ಉಡುಪಿ: ಉಡುಪಿ–ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಒಂದೇ ಗುಂಪಿನ 2 ತಂಡಗಳ ನಡುವೆ ಈಚೆಗೆ ನಡೆದ ಗ್ಯಾಂಗ್ ವಾರ್ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಮಾರಕಾಸ್ತ್ರಗಳಿಂದ ಹೊಡೆದಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ನಾಗರಿಕರು ಒತ್ತಾಯಿಸಿದ್ದಾರೆ
ಮತ್ತೊಂದೆಡೆ, ಗ್ಯಾಂಗ್ ವಾರ್ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಗೃಹ ಸಚಿವರು ರಾಜೀನಾಮೆ ನೀಡಲಿ: ಗ್ಯಾಂಗ್ ವಾರ್ ಘಟನೆ ಉಡುಪಿಯ ಪಾಲಿಗೆ ಕಪ್ಪುಚುಕ್ಕೆಯಾಗಿದ್ದು ಕ್ರಿಮಿನಲ್‌ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಪರಿಣಾಮ ಕ್ರಿಮಿನಲ್‌ಗಳು ವಿಜೃಂಭಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರೂ ಆಗಿರುವ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಗ್ಯಾಂಗ್ ವಾರ್ ಕೃತ್ಯ ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿರುವ ಸುನಿಲ್ ಕುಮಾರ್ ಸರ್ಕಾರದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.
ಕಾನೂನು-ಸುವ್ಯವಸ್ಥೆ ಕಾಪಾಡಲಾರದ ಗೃಹ ಸಚಿವರಿಂದ ಯಾವಾಗ ರಾಜೀನಾಮೆ ಪಡೆಯುತ್ತೀರಿ, ಪೊಲೀಸ್ ಠಾಣೆಗಳನ್ನು ಆಳುವ ಸರ್ಕಾರದ ಆಳಾಗಿಸಿಕೊಂಡಿರುವುದಕ್ಕೆ ಎಂದು ಮುಕ್ತಾಯ ಹಾಡುತ್ತೀರಿ, ಕ್ರಿಮಿನಲ್‌ಗಳಿಗೂ ಸರ್ಕಾರಕ್ಕೂ ಒಳ ಒಪ್ಪಂದ ಏರ್ಪಟ್ಟಿದ್ದರೆ ಹಫ್ತಾ ಎಷ್ಟು ನಿಗದಿ ಮಾಡಿದ್ದೀರಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರ ಕೈ ಕಟ್ಟಿ ಹಾಕಿದ್ದೀರಾ, ಶಾಂತಿ- ನೆಮ್ಮದಿ ಕಾಪಾಡಲಾರದ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜನ ಏನು. ಕ್ರಿಮಿನಲ್‌ಗಳ ಅಟ್ಟಹಾಸ ನಿಲ್ಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಭಯವೇಕೆ, ಸಣ್ಣ ಕಾರಣಕ್ಕೆ ಶಾಸಕರನ್ನು ಬಂಧಿಸಲು ದಂಡು ಕಳುಹಿಸುವ ಸರ್ಕಾರಕ್ಕೆ ಪುಂಡರನ್ನು ಬಂದಿಸುವ ಗಂಡೆದೆ ಇಲ್ಲವೇ ಎಂದು ಸುನಿಲ್ ಕುಮಾರ್ ಸರಣಿ ಪ್ರಶ್ನೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿ:
ಸಿನಿಮೀಯ ಮಾದರಿಯಲ್ಲಿ ರಸ್ತೆಯಲ್ಲಿ ಕಾರು ನಿಲ್ಲಿಸಿ ಹೊಡೆದಾಡಿಕೊಂಡಿರುವುದು ಕ್ರಿಮಿನಲ್‌ಗಳಿಗೆ ಕಾನೂನಿನ ಭಯ ಇಲ್ಲ ಎಂಬುದನ್ನು ತೋರಿಸುತ್ತದೆ. ಗ್ಯಾಂಗ್‌ವಾರ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆ ಯಾರ ಒತ್ತಡಕ್ಕೂ ಮಣಿಯದೆ ಕಿಡಿಗೇಡಿಗಳ ಹೆಡೆಮುರಿ ಕಟ್ಟಬೇಕು ಎಂದು ಮಾಜಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಆರೋಪಿಗಳು ಗರುಡ ಗ್ಯಾಂಗ್‌ನವರು
ಗರುಡ ಗ್ಯಾಂಗ್‌ನ ಸದಸ್ಯರ ನಡುವೆ ಮಾರಾಮಾರಿ ನಡೆದಿದೆ. ಗ್ಯಾಂಗ್ ಎರಡು ತಂಡಗಳಾಗಿ ವಿಭಜನೆಯಾಗಿದ್ದು ಅಸೂಯೆ ವೈಮನಸ್ಸಿನಿಂದ ಪರಸ್ಪರ ತಂಡದ ಸದಸ್ಯರು ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಅಶಿಕ್ ರಖೀಬ್ ಹಾಗೂ ಸಕ್ಲೇನ್ ಎಂಬುವರನ್ನು ಬಂಧಿಸಲಾಗಿದ್ದು ಎರಡು ಕಾರು ಎರಡು ಬೈಕ್ ಡ್ರ್ಯಾಗರ್ ತಲವಾರು ವಶಪಡಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರುವವರ ಬಂಧನಕ್ಕೆ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಎಸ್‌ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಗೃಹ ಇಲಾಖೆ ವೈಫಲ್ಯ
ಉಡುಪಿ ಗ್ಯಾಂಗ್ ವಾರ್ ಪ್ರಕರಣ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸಂಸ್ಕೃತರ ಬುದ್ಧಿವಂತರ ಜಿಲ್ಲೆಯಲ್ಲಿ ನಡುರಸ್ತೆಯಲ್ಲಿ ರೌಡಿಗಳು ಮಾರಕಾಸ್ತ್ರ ಹಿಡಿದು ಅಟ್ಟಹಾಸ ಮೆರೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.