ADVERTISEMENT

ಉಡುಪಿ: ನಿವೃತ್ತ ಶಿಕ್ಷಕನ ಕೈಯಲ್ಲರಳಿದ ಬಗೆ ಬಗೆ ಗಣಪ

ಮೂರ್ತಿ ಖರೀದಿಸಲು ಬರುವವರಿಗೆ ಪರಿಸರ ಸಂರಕ್ಷಣೆಯ ಪಾಠ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 7:25 IST
Last Updated 31 ಆಗಸ್ಟ್ 2024, 7:25 IST
ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಶೇಖರ ಕಲ್ಮಾಡಿ
ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಶೇಖರ ಕಲ್ಮಾಡಿ   

ಉಡುಪಿ: ಅಷ್ಟಮಿ ಕಳೆದು ಗಣೇಶೋತ್ಸವ ಸಮೀಪಿಸುತ್ತಿದ್ದಂತೆ ವಿನಾಯಕನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಎಲ್ಲೆಡೆ ಭರದಿಂದ ಸಾಗುತ್ತಿದೆ. ಈ ನಡುವೆ ನಗರದ ಅಲೆವೂರಿನ ನಿವೃತ್ತ ಶಿಕ್ಷಕರೊಬ್ಬರು ಮೂರ್ತಿ ತಯಾರಿಸಿ ಮಾರಾಟ ಮಾಡುವುದರ ಜೊತೆಗೆ ಖರೀದಿಸುವವರಿಗೆ ಪರಿಸರ ಸಂರಕ್ಷಣೆಯ ಸಲಹೆಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಾರೆ.

ಅಲೆವೂರಿನ 69 ವರ್ಷದ ಶೇಖರ ಕಲ್ಮಾಡಿ ಅವರು, ಪ್ರತಿವರ್ಷವೂ ಪರಿಸರಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಜೊತೆಗೆ ತಮಗೆ ಸಿದ್ದಿಸಿರುವ ಈ ಕಲೆಯನ್ನು ಉಳಿದವರಿಗೆ ಕಲಿಸುವ ಕೆಲಸವನ್ನೂ ಮಾಡುತ್ತಾರೆ.

‘ಸಣ್ಣ ವಿಗ್ರಹಗಳನ್ನು ಬಾವಿಗೆ ಹಾಕಬೇಡಿ ಬಕೆಟ್‌ಗಳಲ್ಲೇ ವಿಸರ್ಜಿಸಿ, ದೊಡ್ಡ ಮೂರ್ತಿಗಳನ್ನು ನಗರಸಭೆ ಹಾಗೂ ಸಂಬಂಧಪಟ್ಟವರು ನಿಗದಿಪಡಿಸಿರುವ ಸ್ಥಳಗಳಲ್ಲೇ ವಿಸರ್ಜಿಸಿ’ ಎಂದು ಪ್ರತಿ ಖರೀದಿದಾರರಿಗೂ ಕಿವಿಮಾತು ಹೇಳಲು ಅವರು ಮರೆಯುವುದಿಲ್ಲ.

ADVERTISEMENT

ನಾನು ಶಿಕ್ಷಕನಾಗಿದ್ದಾಗ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂತು. ಅದುವರೆಗೆ ಮಣ್ಣಿನ ಮೂರ್ತಿಯನ್ನು ಮಾಡದಿದ್ದರೂ ಪ್ರಯತ್ನಿಸಿ ನೋಡೋಣವೆಂದು ಮೂರ್ತಿ ಮಾಡಲು ಪ್ರಯತ್ನಿಸಿದೆ, ಅದು ಚೆನ್ನಾಗಿಯೇ ಮೂಡಿಬಂದು ಅನಂತರ ಅದರಲ್ಲಿ ಆಸಕ್ತಿ ಮೂಡಿ ಬಗೆ ಬಗೆಯ ಮೂರ್ತಿಗಳನ್ನು ತಯಾರಿಸಿದ್ದೇನೆ. ಮೂರ್ತಿ ತಯಾರಿಯ ಯಾವುದೇ ತರಬೇತಿ ಪಡೆದಿಲ್ಲ ಎನ್ನುತ್ತಾರೆ ಅವರು.

ಶೇಖರ ಅವರು ಅಲೆವೂರಿನ ನೆಹರೂ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದಾರೆ.

ಆವೆ ಮಣ್ಣಿನಿಂದ ಮೂರ್ತಿ ತಯಾರಿಸುವ ಜೊತೆಗೆ ಪರಿಸರಕ್ಕೆ ಹಾನಿಕಾರಕವಲ್ಲದ ಬಣ್ಣವನ್ನೂ ಮಿತವಾಗಿ ಬಳಸಿ ಮೂರ್ತಿಯನ್ನು ತಯಾರಿಸುತ್ತೇನೆ. ಕೆಲವರು ಅವರಾಗಿಯೇ ಬಂದು ನನಗೆ ಮೂರ್ತಿ ನಿರ್ಮಾಣಕ್ಕೆ ಸಹಾಯ ಮಾಡುತ್ತಾರೆ ಮತ್ತು ಈ ಕಾಯಕವನ್ನು ಕಲಿಯುತ್ತಾರೆ. ಹೀಗಾಗಿ ಮೂರ್ತಿ ತಯಾರಿಕೆಯಲ್ಲೂ ನನಗೆ ಶಿಷ್ಯಗಣ ದೊಡ್ಡದಿದೆ ಎಂದು ಹೇಳುತ್ತಾರೆ ಅವರು.

ಶೇಖರ ಕಲ್ಮಾಡಿ ಅವರು ನಿರ್ಮಿಸುವ ಮೂರ್ತಿಗಳಿಗೆ ಪ್ರತಿವರ್ಷವೂ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಸಂಘ ಸಂಸ್ಥೆಗಳು ಮನೆಯಲ್ಲಿ ವಿಗ್ರಹ ಇರಿಸಿ ಪೂಜಿಸುವವರು ಇವರ ಬಳಿಯಿಂದ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಾರೆ.

ಉಡುಪಿಯ ಮಣಿಪುರ, ಶಾಂತಿನಗರ, ಪ್ರಗತಿನಗರ, ಮಟ್ಟು, ಪಡುಕೆರೆ ಮೊದಲಾದೆಡೆಯ ಗಣೇಶೋತ್ಸವ ಸಮಿತಿಗಳು ಪ್ರತಿವರ್ಷವೂ ಇವರು ತಯಾರಿಸುವ ಮೂರ್ತಿಗಳನ್ನೇ ಪೂಜಿಸಲು ಕೊಂಡೊಯ್ಯುತ್ತಿವೆ.

ಒಂದೂವರೆ ಅಡಿ ಎತ್ತರದ ಗಣಪತಿ ವಿಗ್ರಹದಿಂದ ಐದು ಅಡಿ ಎತ್ತರದವರೆಗಿನ ಗಣಪತಿಯ ಬಗೆಬಗೆಯ ಮೂರ್ತಿಗಳು ಶೇಖರ ಅವರ ಕೈಯಲ್ಲರಳಿವೆ. ಅಲ್ಲದೆ ಅಲೆವೂರಿನ ಸಾರ್ವಜನಿಕ ಗಣೇಶೋತ್ಸವಕ್ಕೆ ಅವರು ಪ್ರತಿವರ್ಷ ಉಚಿತವಾಗಿ ಗಣೇಶನ ವಿಗ್ರಹವನ್ನು ನೀಡುತ್ತಾರೆ. ಈ ವಿಗ್ರಹವನ್ನು ವಿವಿಧ ಸ್ವರೂಪಗಳಲ್ಲಿ ಮಾಡುತ್ತಾರೆ. ಈ ಬಾರಿ ಗರುಡವಾಹನ ಗಣಪತಿ ಮೂರ್ತಿ ಅವರ ಕಲಾಶಾಲೆಯಲ್ಲಿ ಸಿದ್ಧಗೊಳ್ಳುತ್ತಿದೆ.

ಸಿದ್ಧಗೊಂಡಿರುವ ಗಣೇಶ ಮೂರ್ತಿಗಳು
ಕುಂದಾಪುರದಿಂದ ಮಣ್ಣು ತಂದು ಚೌತಿಗಿಂತ ಎರಡು ತಿಂಗಳುಗಳ ಮೊದಲೇ ಮೂರ್ತಿ ನಿರ್ಮಾಣ ಕಾರ್ಯ ಆರಂಭಿಸುತ್ತೇನೆ. ಪ್ರತಿವರ್ಷ 35ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸುತ್ತೇನೆ
ಶೇಖರ ಕಲ್ಮಾಡಿ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.