ಉಡುಪಿ: ರಾಜ್ಯ ಸರ್ಕಾರ ಅಧ್ಯಯನ ನಡೆಸದೆ ಕೊರಗರು ಮದ್ಯಪಾನ ಹಾಗೂ ದುಶ್ಚಟಗಳಿಂದ ತೀವ್ರ ತೆರನಾದ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಕಾರಣ ನೀಡಿ ವೈದ್ಯಕೀಯ ವೆಚ್ಚದ ಬಿಲ್ ಮರುಪಾವತಿ ಮಾಡುವುದಿಲ್ಲ ಎಂದು ಆದೇಶ ನೀಡಿರುವುದು ಅತ್ಯಂತ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಿಳಿಸಿದೆ.
ಮೂರು ತಿಂಗಳ ಅಂತರದಲ್ಲಿ 20 ವರ್ಷದೊಳಗಿನ ಕೊರಗರ ಹಲವು ಮಕ್ಕಳು ಮೃತಪಟ್ಟಿದ್ದಾರೆ. ಅವರಿಗೆ ಯಾವ ದುಶ್ಚಟಗಳೂ ಇರಲಿಲ್ಲ. ಕಾರ್ಕಳದಲ್ಲಿ 7 ವರ್ಷದ ಮಗುವಿಗೆ, ಬೈಂದೂರಿನಲ್ಲಿ ಯುವತಿಯಬ್ಬರಿಗೆ ಕಿಡ್ನಿ ಸಮಸ್ಯೆ ಇದೆ. ಬಾರ್ಕೂರಿನಲ್ಲಿ ಈಚೆಗೆ ಬಾಲಕಿ ಕಾಯಿಲೆಯಿಂದ ಮೃತಪಟ್ಟಿದ್ದಾಳೆ.
ಬೈಂದೂರು ತಾಲ್ಲೂಕಿನ ನಾಡದಲ್ಲಿ ದುಶ್ಚಟ ಇಲ್ಲದ ಚಂದ್ರ ಕೊರಗ ಕರಳು ಸಂಬಂಧಿ ಕಾಯಿಲೆ, ಕಿಡ್ನಿ ವೈಫಲ್ಯ, ರಕ್ತ ಹೀನತೆ, ಕಾಮಾಲೆ, ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರಗರು ದುಶ್ಚಟಗಳಿಂದಲೇ ಕಾಯಿಲೆಗಳಿಗೆ ತುತ್ತಾಗಿ ಮೃತಪಡುತ್ತಿದ್ದಾರೆ ಎಂಬುದು ಆಧಾರ ರಹಿತ ಹಾಗೂ ಅವೈಜ್ಞಾನಿಕ.
ಉಡುಪಿ ಜಿಲ್ಲೆಯಲ್ಲಿ ಕೊರಗರ ಆರೋಗ್ಯ ಚಿಕಿತ್ಸೆಗೆ ಹಣ ಬಿಡುಗಡೆ ಮಾಡುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರೂ, ಹಿರಿಯ ಅಧಿಕಾರಿಗಳು ತಿರಸ್ಕಾರ ಮಾಡಿರುವುದು ಖಂಡನೀಯ. ಕಳೆದ ಮೂರು ವರ್ಷಗಳಲ್ಲಿ ಚಿಕಿತ್ಸೆ ಪಡೆದ ಕೊರಗ ಸಮುದಾಯದ ಶೇ 90ರಷ್ಟು ರೋಗಿಗಳಲ್ಲಿ ದುಶ್ಚಟಗಳು ಇಲ್ಲ ಎಂದು ಸಮಿತಿ ತಿಳಿಸಿದೆ.
ಕೊರಗ ಸಮುದಾಯದ ಜನಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದರೂ ಸರ್ಕಾರ ಸಮಗ್ರ ಅಧ್ಯಯನ ನಡೆಸದೆ ನಿರ್ಲಕ್ಷ್ಯ ತೋರಿದೆ. 2016 ರಿಂದ 2021ರವರೆಗೂ ಕೊರಗರಿಗೆ ನೀಡುತ್ತಿದ್ದ ಪಿವಿಟಿಜಿ ಅನುದಾನ ತಡೆಹಿಡಿಯಲಾಗಿದೆ. ಜಿಲ್ಲಾ ಪಂಚಾಯಿತಿಯ ಟಿಎಸ್‌ಪಿ ಅನುದಾನವೂ ಖಾಲಿಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯ ನಿಧಿ ತಡೆ ಹಿಡಿದಿರುವುದು ಸರ್ಕಾರದ ನಿರ್ಧಾರ ಅಮಾನವೀಯ.
ಕೊರಗರ ಜನಸಂಖ್ಯೆ ಕುಸಿತವಾಗುತ್ತಿರುವ ಬಗ್ಗೆ ಸಮಗ್ರ ಅಧ್ಯಯನ ತುರ್ತಾಗಿ ನಡೆಯಬೇಕು. ಸಮುದಾಯದ ಉಳಿವಿಗೆ ಆದ್ಯತೆ ನೀಡಬೇಕು. ಕೊರಗ ಸಮುದಾಯದ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದಿಲ್ಲ ಎಂಬ ಆದೇಶವನ್ನು ಸರ್ಕರ ತಕ್ಷಣ ಹಿಂಪಡೆಯಬೇಕುಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕಶ್ರೀಧರ ನಾಡ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.