ಉಡುಪಿ: ಪರಂಪರೆಯಿಂದ ರೂಢಿಸಿಕೊಂಡು ಬಂದಿರುವ ಆಹಾರ ಪದ್ಧತಿಯನ್ನು ಸರ್ಕಾರ ಬದಲಿಸಬಾರದು. ಶಾಲೆಗಳಲ್ಲಿ ಸಾಮೂಹಿಕವಾಗಿ ಮೊಟ್ಟೆ ವಿತರಣೆ ಮಾಡಿದರೆ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ನೀಡಿದಂತಾಗುತ್ತದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀಗಳು, ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಸರ್ಕಾರ ಮೊಟ್ಟೆ ಕೊಡುವ ಬದಲು ನೇರವಾಗಿ ಹಣ ನೀಡಿದರೆ, ಯಾರಿಗೆ ಏನು ಬೇಕು ಅದನ್ನು ಖರೀದಿಸಿ ತಿನ್ನುತ್ತಾರೆ. ಶಿಕ್ಷಣ ನೀಡಲು ಇರುವ ಶಾಲೆಗಳಲ್ಲಿ ಮಕ್ಕಳ ಜೀವನ ಶೈಲಿ ಬದಲಿಸುವ ಕೆಲಸಕ್ಕೆ ಕೈಹಾಕಬಾರದು. ಮಕ್ಕಳಲ್ಲಿ ಮತಬೇಧ ಸೃಷ್ಟಿಸಬಾರದು ಎಂದು ಸ್ವಾಮೀಜಿ ಹೇಳಿದರು.
ಬಲವಂತದ ಮತಾಂತರ ಸಲ್ಲದು:‘ಮತಾಂತರ ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಮನೆಯೊಳಗೆ, ಸಮಾಜದೊಳಗೆ ವೈಮನಸ್ಸು, ಆತಂಕ ಹುಟ್ಟುಹಾಕುವ ಮತಾಂತರವನ್ನು ಸರ್ಕಾರ ಕಾನೂನು ಮೂಲಕ ನಿಗ್ರಹಿಸಬೇಕು. ಸ್ವಇಚ್ಛೆಯ ಮತಾಂತರಕ್ಕೆ ಯಾರ ಅಡ್ಡಿಯೂ ಇಲ್ಲ; ಆದರೆ, ಬಲವಂತ ಆಮಿಷದ ಮೂಲಕ ಮತಾಂತರಕ್ಕೆ ಮುಂದಾದರೆ ಮನೆ, ಕುಟುಂಬ, ಸಮಾಜವನ್ನು ಒಡೆದಂತಾಗುತ್ತದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.