ADVERTISEMENT

ಕುಂದಾಪುರ: ಮನೆ ಮನೆಯಲ್ಲಿ ಪೂಜೆಗೊಳ್ಳುವ ಜೇಡಿ ಮಣ್ಣಿನ ಗಣಪ

ಕೆ.ಸಿ.ರಾಜೇಶ್‌
Published 6 ಸೆಪ್ಟೆಂಬರ್ 2024, 7:13 IST
Last Updated 6 ಸೆಪ್ಟೆಂಬರ್ 2024, 7:13 IST
<div class="paragraphs"><p>ದಾವಣಗೆರೆಯ ಭಾರತ್ ಕಾಲೊನಿಯಲ್ಲಿ (ಕುಂಬಾರ ಓಣಿ) ಕಲಾವಿದೆ ಮಾಲಾ ಅವರು ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿದರು&nbsp;ಪ್ರಜಾವಾಣಿ ಚಿತ್ರ; ಸತೀಶ ಬಡಿಗೇರ್</p></div>

ದಾವಣಗೆರೆಯ ಭಾರತ್ ಕಾಲೊನಿಯಲ್ಲಿ (ಕುಂಬಾರ ಓಣಿ) ಕಲಾವಿದೆ ಮಾಲಾ ಅವರು ಗಣಪತಿ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಿದರು ಪ್ರಜಾವಾಣಿ ಚಿತ್ರ; ಸತೀಶ ಬಡಿಗೇರ್

   

ಕುಂದಾಪುರ: ಗಣೇಶ ಚೌತಿಗೆ ಒಂದು ದಿನವಷ್ಟೇ ಉಳಿದಿದೆ. ಮನೆಯಲ್ಲಿ ಊಟೋಪಚಾರ, ಹೋಮ– ಹವನ, ಸಾರ್ವಜನಿಕವಾಗಿ ಪೂಜೆಗೊಳ್ಳುವ ಗಣಪನಿಗಾಗಿ ಅಲಂಕಾರ, ಮೆರವಣಿಗೆ, ಪೂಜೆ ಸಿದ್ಧತೆಗಳು ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿ ಭರದಿಂದ ಸಾಗುತ್ತಿವೆ.

ಗಣೇಶ ಮೂರ್ತಿಗೆ ಅಂತಿಮವಾಗಿ ಬಣ್ಣ ಹಚ್ಚುವ ಕಾರ್ಯ ಸಾಗುತ್ತಿವೆ. ರಾಜ್ಯರ ಬೇರೆಬೇರೆ ಭಾಗಗಳಲ್ಲಿ ಬಳಕೆಯಾಗುವ ಪ್ಲಾಸ್ಟರ್ ಆಫ್ ಪ್ಯಾರೀಸ್‌ ಮೂರ್ತಿಗಳಿಗೆ ಇಲ್ಲಿ ಬೇಡಿಕೆ ಇಲ್ಲ. ಈ ಭಾಗಗಳಲ್ಲಿ ಏನಿದ್ದರೂ ಕೃಷಿ ಗದ್ದೆಗಳಲ್ಲಿ ದೊರಕುವ ಆವೆ ಮಣ್ಣಿನಿಂದ (ಜೇಡಿ ಮಣ್ಣು) ತಯಾರಿಸಿದ ಮೂರ್ತಿಗಳಿಗೆ ಮನ್ನಣೆ.

ADVERTISEMENT

ಹಬ್ಬಕ್ಕೂ 2-3 ತಿಂಗಳ ಮೊದಲೇ ಗಣಪತಿ ಮೂರ್ತಿ ತಯಾರಿಸುವ ಮಣೆಯನ್ನು (ಪೀಠ) ಮೂರ್ತಿ ರಚನೆಕಾರರಿಗೆ ತಲುಪಿಸುತ್ತಾರೆ. ಮೂರ್ತಿ ತಯಾರಕರೂ ಸಾಕಷ್ಟು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಮಣ್ಣನ್ನು ಒಟ್ಟು ಮಾಡುವುದು, ಪರಿಸರಕ್ಕೆ ಹಾನಿಯಲ್ಲದ ವಸ್ತು ಹಾಗೂ ಪೇಂಟ್‌ಗಳ ಸಂಗ್ರಹ ಮಾಡಿಕೊಳ್ಳುವುದು ನಡೆಯುತ್ತದೆ.

ತಯಾರಕರ ಸಂಖ್ಯೆ ಇಳಿಕೆ: ಈ ಹಿಂದೆ ಕುಂದಾಪುರ, ಬಸ್ರೂರು, ಬೈಂದೂರು, ಕೋಟೇಶ್ವರ ಮುಂತಾದ ಕಡೆಗಳಲ್ಲಿ ಗಣಪತಿ ಮೂರ್ತಿ ತಯಾರಿಸುವ ಕಾರ್ಯ ನಡೆಯುತ್ತಿತ್ತು. ಬಸ್ರೂರು ಹಾಗೂ ಕುಂದಾಪುರದ ಮೂರ್ತಿಗಳಿಗೆ ಬಹು ಬೇಡಿಕೆ ಇತ್ತು. ಗುಡಿಗಾರರು, ವಿಶ್ವಕರ್ಮರು, ಜಿಎಸ್‌ಬಿ ಸಮುದಾಯದವರು... ಹೀಗೆ ಬೇರೆಬೇರೆ ಸಮುದಾಯದವರು ಗಣಪತಿ ಮೂರ್ತಿ ತಯಾರಿಸುತ್ತಿದ್ದರು. ಕಾಲ ಬದಲಾದಂತೆ ಪರಂಪರೆಯೂ ಬದಲಾಗಿದೆ. ಇದೀಗ ಉಭಯ ತಾಲ್ಲೂಕುಗಳಲ್ಲಿ ಬೆರಳೆಣಿಕೆಯ ವೃತ್ತಿಪರ ಮೂರ್ತಿ ತಯಾರಕರಷ್ಟೇ ಇದ್ದಾರೆ.

ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿನ ಬಳಿ ಇರುವ ವಸಂತ ಗುಡಿಗಾರ ಅವರು, ಬಹು ಬೇಡಿಕೆಯಲ್ಲಿರುವ ಗಣೇಶ ಮೂರ್ತಿ ತಯಾರಕರು. ಸಣ್ಣ ಗಾತ್ರದಿಂದ 2-3 ಅಡಿ ಎತ್ತರದವರೆಗೂ ಗಣೇಶನ ಮೂರ್ತಿ ನಿರ್ಮಾಣ ಮಾಡುವ ಗುಡಿಗಾರರ ಶಿಲ್ಪಕಲಾ ಕೇಂದ್ರದಲ್ಲಿ ಈ ಬಾರಿ ಒಟ್ಟು 75 ಗಣಪತಿ ಮೂರ್ತಿಗಳು ತಯಾರಾಗಿವೆ. ಇದರಲ್ಲಿ 8 ಪರಿಸರ ಸ್ನೇಹಿ ಮೂರ್ತಿಗಳಿವೆ. ಮನೆತನ, ಕುಟುಂಬ, ಧಾರ್ಮಿಕ ಕ್ಷೇತ್ರ ಹಾಗೂ ಸಾರ್ವಜನಿಕ ಗಣಪತಿ ಪಾರಂಪರಿಕವಾಗಿ ಪೂಜೆಗೊಳ್ಳುತ್ತಿದ್ದರೆ, ಅಂತಹ ಮೂರ್ತಿಗಳನ್ನು ವರ್ಷದಿಂದ ವರ್ಷಕ್ಕೆ ಒಂದು ಭತ್ತದ ಕಾಳಿನಷ್ಟು ಎತ್ತರ ಹೆಚ್ಚಿಸಬೇಕು ಎನ್ನುವ ಧಾರ್ಮಿಕ ನಂಬಿಕೆ ಇದೆ.

ಹಬ್ಬದ ಮೊದಲ ದಿನ ರಾತ್ರಿ ವಿಗ್ರಹ ರಚನೆಯ ಬಹುತೇಕ ಕಾರ್ಯಗಳನ್ನು ಮುಗಿಸುವ ಮೂರ್ತಿಕಾರರು, ಹಬ್ಬದ ದಿನದಂದು ಶುಭ ಮುಹೂರ್ತದಲ್ಲಿ ವಿಗ್ರಹ ಕೊಂಡೊಯ್ಯಲು ಬರುವವರ ಉಪಸ್ಥಿತಿಯಲ್ಲಿ ಗಣೇಶನ ದೃಷ್ಟಿ ಬಿಡಿಸಿ, ವೀಳ್ಯ ಸ್ವೀಕರಿಸಿ ವಿಗ್ರಹ ಹಸ್ತಾಂತರಿಸುತ್ತಾರೆ. ಬಳಿಕ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯಲ್ಲಿ ವಿಗ್ರಹವನ್ನು ಕೊಂಡೊಯ್ಯಲಾಗುತ್ತದೆ.

ಮರದ ಪೀಠದ ಮೇಲೆ ಸಿದ್ಧವಾಗುವ ಗಣಪನನ್ನು ನಿಶ್ಚಿತ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗುತ್ತದೆ. ಮೊದಲೇ ನಿರ್ಧರಿಸಿದಂತೆ 1ರಿಂದ 5 ದಿನಗಳವರೆಗೆ ಪೂಜೆ, ಹೋಮ– ಹವನ ನಡೆಸಿದ ಬಳಿಕ ಕೊನೆಗೆ ವಿಸರ್ಜನಾ ವಿಧಿಗಳನ್ನು ಪೂರೈಸಿ, ಮೆರವಣಿಗೆಯಲ್ಲಿ ಕೊಂಡೊಯ್ದು ನೀರಿನಲ್ಲಿ ಜಲಸ್ತಂಭನ ಮಾಡಲಾಗುತ್ತದೆ. ನಂತರ ವಿಗ್ರಹವಿಲ್ಲದ ಖಾಲಿ ಪೀಠವನ್ನು ಶ್ರದ್ಧೆಯಿಂದ ತಂದು, ನಿಶ್ಚಿತ ಸ್ಥಳದಲ್ಲಿ ಇರಿಸಿ ವರ್ಷಪೂರ್ತಿ ಸಂರಕ್ಷಣೆ ಮಾಡಲಾಗುತ್ತದೆ.

ದುಬಾರಿಯಾದ ಜೇಡಿ ಮಣ್ಣು

ತೆಕ್ಕಟ್ಟೆ, ಬೇಳೂರು, ಕೆದೂರು ಭಾಗದ ಗದ್ದೆಗಳಲ್ಲಿ ಹೆಚ್ಚಾಗಿ ಸಿಗುವ ಜೇಡಿ ಮಣ್ಣು ಹೊಂದಿರುವ ಕೃಷಿ ಗದ್ದೆಗಳ ಮಾಲಿಕರು, ಈ ಹಿಂದೆ ಗಣಪತಿ ತಯಾರಿಕೆಗೆ ಉಚಿತವಾಗಿಯೇ ನೀಡುತ್ತಿದ್ದರು. ಕಾಲ ಬದಲಾದಂತೆ ಮಣ್ಣಿಗೂ ದರ ನಿಗದಿಯಾಗಿದೆ. ಬೆಂಗಳೂರು ಮುಂತಾದ ಕಡೆ ಪರಿಸರಕ್ಕೆ ಹಾನಿಯಾಗುವ ಮೂರ್ತಿ ರಚನೆಗಾಗಿ ಕಠಿಣ ನಿರ್ಬಂಧ ಇರುವುದರಿಂದ, ಆ ಭಾಗಗಳಿಂದಲೂ ಇತ್ತೀಚಿನ ವರ್ಷಗಳಲ್ಲಿ ಜೇಡಿ ಮಣ್ಣಿನ ಬೇಡಿಕೆ ಆರಂಭವಾಗಿದೆ.

ಈ ಹಿಂದೆ ಕ್ವಿಂಟಲ್‌ ಜೇಡಿ ಮಣ್ಣು ₹110ಕ್ಕೆ ದೊರೆಯುತ್ತಿದ್ದು, ಸದ್ಯ ದರ ₹160ಕ್ಕೆ ಏರಿಕೆಯಾಗಿದೆ. ಕರಾವಳಿಯ ಈ ಭಾಗಗಳಲ್ಲಿ ಮಣ್ಣು ತೆಗೆಯದಂತೆ ಆದೇಶ ಇರುವುದರಿಂದ ದೂರದ ಶಿರಸಿಯಿಂದ ಮಣ್ಣನ್ನು ತರಿಸಿಕೊಂಡು ಸಂಸ್ಕರಣ ಮಾಡಿ, ಮೂರ್ತಿ ತಯಾರಿಕೆಗೆ ಬಳಸಬೇಕಾದ ಅನಿವಾರ್ಯತೆ ಇದೆ. ಕೆಲಸಗಾರರ ಸಂಬಳವೂ ಏರಿಕೆಯಾಗಿರುವುದರಿಂದ ಒಟ್ಟಾರೆಯಾಗಿ ವೆಚ್ಚದ ಹೊರೆ ಗ್ರಾಹಕರ ಮೇಲಾಗುತ್ತಿದೆ ಎನ್ನುತ್ತಾರೆ ಗುಡಿಗಾರ್ ವಸಂತ್.zaq~Z

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.