ಉಡುಪಿ: ‘ಭಾರತ ಮಹಾತ್ಮ ಗಾಂಧೀಜಿ ಅವರಿಂದ ಆರಂಭ ಆದದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಆವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತ್ವ ಎಲ್ಲವೂ ಜಾಗೃತವಾಗಿವೆ. ಹಾಗಾಗಿ ವೇದವ್ಯಾಸರೇ ರಾಷ್ಟ್ರಪಿತರು ಎಂಬುವುದು ನನ್ನ ಅಭಿಪ್ರಾಯ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಬಗ್ಗೆ ನನಗೆ ಬಹಳ ಗೌರವ ಇದೆ. ನಾಥೂರಾಮ್ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದಿರುವುದು ರಾಷ್ಟ್ರಕ್ಕೆ ಮಾಡಿದ ದೊಡ್ಡ ಅವಮಾನ. ಇಂತಹ ಹೇಳಿಕೆ ಕೊಟ್ಟವರ ಬಗ್ಗೆ ನನಗೆ ಅಸಮಾಧಾನ ಇದೆ. ಮಹಾತ್ಮ ಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರು. ವೇದವ್ಯಾಸರು ನಮ್ಮ ರಾಷ್ಟ್ರಪಿತರು’ ಎಂದರು.
‘ನನಗೆ ದೇಶದ ಎಲ್ಲ ಪಕ್ಷಗಳು ಸಮಾನ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಸ್ವತಂತ್ರವಾಗಿ ಹೋರಾಟ ಮಾಡಬೇಕಿತ್ತು. ಇದರಿಂದ ವಿಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಅದು ಆಗಿಲ್ಲ. ಬಿಜೆಪಿ ಕೋಮುವಾದಿ ಪಕ್ಷ, ಅದನ್ನು ಸೋಲಿಸಬೇಕೆಂದು ಎಲ್ಲಾ ಪಕ್ಷಗಳು ಒಂದಾದವು. ಈ ಬೆಳವಣಿಗೆಯಿಂದ ಹಿಂದೂಗಳಲ್ಲಿ ಹಿಂದುತ್ವ ಜಾಗೃತವಾಯಿತು’ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಹಿಂದೂ ವಿರೋಧಿ ದೃಷ್ಟಿಕೋನ ಹೆಚ್ಚಾಯಿತೇ ಹೊರತು, ಅಭಿವೃದ್ಧಿ ವಿಚಾರ ಚರ್ಚೆಯಾಗಿಲ್ಲ. ದೇಶಾದ್ಯಂತ ನಿರೀಕ್ಷೆಗೂ ಮೀರಿ ಮತದ ಪ್ರಮಾಣ ಹೆಚ್ಚಿತು. ಧರ್ಮದ ವಿಚಾರ ತೆಗೆದರೆ ಬಹುಸಂಖ್ಯಾತರಾದ ಹಿಂದೂಗಳು ಜಾಗೃತರಾಗುತ್ತಾರೆ. ಹಾಗಾಗಿ ಇನ್ನು ಮುಂದಾದರೂ ದೇಶದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.
‘ಅನ್ಯ ಧರ್ಮಕ್ಕೆ ಹಾನಿಯಿಲ್ಲ’
ರಾಮ ಮಂದಿರ ನಿರ್ಮಾಣ ಆಗಲೇಬೇಕು. ರಾಮ ಮಂದಿರ ನಿರ್ಮಾಣದಿಂದ ಯಾವುದೇ ಪಕ್ಷ ಹಾಗೂ ಧರ್ಮಕ್ಕೆ ಹಾನಿಯಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಭಿಪ್ರಾಯಪಟ್ಟರು.
ಬಿಜೆಪಿಗೆ ಈ ಬಾರಿ ದೇಶದ ಜನತೆ ದೊಡ್ಡಮಟ್ಟದ ಸಂಖ್ಯಾಬಲವನ್ನು ನೀಡಿದ್ದಾರೆ. ಸಂಸತ್ತಿನಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬಹುದು. ಸುಪ್ರೀಂ ಕೋರ್ಟ್‌ಗಿಂತ ಸಂಸತ್ತು ದೊಡ್ಡದು. ರಾಹುಲ್ ಗಾಂಧಿ ಕೂಡ ರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ಕೊಡಬೇಕು. ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಆಗುವಂತೆ ತೀರ್ಮಾನ ಕೈಗೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.