ADVERTISEMENT

ಗೋವಿಂದ ಪೈ ಪ್ರಶಸ್ತಿಗೆ ಪ್ರೊ.ಅ.ಸುಂದರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:17 IST
Last Updated 8 ಸೆಪ್ಟೆಂಬರ್ 2020, 16:17 IST
ಪ್ರೊ.ಅ.ಸುಂದರ
ಪ್ರೊ.ಅ.ಸುಂದರ   

ಉಡುಪಿ: ಪ್ರೊ.ಅ. ಸುಂದರ ಅವರನ್ನುರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸೆ.12ರಂದು ಶಿವಮೊಗ್ಗದ ಅವರ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ವಿ. ಮೋಹನದಾಸ್ ಪೈ ಅವರು ತಾಯಿ ವಿಮಲಾ ಪೈ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದ್ದು, ಪುರಸ್ಕಾರ ₹ 1 ಲಕ್ಷ ನಗದು ಒಳಗೊಂಡಿದೆ.

ಪ್ರೊ.ಶ್ರೀನಿವಾಸ ರಿತ್ತಿ, ಪ್ರೊ.ಕೆ.ಎಸ್. ನಿಸಾರ್ ಅಹಮದ್, ಡಾ.ಬಿ. ಸುರೇಂದ್ರ ರಾವ್, ಪ್ರೊ.ಕೆ.ವಿ. ತಿರುಮಲೇಶ್, ಪ್ರೊ.ಅಮೃತ ಸೋಮೇಶ್ವರ ಅವರಿಗೆ ಹಿಂದೆ ಕೇಂದ್ರದಿಂದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ADVERTISEMENT

ಪ್ರಶಸ್ತಿ ಪುರಸ್ಕೃತರ ವಿವರ:ಉಡುಪಿಯ ನೀಲಾವರದ ಪ್ರೊ.ಅ. ಸುಂದರ ಪುರಾತತ್ತ್ವ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಧಾರವಾಡದ ಕರ್ನಾಟಕ ವಿವಿಯಲ್ಲಿ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರು, ಮುಖ್ಯಸ್ಥರೂ ಆಗಿದ್ದರು.

ಬಿಜಾಪುರದ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿ.ವಿ ಝಾಕೀರ್ ಹುಸೇನ್ ಪೀಠದ ಮುಖ್ಯಸ್ಥರಾಗಿ ಪ್ರಸ್ತುತ ಶಿವಮೊಗ್ಗದಲ್ಲಿ ವಾಸವಿದ್ದಾರೆ. ಪುರಾತತ್ತ್ವ ಶಾಸ್ತ್ರಜ್ಞರಾದ ಸುಂದರ ಅವರು ಹಲವು ಉತ್ಖನಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೆಳದಿ ಶಿವಪ್ಪ ನಾಯಕನ ಅರಮನೆಯ ಮರು ಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಪುರಾತತ್ವ ಶಾಸ್ತ್ರಜ್ಞರಾಗಿ ಅಂತರ ರಾಷ್ಟ್ರೀಯ ಖ್ಯಾತಿ ಪಡೆದ ಪ್ರೊ. ಸುಂದರ ಅವರು ಭಾರತದ ಮತ್ತು ವಿಶೇಷವಾಗಿ ಕರ್ನಾಟಕದ ಹಲವಾರು ಉತ್ಖನನಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತೇರದಾಳ, ಸನ್ನತಿ, ಮಲಪ್ರಭಾನದಿ ತೀರದ ಉತ್ಖನನಗಳ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.

ಸಾಂಸ್ಕೃತಿಕ ಪರಂಪರೆಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದ್ದು, ಕೆಳದಿ ಶಿವಪ್ಪ ನಾಯಕನ ಅರಮನೆಯ ಪುನರ್‌ ಸ್ಥಾಪನೆಯನ್ನು ಕಾಳಜಿಯಿಂದ ಕೈಗೆತ್ತಿಕೊಂಡಿದ್ದಾರೆ.

ರಾಕ್‌ ಆರ್ಟ್‌ಗಳ ಕುರಿತು ವಿಶೇಷ ಅಧ್ಯಯನ ಮಾಡಿ ‘ಅರ್ಲಿ ಚೇಂಬರ್ ಟಾಂಬ್‌ ಆಫ್‌ ಸೌತ್ ಇಂಡಿಯಾ’ ಕೃತಿ ರಚಿಸಿದ್ದಾರೆ. ಹಲವು ಪ್ರಾಗೈತಿಹಾಸಿಕ ನೆಲೆಗಳ ಕುರಿತು ಆಳವಾದ ಅಧ್ಯಯನ ಮಾಡಿ ಮುನ್ನೂರಕ್ಕೂ ಹೆಚ್ಚು ಮಹತ್ವದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ನೂರಾರು ವಿದ್ಯಾರ್ಥಿಗಳನ್ನು ಸಂಶೋಧನೆಗೆ ಸಿದ್ಧಗೊಳಿಸಿದ್ದಾರೆ. ಪ್ರಾಗೈತಿಹಾಸಿಕ ಕಾಲದಿಂದ ಇಂದಿನವರೆಗೆ ಭಾರತೀಯ ಇತಿಹಾಸ ಸಂಪುಟಗಳ ಪ್ರಕಾಶನದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.