ಉಡುಪಿ: ಅಪ್ಪನ ಮಾತಿಗೆ ಕಟ್ಟುಬಿದ್ದು ಪಾದ್ರಿಯಾಗಲು ಹೊರಟಿದ್ದ ಬಿಸಿ ರಕ್ತದ ಯುವಕ ಸಮಾಜವಾದಿ ನಾಯಕನಾಗಿ ರೂಪುಗೊಂಡ. ದೇಶದೆಲ್ಲೆಡೆ ಕಾರ್ಮಿಕ ಚಳವಳಿಗಳನ್ನು ಹುಟ್ಟುಹಾಕಿದ. ಶೋಷಣೆಗೊಳಗಾದವರ, ಧನಿ ಕಳೆದುಕೊಂಡವರ ನಾಯಕನಾಗಿ ಬೆಳೆದ. ಹೀಗೆ, ಜಾರ್ಜ್ ಫೆರ್ನಾಂಡೀಸ್ ಅವರ ವ್ಯಕ್ತಿತ್ವವನ್ನು ಬಾಲ್ಯದ ಗೆಳೆಯ ಅಮ್ಮೆಂಬಳ ಆನಂದ್ ನೆನಪಿಸಿಕೊಂಡರು.
ಜಾರ್ಜ್ ಹಾಗೂ ನಾನು ಸಹಪಾಠಿಗಳು. ಮಂಗಳೂರಿನ ಬಿಜೈನಲ್ಲಿ 3 ರಿಂದ 5ನೇ ತರಗತಿವರೆಗೂ ಒಟ್ಟಾಗಿ ಕಲಿತೆವು. ಬಳಿಕ ಜಾರ್ಜ್ ಸಂತ ಅಲೋಷಿಯಸ್ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣಕ್ಕೆ ತೆರಳಿದರು. ಇಬ್ಬರು ಬೇರೆಯಾದರೂ, ಗೆಳೆತನ, ಒಡನಾಟ ಮುಂದುವರಿದಿತ್ತು ಎಂದು ಸ್ಮರಿಸಿದರು ಅಮ್ಮೆಂಬಳ ಆನಂದ್.
ಜಾರ್ಜ್ ಫೆರ್ನಾಂಡೀಸ್ ಪಾದ್ರಿಯಾಗಬೇಕೆಂಬ ಮಹದಾಸೆ ತಂದೆ ಜಾನ್ ಫೆರ್ನಾಂಡಿಸ್ ಅವರದ್ದು. ಅದಕ್ಕಾಗಿ 1948ರಲ್ಲಿ ಧರ್ಮಧೀಕ್ಷೆ ಪಡೆಯುವಂತೆ ಬೆಂಗಳೂರಿಗೆ ಕಳುಹಿಸಿದ್ದರು. ಜಾರ್ಜ್ ಮನಸ್ಥಿತಿಗೆ ಸನ್ಯಾಸ ಒಗ್ಗಲಿಲ್ಲ. ಅವರೊಳಗೆ ಅದಾಗಲೇ ಸಮಾಜವಾದಿ ಚಿಂತನೆಗಳು ಮೊಳೆತಿದ್ದವು ಎಂದರು.
ಬೆಂಗಳೂರು ಬಿಟ್ಟು ಮಂಗಳೂರಿಗೆ ಬಂದ ಜಾರ್ಜ್ ಅವರನ್ನು ಅಪ್ಪ ಮನೆಗೆ ಸೇರಿಸಿಕೊಳ್ಳಲಿಲ್ಲ. ಧರ್ಮದ್ರೋಹ ಮಾಡಿರುವುದಾಗಿ ಹೊರಹಾಕಿದರು. ಮಂಗಳೂರು ಪೇಟೆಯ ಸೆಂಟ್ರಲ್ ಮೈದಾನದ ಬಳಿಯ ಉದ್ಯಾನದಲ್ಲಿ ಮಲಗಿದ್ದ ಜಾರ್ಜ್, ಸಮಾಜವಾದಿ ಧುರೀಣ ಅಮ್ಮೆಂಬಳ ಬಾಳಪ್ಪನ ಕಣ್ಣಿಗ ಬಿದ್ದರು. ಅಂದಿನಿಂದ ಅವರ ಬದುಕು ತಿರುವು ಪಡೆಯಿತು ಎಂದು ನೆನಪಿಸಿಕೊಂಡರು ಆನಂದ್.
ಬಾಳಪ್ಪ ಅವರಿಗೆ ಜಾರ್ಜ್ ಪರಿಚಯವಿತ್ತು. ಮನೆಬಿಟ್ಟು ಬಂದಿದ್ದದ ಅವರನ್ನು ಜತೆಯಲ್ಲಿ ಕರೆದೊಯ್ದು ಬೆಳೆಸಿದರು. ಡಾ.ಕೆ.ನಾಗಪ್ಪ ಆಳ್ವ ಹಾಗೂ ಸಮಾಜವಾದಿಗಳ ಒಡನಾಟ ಸಿಕ್ಕಿತು. ಫೆಲಿಕ್ಸ್ ಪೈ ಬಜಾರಿನಲ್ಲಿ ನಡೆಯುತ್ತಿದ್ದ ಕಾರ್ಮಿಕಪರ ಹೋರಾಟಗಳ ಚರ್ಚೆ ಸೆಳೆಯಿತು. ಪತ್ರಿಕೋದ್ಯಮದತ್ತಲೂ ಆಸಕ್ತಿ ಬೆಳೆಯಿತು. ಹೋಟೆಲ್ ಕಾರ್ಮಿಕರ ಪರವಾಗಿ ಹೋರಾಟಗಳನ್ನು ಮಾಡುತ್ತಾ ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡರು ಎಂದರು.
1950ರ ಸುಮಾರಿಗೆ ಮುಂಬೈನಲ್ಲಿ ಕಾರ್ಮಿಕ ಹೋರಾಟಗಳು ಜೋರಾಗಿತ್ತು. ಮಂಗಳೂರು ಮೂಲದ ಪಿ.ಡಿಮೆಲ್ಲೋ ಬಹುದೊಡ್ಡ ನಾಯಕನಾಗಿ ಗುರುತಿಸಿಕೊಂಡಿದ್ದರು. ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಅಂದಿನ ಗೃಹ ಸಚಿವ ಮೊರಾರ್ಜಿ ದೇಸಾಯಿ ಡಿಮೆಲ್ಲೋ ಸೇರಿದಂತೆ ನಾಲ್ವರು ಹೋರಾಟಗಾರರನ್ನು ಗಡಿಪಾರು ಮಾಡಿದರು.
ಮಂಗಳೂರಿಗೆ ಬಂದ ಡಿಮೆಲ್ಲೊ ಇಲ್ಲಿಯೂ ಕಾರ್ಮಿಕ ಚಳುವಳಿಗಳಿಗೆ ಜೀವ ತುಂಬಿದರು. ಮೋಟಾರು ಸಾರಿಗೆ ನೌಕರರ ಸಂಘ ಕಟ್ಟಿಕೊಂಡು ಚಾಲಕರು, ನಿರ್ವಾಹಕರ ಪರವಾಗಿ ಮುಷ್ಕರ ಆರಂಭಿಸಿದರು. ಈ ವೇಳೆ ಡಿಮೆಲ್ಲೊ ಅವರಿಗೆ ಜಾರ್ಜ್ ಪರಿಚಯವಾಗಿ ಅವರೊಳಗಿದ್ದ ಶಕ್ತಿಯ ಅರಿವಾಯಿತು. ಗಡಿಪಾರು ಅವಧಿ ಮುಗಿಸಿ ಡಿಮೆಲ್ಲೊ ಮುಂಬೈಗೆ ತೆರಳಿದ ಬಳಿಕ ಅಮ್ಮೆಂಬಳ ಬಾಳಪ್ಪನವರು ಜಾರ್ಜ್ ಅವರನ್ನು ಡಿಮೆಲ್ಲೊ ಗರಡಿಗೆ ಕಳುಹಿಸಿಕೊಟ್ಟರು. ಈ ಸಂದರ್ಭ ಜಾರ್ಜ್ ಅವರ ಪ್ರಯಾಣದ ವೆಚ್ಚವನ್ನು ಹೋಟೆಲ್ ಕಾರ್ಮಿಕರು ಭರಿಸಿದ್ದೆವು ಎಂದು ಸ್ಮರಿಸಿದರು ಅಮ್ಮೆಂಬಳ ಆನಂದ್.
ಡಿಮೆಲ್ಲೊ ಆಕಸ್ಮಿಕ ನಿಧನದ ಬಳಿಕ ಅವರ ಜಾಗವನ್ನು ಜಾರ್ಜ್ ತುಂಬಿದರು. ಕಾರ್ಮಿಕರ ಬೆಂಬಲದೊಂದಿಗೆ ರಾಜಕೀಯ ಪ್ರವೇಶಿಸಿ ಯಶಸ್ವಿಯಾದರು. ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಜಾರ್ಜ್ ಇನ್ನಿಲ್ಲ ಎಂಬ ನೋವು ಕಾಡುತ್ತಿದೆ ಎಂದರು ಅಮ್ಮೆಂಬಳ ಆನಂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.