ADVERTISEMENT

DNP ಉಡುಪಿ: ಮುಗಿಯದ ತ್ಯಾಜ್ಯ ಗೋಳು, ಕಲುಷಿತ ನದಿಗಳ ಒಡಲು

ಕಸ ವಿಲೇವಾರಿ ತಾಣಗಳಾದ ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು, ರಸ್ತೆಯ ಇಕ್ಕೆಲಗಳು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 9:04 IST
Last Updated 26 ಫೆಬ್ರುವರಿ 2023, 9:04 IST
ಉಡುಪಿಯ ಬನ್ನಂಜೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಿಸಾಡಿರುವ ತ್ಯಾಜ್ಯ
ಉಡುಪಿಯ ಬನ್ನಂಜೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಿಸಾಡಿರುವ ತ್ಯಾಜ್ಯ   

ಉಡುಪಿ: ಹಸಿ ಹಾಗೂ ಒಣ ತ್ಯಾಜ್ಯ ನಿರ್ವಹಣೆಯಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದ್ದರೂ ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು, ನಿರ್ಜನ ಪ್ರದೇಶಗಳು, ರಸ್ತೆಯ ಇಕ್ಕೆಲಗಳು ಇಂದಿಗೂ ತಾಜ್ಯ ವಿಲೇವಾರಿಯ ತಾಣಗಳಾಗಿವೆ. ಸ್ಥಳೀಯ ಆಡಳಿತಗಳ ಇಚ್ಛಾಶಕ್ತಿಯ ಕೊರತೆ ಹಾಗೂ ಸಾರ್ವಜನಿಕರ ಅಸಹಕಾರದಿಂದ ಉಡುಪಿ ಜಿಲ್ಲೆ ತ್ಯಾಜ್ಯದ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ.

ಉಡುಪಿ ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯ ನಿರ್ವಹಣೆಗೆ ನಗರಸಭೆ ಹೆಚ್ಚಿನ ಒತ್ತು ನೀಡಿದೆಯಾದರೂ ಅನುಷ್ಠಾನ ಹಂತದಲ್ಲಿನ ಲೋಪ ದೋಷಗಳಿಂದ ನಗರದ ಹಲವು ಕಡೆಗಳಲ್ಲಿ ತ್ಯಾಜ್ಯ ಹರಡಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ರ ನಿಟ್ಟೂರಿನಿಂದ ಬಲಾಯಿಪಾದೆಯವರೆಗೂ ರಸ್ತೆಯ ಇಕ್ಕೆಗಳಲ್ಲಿ ಕಸ ಹಾಕಲಾಗುತ್ತಿದೆ.

ಹಾಗೆಯೇ ರಾಷ್ಟ್ರೀಯ ಹೆದ್ದಾರಿ 169 ‘ಎ’ ವ್ಯಾಪ್ತಿಯ ಮಲ್ಪೆಯಿಂದ ಮಣಿಪಾಲದವರೆಗೂ ರಸ್ತೆಯ ಬದಿಯ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡಲಾಗುತ್ತಿದೆ. ಪ್ಲಾಸ್ಟಿಕ್‌ ಕೈಚೀಲ, ಮನೆಯಲ್ಲಿ ಉತ್ಪತ್ತಿಯಾಗುವ ಕೊಳೆತ ಹಸಿ ತ್ಯಾಜ್ಯ, ಕೆಟ್ಟುಹೋದ ಎಲೆಕ್ಟ್ರಾನಿಕ್ಸ್ ವಸ್ತುಗಳು, ಥರ್ಮಾಕೋಲ್‌, ಹಳೆಯ ಬಟ್ಟೆಗಳು, ಬಳಕೆಗೆ ಯೋಗ್ಯವಿಲ್ಲದ ಗೃಹೋಪಯೋಗಿ ವಸ್ತುಗಳನ್ನು ತಂದು ಸುರಿಯಲಾಗುತ್ತಿದೆ.

ADVERTISEMENT

ಪ್ಲಾಸ್ಟಿಕ್‌ ಚೀಲಗಳು ಗಾಳಿಗೆ ತೂರಿ ಹೆದ್ದಾರಿಗೆ ಬೀಳುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಹಸಿ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ತೊಟ್ಟೆಗಳನ್ನು ನಾಯಿಗಳು ಹಾಗೂ ಬಿಡಾಡಿ ದನಗಳು ರಸ್ತೆಗೆ ಎಳೆದು ತರುತ್ತಿದ್ದು ದುರ್ವಾಸನೆ ಬೀರುತ್ತಿದೆ.

ಖಾಲಿ ನಿವೇಶನಗಳಲ್ಲಿ ಕಸ:

ನಗರದಲ್ಲಿರುವ ಬಹುತೇಕ ಖಾಲಿ ನಿವೇಶನಗಳು ನಿರ್ವಹಣೆ ಕೊರತೆಯಿಂದ ಕಸ ವಿಲೇವಾರಿ ತಾಣಗಳಾಗಿ ಬದಲಾಗಿವೆ. ಬೆಳಗಿನ ಜಾವ ಹಾಗೂ ಕತ್ತಲಾದ ಬಳಿಕ ಸಾರ್ಜಜನಿಕರು ಖಾಲಿ ನಿವೇಶನಗಳಿಗೆ ಹಸಿ ಹಾಗೂ ಒಣ ಕಸ ತಂದು ಹಾಕುತ್ತಿದ್ದು ಸ್ಥಳೀಯರು ದುರ್ವಾಸನೆಗೆ ಬೇಸತ್ತಿದ್ದಾರೆ.

ನಗರೀಕರಣದ ಭರಾಟೆಯ ಮಧ್ಯೆಯೂ ಅಸ್ತಿತ್ವ ಉಳಿಸಿಕೊಂಡಿರುವ ನದಿ, ಕೆರೆಗಳು, ಸಣ್ಣ ತೋಡುಗಳು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಭರ್ತಿಯಾಗಿವೆ. ನಗರದೊಳಗೆ ಹರಿಯುವ ಚಿಕ್ಕ ತೋಡುಗಳಲ್ಲೂ ತ್ಯಾಜ್ಯ ತುಂಬಿದ್ದು ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿ ಕೃತಕ ನೆರೆ ನಿರ್ಮಾಣವಾಗುತ್ತಿದೆ.

ಇಂದ್ರಾಣಿ ನದಿಯ ಒಡಲು, ಕಲ್ಮಾಡಿ ಹೊಳೆಗಳಲ್ಲಿ ಟನ್‌ಗಟ್ಟಲೆ ಪ್ಯಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದ್ದು ವಿಲೇವಾರಿಯೇ ದೊಡ್ಡ ಸವಾಲಾಗಿ ಕಾಡುತ್ತಿದೆ.

ಬಿಡಾಡಿ ಜಾನುವಾರುಗಳಿಗೆ ಕಂಟಕ:

ಹಸಿ ತ್ಯಾಜ್ಯವನ್ನು ಪ್ಲಾಸ್ಟಿಕ್‌ ತೊಟ್ಟೆಯ ಸಮೇತ ಬಿಸಾಡಲಾಗುತ್ತಿದ್ದು ಬಿಡಾಡಿ ದನಗಳು ಹಾಗೂ ನಾಯಿಗಳು ತಿನ್ನುವಾಗ ಪ್ಲಾಸ್ಟಿಕ್ ಕವರ್ ಕೂಡ ಹೊಟ್ಟೆ ಸೇರಿ ಜಾನುವಾರುಗಳ ಜೀವಕ್ಕೆ ಕಂಟವಾಗಿ ಕಾಡುತ್ತಿದೆ.

ಬ್ರಹ್ಮಾವರದಲ್ಲೂ ಸಮಸ್ಯೆ ಗಂಭೀರ:

ಬ್ರಹ್ಮಾವರ‌ ತಾಲ್ಲೂಕು ಕೇಂದ್ರವಾಗಿ ಹಲವು ವರ್ಷಗಳು ಕಳೆದರೂ ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆಗೆ ಸೂಕ್ತ‌ ಪರಿಹಾರ ಸಿಕ್ಕಿಲ್ಲ. ಹಾರಾಡಿ, ವಾರಂಬಳ್ಳಿ, ಹಂದಾಡಿ ಮತ್ತು ಚಾಂತಾರು ಗ್ರಾಮ‌ ಪಂಚಾಯಿತಿಗಳಿಗೆ ಹಂಚಿ‌ಹೋಗಿರುವ ಬ್ರಹ್ಮಾವರ ನಗರದಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಾಗೂ ಚರಂಡಿಯಲ್ಲಿ ಕಸ ತುಂಬಿ ತುಳುಕುತ್ತಿದೆ.

ನಗರದ ನಿರ್ಮಲ ಶಾಲೆಯಿಂದ ಭರಣಿ ಪೆಟ್ರೋಲ್ ಬಂಕ್‌ವರೆಗಿನ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿದೆ.‌ ಬ್ರಹ್ಮಾವರದ ಗಾಂಧಿ ಮೈದಾನ ಮತ್ತು ಆಕಾಶವಾಣಿ ಪ್ರದೇಶ ತ್ಯಾಜ್ಯವನ್ನು ತಂದು ಬಿಸಾಡುವ ತಾಣಗಳಾಗಿ ಬದಲಾಗಿವೆ.

ಚಾಂತಾರು ಗ್ರಾಮ ಪಂಷಾಯಿತಿ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆಯಾದರೂ, ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳದ ಪರಿಣಾಮ ಬ್ರಹ್ಮಾವರ–ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ತ್ಯಾಜ್ಯ ಕಣ್ಣಿಗೆ ರಾಚುತ್ತದೆ.

ತ್ಯಾಜ್ಯ ವಿಲೇವಾರಿಗೆ ಜಾಗದ ಸಮಸ್ಯೆ ಒಂದೆಡೆಯಾದರೆ ವಿದ್ಯಾವಂತರು ಎನಿಸಿಕೊಂಡವರೇ ತ್ಯಾಜ್ಯವನ್ನು ರಸ್ತೆ ಬದಿಗೆ ತಂದು ಎಸೆಯುತ್ತಿರುವುದರಿಂದ ಸಮಸ್ಯೆ ಗಂಭೀರವಾಗಿದ್ದು, ಡೆಂಗಿ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ.

ಹಾರಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಎಂಆರ್‌ಎಫ್ ಘಟಕ ಸ್ಥಾಪನೆಗೆ ಮುಂದಾಯಿತಾದರೂ ಸ್ಥಳೀಯರ ವಿರೋಧದ ಕಾರಣ ಘಟಕ ಆರಂಭವಾಗಿಲ್ಲ. ಪರಿಣಾಮ ಹಾರಾಡಿ ವ್ಯಾಪ್ತಿಯಲ್ಲಿ ತ್ಯಾಜ್ಯದ ಸಮಸ್ಯೆ ಗಂಭೀರವಾಗಿದೆ. ಬ್ರಹ್ಮಾವರ ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ತ್ಯಾಜ್ಯದ ಸಮಸ್ಯೆಗೆ ಮಾತ್ರ ಪರಿಹಾರ ಸಿಗದಿರುವುದು ದುರದೃಷ್ಟಕರ.

ಹೆಚ್ಚು ಕಸ ಬಿಸಾಡುವ ಜಾಗಗಳಲ್ಲಿ ಚಾಂತಾರು ಗ್ರಾಮ‌ ಪಂಚಾಯಿತಿ ಎಚ್ಚರಿಕೆಯ ಜಾಗೃತಿ ಬ್ಯಾನರ್‌ಗಳನ್ನು ಹಾಕಿದ್ದರೂ ಪ್ರಯೋಜನವಾಗಿಲ್ಲ. ಐರೋಡಿ ಪಂಚಾಯಿತಿ ವ್ಯಾಪ್ತಿಯ ಮಾಬುಕಳ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಎರಡೂ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ಬಿಸಾಡಲಾಗುತ್ತಿದೆ.

ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಎಸ್ಎಲ್ಆರ್‌ಎಂ ಘಟಕಗಳನ್ನು ನಿರ್ವಹಣೆ ಮಾಡಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸ್ವಲ್ಪ ಕಡಿವಾಣ ಹಾಕಬಹುದು ಎನ್ನುತ್ತಾರೆ ಸ್ಥಳೀಯರು.

‘ರಸ್ತೆ ಬದಿ ಮದ್ಯದ ಬಾಟಲಿ’

ಹೆಬ್ರಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಸಿ ಹಾಗೂ ಒಣ ಕಸ ಸಂಗ್ರಹ ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ವಿಲೇವಾರಿ ಸಮಸ್ಯೆಯಾಗಿ ಕಾಡುತ್ತಿದೆ. ಒಣ ತ್ಯಾಜ್ಯಗಳ ಕೆಲವು ಮಾದರಿಗಳು ಮಾರಾಟವಾಗದೆ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗಿ ಬಿದ್ದಿದೆ. ಜತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಹೆಬ್ರಿಯ ಬಹುತೇಕ ರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ಹರಡಿದೆ. ಪ್ರಥಮ ದರ್ಜೆ ಕಾಲೇಜು ರಸ್ತೆಯ ಇಕ್ಕೆಲ, ಕಾರ್ಕಳ ಹೆಬ್ರಿ ರಸ್ತೆಯೂ ಕಸದ ಕೊಂಪೆಯಾಗಿ ದುರ್ವಾಸನೆ ಬೀರುತ್ತಿದೆ.

ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಸವನ್ನು ತಂದು ಬಿಸಾಡುವ ಜಾಗಗಳನ್ನು (ಬ್ಲಾಕ್‌ ಸ್ಪಾಟ್‌) ಗುರುತಿಸಿ ಕಿರು ಉದ್ಯಾನಗಳನ್ನು ಮಾಡಲಾಗಿದೆ. ನಗರಸಭೆ ಕಠಿಣ ಕಾನೂನುಗಳನ್ನು ಅನುಷ್ಠಾನಗೊಳಿಸಿ ದಂಡ ವಿಧಿಸಿದರೂ ಸಾರ್ವಜನಿಕರ ಸಹಕಾರ ಇಲ್ಲದೆ ಯಾವ ಯೋಜನೆ, ಕಾರ್ಯಕ್ರಮವೂ ಯಶಸ್ವಿಯಾಗುವುದಿಲ್ಲ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಬಿಸಾಡದೆ ಕಸ ಸಂಗ್ರಹಿಸುವ ವಾಹನಕ್ಕೆ ಕೊಡಬೇಕು. ದಿನಬಳಕೆಯ ವಸ್ತುಗಳನ್ನು ಖರೀದಿಸಲು ಪ್ಲಾಸ್ಟಿಕ್ ತೊಟ್ಟೆಯ ಬದಲಾಗಿ ಬಟ್ಟೆಯ ಬ್ಯಾಗ್ ಬಳಸಬೇಕು.

–ಉದಯ ಶೆಟ್ಟಿ, ನಗರಸಭೆ ಪೌರಾಯುಕ್ತ

ಏಕ ಬಳಕೆ ಪ್ಲಾಸ್ಟಿಕ್ ಹಾವಳಿ

ಏಕ ಬಳಕೆಯ ಪ್ಲಾಸ್ಟಿಕ್‌ ನಿಷೇಧವಾಗಿದ್ದರೂ ಬಳಕೆ ಮಾತ್ರ ಸಂಪೂರ್ಣವಾಗಿ ನಿಂತಿಲ್ಲ. ಮಾರುಕಟ್ಟೆ, ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ರಾಜಾರೋಷವಾಗಿ ನಡೆಯುತ್ತಿದೆ. ಹಾಲು, ತರಕಾರಿ ದಿನಸಿ ಸೇರಿದಂತೆ ಅಗತ್ಯ ವಸ್ತಗಳನ್ನು ವ್ಯಾಪಾರಿಗಳು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕೊಡುತ್ತಿರುವ ಪರಿಣಾಮ ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿ ಹೆಚ್ಚಾಗಿದೆ. ನಗರಸಭೆ ನಿಯಮಿತವಾಗಿ ದಾಳಿ ನಡೆಸಿ ದಂಡ ವಿಧಿಸಿದರೆ ಪ್ಲಾಸ್ಟಿಕ್ ಕೈಚೀಲಗಳ ಬಳಕೆಯನ್ನು ತಗ್ಗಿಸಬಹುದು ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.