ಪ್ರವಾಸ ಹಮ್ಮಿಕೊಂಡಿದ್ದರು.
ಪ್ರವಾಸದ ಭಾಗವಾಗಿ 1934, ಫೆಬ್ರುವರಿ 25ರಂದು ಉಡುಪಿಗೆ ಭೇಟಿನೀಡಿ ಅಸ್ಪೃಶ್ಯತೆ ವಿರುದ್ಧ ಧನಿ ಎತ್ತಿ ಜನಜಾಗೃತಿ ಮೂಡಿಸಿದ್ದರು ಎಂದು ಸ್ವಾತಂತ್ರ್ಯೋತ್ಸವ ಸಂಭ್ರಮದ ಹೊತ್ತಿನಲ್ಲಿ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿನೀತ್ ರಾವ್ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.
‘ಉಡುಪಿಯ ಉದ್ಯಾವರ ಹೊಳೆ ದಾಟಿ ಉಡುಪಿಗೆ ಕಾಲಿಟ್ಟ ಗಾಂಧೀಜಿ ಅವರಿಗೆ ದೋಣಿಗಳನ್ನು ಬಳಸಿ ನಿರ್ಮಿಸಿದ್ದ ತೆಪ್ಪದಲ್ಲಿ ಸ್ವಾಗತ ಕೋರಲಾಯಿತು. ಅಲ್ಲಿಂದ ನೇರವಾಗಿ ಕಾಡಬೆಟ್ಟು ಶ್ರೀನಿವಾಸ ಪೈಗಳ ಖಾದಿ ಭಂಡಾರ ಉದ್ಘಾಟನೆಗೆ ತೆರಳಿದ ಗಾಂಧೀಜಿ, ‘ದೇಶದ ಸ್ವಾವಲಂಬನೆಗೆ ಖಾದಿ ಬಳಕೆಯ ಮಹತ್ವವನ್ನು ವಿವರಿಸಿದ್ದರು’ ಎಂದು ಸ್ಮರಿಸಿದರು.
ಅಜ್ಜರಕಾಡಿನಲ್ಲಿ ಸಾರ್ವಜನಿಕ ಸಭೆ:ಅಜ್ಜರಕಾಡಿನಲ್ಲಿ ಅಂದು ಗಾಂಧೀಜಿ ಮಾಡಿದ ಭಾಷಣ ಅಸ್ಪ್ರಶ್ಯತೆ ನಿವಾರಣೆಯ ನಿಟ್ಟಿನಲ್ಲಿ ದೊಡ್ಡ ಪರಿಣಾಮ ಬೀರಿತು. ‘ಮಡಿವಂತರಿಗೆ ಬೆನ್ನುಹಾಕಿದ ದೇವರು ನೆಲೆಸಿರುವ ಉಡುಪಿಯು ಅಸ್ಪಶ್ಯತಾ ನಿವಾರಣೆ ವಿಚಾರದಲ್ಲಿ ದೇಶಕ್ಕೆ ಮೇಲ್ಪಂಕ್ತಿಯಾಗಬೇಕು ಎಂಬ ಗಾಂಧೀಜಿ ಅವರ ಸೂಚ್ಯವಾದ ಹೇಳಿಕೆಸಂಪ್ರದಾಯವಾದಿಗಳ ಮನಸ್ಸಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿತು’ ಎಂದರು.
ಮೇಲ್ವರ್ಗದವರು ಮನಸ್ಸಿನಲ್ಲಿರುವ ಮೇಲು–ಕೀಳೆಂಬ ಕೊಳೆ ತೊಳೆದುಕೊಳ್ಳಬೇಕು.ಅಸ್ಪೃಶ್ಯರ ದೇವಸ್ಥಾನ ಪ್ರವೇಶ ಬಲವಂತದಿಂದ ಆಗದೆ, ಮೇಲ್ವರ್ಗದವರು ಮುಕ್ತ ಮನಸ್ಸಿನಿಂದ ಪ್ರವೇಶಕ್ಕೆ ಅನುಮತಿ ಕೊಡಬೇಕು. ಇದರಿಂದ ನಿಜವಾದ ಸಾಮರಸ್ಯ ಮೂಡಲು ಸಾಧ್ಯ ಎಂದು ಗಾಂಧೀಜಿ ಭಾಷಣದಲ್ಲಿ ಬಲವಾಗಿ ಪ್ರತಿಪಾದಿಸಿದ್ದರು.
‘ಸ್ಟಾಂಡ್ ಅಪ್ ಫಾರ್ ಟ್ರೂತ್ ಅಟ್ ಎನಿ ಕಾಸ್ಟ್’ ಎಂಬ ಅವರ ಕರೆ ಎಲ್ಲರ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವಾಗಿ ಬದಲಾಯಿತು. ‘ಬಂದದ್ದು ಬರಲಿ ಸತ್ಯ ಒಂದಿರಲಿ’ ಎಂಬ ಸಾಲುಗಳು ಎಲ್ಲೆಡೆ ಮೊಳಗಿದವು ಎಂದು ಸ್ಮರಿಸಿದರು ವಿನೀತ್ ರಾವ್.
ಗಾಂಧೀಜಿ ಅಂದು ಅಸ್ಪೃಶ್ಯರ ಕಲ್ಯಾಣ ಹಾಗೂ ಭೂಕಂಪ ಪರಿಹಾರ ನಿಧಿಗೆ ಹಣ ಸಂಗ್ರಹಿಸಿದರು. ತಮಗೆ ಉಡುಗೊರೆಯಾಗಿ ಬಂದ ಬೆಳ್ಳಿಯ ವಸ್ತುಗಳನ್ನು ಸ್ವೀಕರಿಸದೆ ಅವುಗಳನ್ನು ಹರಾಜು ಹಾಕಿ ಬಂದ ಹಣವನ್ನು ನಿಧಿಗೆ ಅರ್ಪಿಸಿದರು.
ಗಾಂಧೀಜಿ ಉಡುಪಿಗೆ ಭೇಟಿನೀಡಿದ ಬಳಿಕ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆಯಾಗದಿದ್ದರೂ ನಿಧಾನವಾಗಿ ಜನರ ಹೃದಯ ಪರಿವರ್ತನೆಯಾಗಿದ್ದು ಸುಳ್ಳಲ್ಲ. ಹಲವು ವರ್ಷಗಳ ಬಳಿಕ ಮೇಲ್ವರ್ಗದವರೇ ಮುಂದೆ ನಿಂತು ದೇವಸ್ಥಾನಗಳಿಗೆ ಎಲ್ಲರ ಪ್ರವೇಶ ದೊರೆಯುವಂತೆ ಮಾಡಿದ್ದು, ಗಾಂಧಿ ತತ್ವಗಳಿಗೆ, ಚಿಂತನೆಗಳಿಗಿರುವ ಶಕ್ತಿ ಎಂದರು.
‘ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ ಗಾಂಧೀಜಿ’
ಸರ್ವ ವರ್ಗದವರಿಗೂ ಪ್ರವೇಶವಿರುವ ದೇಗುಲಗಳಿಗೆ ಮಾತ್ರ ಪ್ರವೇಶ ಮಾಡುವುದಾಗಿ ಗಾಂಧೀಜಿ ಯಾತ್ರೆ ಆರಂಭಿಸುವ ವೇಳೆ ಶಪಥ ಮಾಡಿದ್ದರು. ಅದರಂತೆಯೇ ಮುಕ್ತ ಪ್ರವೇಶವಿಲ್ಲದ ದೇವಸ್ಥಾನಗಳಿಗೆ ಅವರು ಭೇಟಿ ನೀಡಲಿಲ್ಲ. ಕೃಷ್ಣಮಠಕ್ಕೂ ಅವರು ಭೇಟಿನೀಡದೆ ಮರಳಿದರು ಎಂದು ವಿನೀತ್ ರಾವ್ ಸ್ಮರಿಸಿದರು.
ಗಾಂಧೀಜಿ ನೆನಪು..ಗಾಂಧೀಜಿ ಉಡುಪಿ ಭೇಟಿಯ ಸ್ಮರಣಾರ್ಥ ಅವರ ಅಜ್ಜರಕಾಡು ಉದ್ಯಾನದಲ್ಲಿ ಚಿಕ್ಕ ಪ್ರತಿಮೆ ನಿಲ್ಲಿಸಲಾಗಿದೆ. ಉದ್ಯಾನಕ್ಕೆ ಮಹಾತ್ಮ ಗಾಂಧಿ ಉದ್ಯಾನ ಎಂದು ಹೆಸರಿಡಲಾಗಿದೆ. ಬಾಪು ಚಿಂತನೆಗಳಿಗೆ ಪ್ರಭಾವಿತರಾಗಿ 1948–49ರಲ್ಲಿ ಉದ್ಯಮಿ ಡಾ.ಟಿಎಂಎ ಪೈಗಳು ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು (ಎಂಜಿಎಂ) ಸ್ಥಾಪಿಸಿದರು. ಕ್ಲಾಕ್ ಟವರ್ ಪಕ್ಕದಲ್ಲಿ ಗಾಂಧಿ ಪ್ರತಿಮೆ, ಗಾಂಧಿ ಚಿತಾಭಸ್ಮ ವಿಸರ್ಜನೆ ಮಾಡಿದ ಮಲ್ಪೆ ಬೀಚ್‌ನಲ್ಲೂ ಪ್ರತಿಮೆ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.