ADVERTISEMENT

ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ಹೋಗಿದ್ದರಾ ಗೋವಾ ಸಿಎಂ?: ಆರೋಪ–ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 14:56 IST
Last Updated 10 ಅಕ್ಟೋಬರ್ 2022, 14:56 IST
   

ಉಡುಪಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಪಡೆದಿದ್ದಾರೆ ಎಂಬ ಸುದ್ದಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಉಭಯ ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದಾರೆ.

‘ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿಗೆ ಭೇಟಿನೀಡಿದ್ದಾಗ ಸರ್ಕ್ಯೂಟ್ ಹೌಸ್‌ನಲ್ಲಿ ಮಾಂಸಾಹಾರ ಸೇವಿಸಿ ಬಳಿಕ ಕೃಷ್ಣ ಮಠಕ್ಕೆ ಹೋಗಿದ್ದಾರೆ. ಅವರೊಂದಿಗೆ ಬಿಜೆಪಿ ಶಾಸಕರಾದ ರಘುಪತಿ ಭಟ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದ್ದರು’ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಮೇಶ್ ಕಾಂಚನ್‌ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಗುಲ್ಲೆಬ್ಬಿಸುವ ಬಿಜೆಪಿ ನಾಯಕರಿಗೆ ಗೋವಾ ಮುಖ್ಯಮಂತ್ರಿ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿರುವುದು ಕಾಣುತ್ತಿಲ್ಲವೇ ಎಂದು ಕೆಣಕಿದ್ದಾರೆ.

ADVERTISEMENT

ಮಾಂಸ ಸೇವಿಸಿ ಕೃಷ್ಣ ಮಠಕ್ಕೆ ಹೋಗಿದ್ದನ್ನು ಬಿಜೆಪಿ ಏಕೆ ಪ್ರಶ್ನಿಸುತ್ತಿಲ್ಲ? ಮಠ ಅಪವಿತ್ರವಾಗುವುದಿಲ್ಲವೇ ? ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡುವ ಬಿಜೆಪಿ ಉತ್ತರಿಸಬೇಕು. ಕಾಂಗ್ರೆಸ್ ಹಿಂದೂಗಳ ವಿರೋಧಿ ಎಂದು ಬಿಂಬಿಸಲು ಸಿದ್ದಪಡಿಸಿರುವ ಟೂಲ್‌ಕಿಟ್‌ನ ಭಾಗ ಎಂಬ ಸತ್ಯ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಉಡುಪಿ ಶಾಸಕ ಕೆ.ರಘುಪತಿ ಭಟ್‌, ‘ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೃಷ್ಣಮಠಕ್ಕೆ ತೆರಳುವ ಮುನ್ನ ಮಾಂಸಾಹಾರ ಸೇವಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಶನಿವಾರ ಪ್ರಮೋದ್ ಸಾವಂತ್ ಜೊತೆಗೇ ಊಟ ಮಾಡಿದ್ದು, ಅವರು ಮಾಂಸಾಹಾರ ಸೇವಿಸಿಲ್ಲ. ಖಾಸಗಿ ಹೋಟೆಲ್‌ನಿಂದ ತರಿಸಲಾದ ಸಸ್ಯಾಹಾರ ಮಾತ್ರ ಸೇವಿಸಿ ಕೃಷ್ಣಮಠಕ್ಕೆ ಹೋಗಿದ್ದಾರೆ. ಆರೋಪ ಮಾಡುವವರ ಬಳಿ ಸಾಕ್ಷ್ಯಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಪ್ರಮೋದ್ ಸಾವಂತ್ ಅವರ ಜತೆ ಬಂದಿದ್ದ ಅಧಿಕಾರಿಗಳಿಗೆ ಮಾತ್ರ ಮಾಂಸಾಹಾರದ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದೆ, ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದ ಬಗ್ಗೆ ಬಿಜೆಪಿ ವಿಡಿಯೋ, ಫೋಟೊ ಸಹಿತ ಸಾಕ್ಷ್ಯ ಮುಂದಿಟ್ಟಿತ್ತು. ಮಾಂಸಾಹಾರ ಸೇವಿಸಿ ದರ್ಪದಿಂದ ದನದ ಮಾಂಸ ತಿಂದು ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದು ವಿವಾದವಾಯಿತು. ಪ್ರಮೋದ್ ಸಾವಂತ್ ಮಾಂಸಹಾರ ಸೇವಿಸಿರುವ ಫೋಟೊ ಅಥವಾ ವಿಡಿಯೋ ಇದ್ದರೆ ಕಾಂಗ್ರೆಸ್‌ ನಾಯಕರು ನೀಡಲಿ ಎಂದು ರಘುಪತಿ ಭಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.